ಬೆಂಗಳೂರು: ಕೃಷ್ಣರಾಜಸಾಗರ (ಕೆಆರ್ಎಸ್) ಅಣೆಕಟ್ಟೆಯಲ್ಲಿ ಕಾವೇರಿ ಬತ್ತಿದರೆ ಬೆಂಗಳೂರು ಬಾಯಾರುತ್ತದೆ. ಪ್ರತಿವರ್ಷ ಬೇಸಿಗೆಯಲ್ಲಿ ನಗರದ ದಾಹ ತಣಿಸಲು ಜಲಮಂಡಳಿ ಹೆಣಗುತ್ತಿದೆ.
ಮಳೆಗಾಲದಲ್ಲಿ ಜಾಣತನದಿಂದ ನೀರು ಸಂಗ್ರಹಿಸಿದರೆ ಬೇಸಿಗೆಯನ್ನು ಸುಲಭವಾಗಿ ನಿಭಾಯಿಸಬಹುದು ಎಂಬುದು ಜಲತಜ್ಞರ ಪ್ರತಿಪಾದನೆ. ನಗರದಲ್ಲಿ ಮಳೆ ನೀರು ಸಂಗ್ರಹ ಕಡ್ಡಾಯ ಗೊಳಿಸಿದ್ದರೂ, ಅದಿನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ. ಈ ಬಗ್ಗೆ ಆಗೊಮ್ಮೆ ಈಗೊಮ್ಮೆ ಎಚ್ಚರಿಕೆ ನೀಡುವ ಜಲಮಂಡಳಿ ಬಳಿಕ ಮೌನಕ್ಕೆ ಶರಣಾಗುತ್ತಿದೆ.
ನಗರದಲ್ಲಿ ಮಳೆ ನೀರಿನ ಸಂಗ್ರಹ ಕುರಿತಂತೆ ಜಾಗೃತಿ ಮೂಡದ ಕಾರಣ ಪ್ರತಿವರ್ಷ 23 ಟಿಎಂಸಿ ಅಡಿಯಷ್ಟು ಪರಿಶುದ್ಧ ನೀರು ವ್ಯರ್ಥವಾಗಿ ಚರಂಡಿ ಪಾಲಾಗುತ್ತಿದೆ. ಅಷ್ಟು ನೀರನ್ನು ಸಾಗಿಸುವ ಸಾಮರ್ಥ್ಯ ಚರಂಡಿಗಳಿಗೆ ಇಲ್ಲ. ಹಾಗಾಗಿ ಪ್ರವಾಹವೂ ಉಂಟಾಗುತ್ತಿದೆ.
ಬೆಂಗಳೂರಿನಲ್ಲಿ ವರ್ಷದ 60 ಮಳೆ ದಿನಗಳಲ್ಲಿ ಸರಾಸರಿ 1 ಸಾವಿರ ಮಿಲಿ ಮೀಟರ್ ಮಳೆ ಆಗುತ್ತದೆ. 2,400 ಚದರ ಅಡಿ ಜಾಗದಲ್ಲಿ 2.06 ಲಕ್ಷ ಲೀಟರ್ ಮಳೆ ನೀರನ್ನು ಸಂಗ್ರಹಿಸಲು ಸಾಧ್ಯವಿದೆ ಎಂಬುದು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‌ಸಿಎಸ್‌ಟಿ) ಜಲತಜ್ಞ ಪ್ರೊ.ಎ.ಆರ್. ಶಿವಕುಮಾರ್ ಸಲಹೆ.
ವ್ಯಕ್ತಿಯೊಬ್ಬ ದಿನಕ್ಕೆ 135 ಲೀಟರ್ ನೀರು ಉಪಯೋಗಿಸುತ್ತಾನೆ ಎಂದು ಪರಿಭಾವಿಸಿದರೆ, 4 ಜನರ ಒಂದು ಕುಟುಂಬ ವರ್ಷಕ್ಕೆ ಸರಾಸರಿ 2 ಲಕ್ಷ ಲೀಟರ್‌ನಷ್ಟು ನೀರನ್ನು ಬಳಸುತ್ತದೆ.
