ADVERTISEMENT

ಮಳೆ: ಧರೆಗುರುಳಿದ ಮರ

​ಪ್ರಜಾವಾಣಿ ವಾರ್ತೆ
Published 20 ಮೇ 2018, 19:30 IST
Last Updated 20 ಮೇ 2018, 19:30 IST

ಬೆಂಗಳೂರು: ನಗರದಲ್ಲಿ ಶನಿವಾರ ಮಧ್ಯರಾತ್ರಿ ಸುರಿದ ಮಳೆಗೆ ಬೈಯಪ್ಪನಹಳ್ಳಿ ಹಾಗೂ ದೊಡ್ಡಕಲ್ಲಸಂದ್ರದಲ್ಲಿ ಮರಗಳು ಧರೆಗುರುಳಿದರೆ, ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

ಬೈಯಪ್ಪನಹಳ್ಳಿಯ ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೊ ನಿಲ್ದಾಣದ ಸಮೀಪ ಎನ್‌.ಜಿ.ಇ.ಎಫ್‌ ಸಿಗ್ನಲ್‌ ಬಳಿ ಮರ ಬಿದ್ದಿದ್ದರಿಂದ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಸ್ಥಳಕ್ಕೆ ಬಂದ ಸಂಚಾರ ಠಾಣೆಯ ಪೊಲೀಸರು ಹಾಗೂ ಬಿಬಿಎಂಪಿ ಸಿಬ್ಬಂದಿ ಮರದ ಟೊಂಗೆಗಳನ್ನು ಕತ್ತರಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು. ಭಾನುವಾರವಾಗಿದ್ದರಿಂದ ವಾಹನ ದಟ್ಟಣೆ ಹೆಚ್ಚಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಐದೇ ನಿಮಿಷ ಸುರಿದ ಮಳೆಗೆ ಇಡೀ ರಾತ್ರಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದ್ದರಿಂದ ಬೆಸ್ಕಾಂ ವಿರುದ್ಧ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮಳೆ ಆರಂಭವಾಗುತ್ತಿದ್ದಂತೆವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತು. ಒಂದು ವಾರದಲ್ಲಿ ಇದು ಎರಡನೇ ಸಲ. ಈ ಬಗ್ಗೆ ದೂರು ನೀಡಲು ಬೆಸ್ಕಾಂ ನಿಯಂತ್ರಣ ಕೊಠಡಿಗೆ ಕರೆ ಮಾಡಿದರೆ ಚಾಲನೆಯಲ್ಲಿಲ್ಲ ಎನ್ನುವ ಸಂದೇಶ ಬರುತ್ತದೆ’ ಎಂದು ಎಲೆಕ್ಟ್ರಾನಿಕ್‌ ಸಿಟಿ ನಿವಾಸಿ ಸ್ಮೃತಿ ಶಾನಭಾಗ್‌ ಟ್ವಿಟರ್‌ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.

 ‘ವಿದ್ಯುತ್‌ ಇಲ್ಲದೇ ಇದ್ದ ಕಾರಣ ಇಡೀ ರಾತ್ರಿ ತೊಂದರೆ ಅನುಭವಿಸುವಂತಾಯಿತು. ನಾವು ತೆರಿಗೆ ಕಟ್ಟುತ್ತಿದ್ದೇವೆ. ಆದರೆ, ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಚಾರಕ್ಕೆ ತೊಂದರೆ: ಹತ್ತು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸಿ.ವಿ. ರಾಮನ್‌ ನಗರದ ವಿವಿಧೆಡೆ ಮರಗಳು ಬಿದ್ದಿವೆ.

‘ಕೇಂದ್ರೀಯ ವಿದ್ಯಾಲಯದ ಸಮೀಪ ರಸ್ತೆಯಲ್ಲಿ ಬಿದ್ದ ಮರದ ಟೊಂಗೆಗಳನ್ನು ತೆರವುಗೊಳಿಸಿ ಪಾದಚಾರಿ ಮಾರ್ಗದ ಮೇಲೆ ರಾಶಿ ಮಾಡಲಾಗಿದೆ. ಅವುಗಳನ್ನು ತೆರವುಗೊಳಿಸದೇ ಇರುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ’ ಎಂದು ನಿವಾಸಿ ಪವನ್‌ ಸಾಮಾಜಿಕ ಜಾಲತಾಣದ ಮೂಲಕ ಪೊಲೀಸರ ಗಮನಕ್ಕೆ ತಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.