ADVERTISEMENT

ಮಹಿಳಾ ಅಧಿಕಾರಿಗೆ ಅಶ್ಲೀಲ ವಿಡಿಯೊ ರವಾನೆ

ಕೊಡಿಗೆಹಳ್ಳಿ ಪೊಲೀಸರಿಂದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 15 ಮೇ 2019, 19:15 IST
Last Updated 15 ಮೇ 2019, 19:15 IST
   

ಬೆಂಗಳೂರು: ತಾನು ಸ್ನಾನ ಮಾಡುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು, ಅದನ್ನು ಮಹಿಳಾ ಅಧಿಕಾರಿಯೊಬ್ಬರ ಮೊಬೈಲ್‌ಗೆ ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದ ಪ್ರವೀಣ್ ಗಡಿಯಾರ್ ಎಂಬಾತನನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ವಿರುದ್ಧ ಆ ಅಧಿಕಾರಿ ಮೇ 12ರಂದು ಠಾಣೆಗೆ ದೂರು ಕೊಟ್ಟಿದ್ದರು. ಕರೆ ವಿವರ (ಸಿಡಿಆರ್) ಆಧರಿಸಿ ಪ್ರವೀಣ್‌ನನ್ನು ಬಂಧಿಸಿರುವ ಪೊಲೀಸರು, ನಾಪತ್ತೆಯಾಗಿರುವ ಮಲ್ಲಿಕ್ ಮಂದೇಶ್ ಹಾಗೂ ಚೇತನಾ ಎಂಬುವರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಪ್ರವೀಣ್, ಈ ಹಿಂದೆ ಸಂತ್ರಸ್ತೆಯ ಪತಿಯೊಂದಿಗೆ ವ್ಯವಹಾರದಲ್ಲಿ ಪಾಲುದಾರನಾಗಿದ್ದ. ಕ್ರಮೇಣ ಇಬ್ಬರ ನಡುವೆ ವೈಮನಸ್ಸು ಉಂಟಾಗಿದ್ದರಿಂದ ಅವರು ಆತನನ್ನು ದೂರ ಇಟ್ಟಿದ್ದರು. ಈ ಕಾರಣದಿಂದಲೇ ಅನುಚಿತವಾಗಿ ವರ್ತಿಸುತ್ತ ಆತ ದಂಪತಿಗೆ ಅಶ್ಲೀಲ ಸಂದೇಶಗಳನ್ನು ರವಾನಿಸುತ್ತಿದ್ದ.

ADVERTISEMENT

ಉಪಟಳ ಹೆಚ್ಚಾಗಿದ್ದರಿಂದ ಠಾಣೆ ಮೆಟ್ಟಿಲೇರಿದ ಸಂತ್ರಸ್ತ ಅಧಿಕಾರಿ, ‘ಪ್ರವೀಣ್‌ನ ವರ್ತನೆಯಿಂದ ನಮ್ಮ ಸಂಸಾರದಲ್ಲಿ ನೆಮ್ಮದಿ ಹಾಳಾಗುತ್ತಿದೆ. ಕೊಲೆ ಬೆದರಿಕೆಯನ್ನೂ ಹಾಕುತ್ತಿದ್ದಾನೆ. ಆತನ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ದೂರು ಕೊಟ್ಟಿದ್ದರು.

ಮನೆಗೆಲಸದವಳ ಕುಮ್ಮಕ್ಕು: ‘ದಂಪತಿ ಈ ಹಿಂದೆ ಮನೆಗೆಲಸಕ್ಕೆ ಸಹಾಯಕಿಯನ್ನು ಹುಡುಕುತ್ತಿದ್ದರು. ಆಗ ಪ್ರವೀಣ್‌ನೇ ಚೇತನಾ ಎಂಬ ಯುವತಿಯನ್ನು ಕೆಲಸಕ್ಕೆ ಸೇರಿಸಿದ್ದ. ಕೆಲವೇ ದಿನಗಳಲ್ಲಿ ಮನೆಯಿಂದ ಕೆಲ ವಸ್ತುಗಳು ಕಾಣೆಯಾಗಿದ್ದವು. ಚೇತನಾ ಕಳ್ಳತನ ಶುರು ಮಾಡಿದ್ದಾಳೆ ಎಂದು ಗೊತ್ತಾಗುತ್ತಿದ್ದಂತೆಯೇ ಆಕೆ ವಿರುದ್ಧ ದಂಪತಿ ಪೊಲೀಸರಿಗೆ ದೂರು ನೀಡಿದ್ದರು. ಕೆಲಸದಿಂದಲೂ ತೆಗೆದು ಹಾಕಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

ಚೇತನಾಳನ್ನು ಕೆಲಸದಿಂದ ತೆಗೆದು ಹಾಕಿದ ಹಾಗೂ ತನ್ನನ್ನೂ ವ್ಯವಹಾರದಿಂದ ದೂರ ಇಟ್ಟ ಕಾರಣಗಳಿಂದ ಕುಪಿತಗೊಂಡ ಪ್ರವೀಣ್, ದಂಪತಿಗೆ ಆಗಾಗ್ಗೆ ಕರೆ ಮಾಡಿ ತೊಂದರೆ ನೀಡಲು ಪ್ರಾರಂಭಿಸಿದ್ದ. ಅಶ್ಲೀಲ ಸಂದೇಶಗಳನ್ನೂ ರವಾನಿಸುತ್ತಿದ್ದ. ಮೇ 12ರಂದು ತಾನು ಸ್ನಾನ ಮಾಡುವಾಗ ವಿಡಿಯೊ ತೆಗೆದು, ಅದನ್ನೂ ಕಳುಹಿಸಿದ್ದ. ಈ ಕಾರಣಗಳಿಂದಾಗಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.