‘2,400 ಚದರ ಅಡಿ ಅಳತೆಯ ನಿವೇಶನದ ಮನೆಯಲ್ಲಿ ವಾಸಿಸುವ 4 ಜನರ ಸಾಧಾರಣ ಕುಟುಂಬವೊಂದಕ್ಕೆ ಬೇಕಾದಷ್ಟು ನೀರನ್ನು ಪ್ರಕೃತಿಯೇ ಧಾರಾಳವಾಗಿ ಕೊಡುತ್ತದೆ. ಸಂಗ್ರಹಿಸಿ, ಬಳಸುವ ಮನಸ್ಸು ನಮಗೆ ಬೇಕು ಅಷ್ಟೇ’ ಎಂದು ಅವರು ಹೇಳುತ್ತಾರೆ.
19 ಲಕ್ಷ ಕಟ್ಟಡಗಳು ನಗರದಲ್ಲಿವೆ. ಮಳೆ ನೀರನ್ನು ಸಮರ್ಪಕವಾಗಿ ಸಂಗ್ರಹ ಮಾಡಿದರೆ ಇಲ್ಲಿನ ನಿವಾಸಿಗಳು ಜಲಮಂಡಳಿಯನ್ನು ಅವಲಂಬಿಸುವ ಅಗತ್ಯವೇ ಇರುವುದಿಲ್ಲ. ರಾಜಧಾನಿಯಲ್ಲಿ 29 ಸಾವಿರ ಕಟ್ಟಡಗಳಲ್ಲಿ ಮಾತ್ರ ಮಳೆ ನೀರು ಸಂಗ್ರಹ ವ್ಯವಸ್ಥೆ ಇದೆ ಎಂಬುದು ಜಲಮಂಡಳಿ ಸಮೀಕ್ಷೆಯಿಂದ ಕಂಡುಬಂದಿದೆ.
ನೀರಿನ ಅಭಾವ ನೀಗಿಸಲು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸಲು ಪ್ರತಿ ಮನೆ ಹಾಗೂ ಕಟ್ಟಡಗಳಲ್ಲಿ ಮಳೆ ನೀರು ಕಡ್ಡಾಯವಾಗಿ ಸಂಗ್ರಹಿಸಬೇಕು ಎಂದು ರಾಜ್ಯ ಸರ್ಕಾರ ಎಂಟು ವರ್ಷಗಳ ಹಿಂದೆ ಕಾನೂನು ರೂಪಿಸಿತ್ತು.
2,400 ಚದರ ಅಡಿಯ ನಿವೇಶನದ ಹಳೆಯ ಕಟ್ಟಡಗಳಿಗೆ ಹಾಗೂ ಹೊಸದಾಗಿ ನಿರ್ಮಿಸುವ 1,200 ಚದರ ಅಡಿಯ ಮತ್ತು ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ಕಟ್ಟಡಗಳಲ್ಲಿ ಮಳೆ ನೀರು ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಜಲಮಂಡಳಿ 2009ರಲ್ಲಿ ಸೂಚಿಸಿತ್ತು.
ನಗರದಲ್ಲಿ 2,400 ಚದರ ಅಡಿ ಮತ್ತು ಅದಕ್ಕಿಂತ ಹೆಚ್ಚಿನ ಅಳತೆಯ 55 ಸಾವಿರ ಕಟ್ಟಡಗಳಿವೆ ಎಂದು ಜಲಮಂಡಳಿ ಗುರುತಿಸಿತ್ತು. 2011ರ ಡಿಸೆಂಬರ್ ತಿಂಗಳೊಳಗೆ ಈ ಎಲ್ಲ ಮನೆಗಳಲ್ಲಿ ಇದನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು 2009ರಲ್ಲಿ ಗಡುವು ವಿಧಿಸಲಾಗಿತ್ತು.
ಬಳಿಕ ಅದನ್ನು 2012ರ ಮೇ ತಿಂಗಳ ವರೆಗೆ ವಿಸ್ತರಿಸಲಾಗಿತ್ತು. ಮಳೆ ನೀರು ವ್ಯವಸ್ಥೆ ಇಲ್ಲದ ಕಟ್ಟಡಗಳ ನೀರಿನ ಸಂಪರ್ಕ ಕಡಿತ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಬಳಿಕ ಕಟ್ಟಡ ಮಾಲೀಕರ ಬಗ್ಗೆ ಮಂಡಳಿ ಮೃದು ಧೋರಣೆ ತಳೆದಿತ್ತು.
2016ರಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆಯ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. 2016ರ ಮೇ ತಿಂಗಳೊಳಗೆ ಮಳೆ ನೀರು ಸಂಗ್ರಹ ವ್ಯವಸ್ಥೆ ಹಾಕಿಕೊಳ್ಳಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ ಎಂದು ಜಲಮಂಡಳಿ ಮತ್ತೆ ಎಚ್ಚರಿಕೆ ನೀಡಿತ್ತು. ಬಳಿಕ ಆ ಗಡುವು ಅಕ್ಟೋಬರ್‌ವರೆಗೆ ವಿಸ್ತರಣೆಯಾಗಿತ್ತು. ಆ ಬಳಿಕ ದಂಡ ಹಾಕುವ ಪ್ರಕ್ರಿಯೆ ಆರಂಭಿಸಿ ಕಟ್ಟಡ ಮಾಲೀಕರಿಂದ ₹40 ಲಕ್ಷ ವಸೂಲಿ ಮಾಡಿದೆ.
ಈ ವ್ಯವಸ್ಥೆ ಇಲ್ಲದ ಮನೆಗಳಿಗೆ ಪ್ರತಿ ತಿಂಗಳೂ ಬಿಲ್ಲಿನಲ್ಲಿ ನೀರು ಮತ್ತು ಒಳಚರಂಡಿ ಶುಲ್ಕದ ಶೇ 25 ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಮೂರು ತಿಂಗಳ ಬಳಿಕವೂ ಅನುಷ್ಠಾನ ಮಾಡದೆ ಇದ್ದಲ್ಲಿ ಪ್ರತಿ ತಿಂಗಳೂ ಶೇ 50 ರಷ್ಟು ಹೆಚ್ಚಿನ ಶುಲ್ಕ ಹಾಕಲಾಗುತ್ತದೆ.
ಗೃಹೇತರ ಕಟ್ಟಡಗಳಾದರೆ ಮೊದಲ ಮೂರು ತಿಂಗಳು ಶೇ 50 ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆ. ಆನಂತರ ಅಳವಡಿಸಿಕೊಳ್ಳುವವರೆಗೆ ಶೇ 100 ರಷ್ಟು ಹೆಚ್ಚುವರಿ ಶುಲ್ಕ ತೆರಬೇಕಾಗುತ್ತದೆ.
‘ಮಳೆ ನೀರು ಸಂಗ್ರಹ ವ್ಯವಸ್ಥೆ ಬಗ್ಗೆ ಜನಜಾಗೃತಿ ಮೂಡಿಸಲು ಮಂಡಳಿ ಜಯನಗರ 5ನೇ ಹಂತದಲ್ಲಿ ₹5 ಕೋಟಿ ವೆಚ್ಚದಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಮಳೆ ನೀರು ಸಂಗ್ರಹ ಸುಗ್ಗಿ ಕೇಂದ್ರವನ್ನು ಆರಂಭಿಸಿದ್ದು, ಅಲ್ಲಿ ಪ್ರತಿ ತಿಂಗಳು ಸಾವಿರಾರು ಮಂದಿ ಮಾಹಿತಿ ಪಡೆಯುತ್ತಿದ್ದಾರೆ’ ಎಂದು ಮಂಡಳಿಯ ಪ್ರಧಾನ ಮುಖ್ಯ ಎಂಜಿನಿಯರ್ ಕೆಂಪರಾಮಯ್ಯ ತಿಳಿಸಿದರು.