ಬೆಂಗಳೂರು: ನಗರದ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಳೆದ ಆರು ತಿಂಗಳಿಂದ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ!
ನಗರದಲ್ಲಿ 2004ರಲ್ಲಿ ಹಲಸೂರು ಗೇಟ್ ಮತ್ತು ಬಸವನಗುಡಿಯಲ್ಲಿ ಮಹಿಳಾ ಠಾಣೆಗಳನ್ನು ಸ್ಥಾಪಿಸಲಾಗಿದೆ. ಆದರೆ, ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದರೂ ಬಸವನಗುಡಿ ಮಹಿಳಾ ಠಾಣೆಯಲ್ಲಿ ಕಳೆದ ಆರು ತಿಂಗಳಿಂದ ಒಂದು ಪ್ರಕರಣವೂ ದಾಖಲಾಗಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳನ್ನು ವಿಚಾರಿಸಿದಾಗ `ಠಾಣೆಯಲ್ಲಿ ಮೂಲ ಸೌಕರ್ಯದ ಸಮಸ್ಯೆ, ಸಿಬ್ಬಂದಿ ಕೊರತೆಯಿದೆ. ಆ ಕಾರಣದಿಂದ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರು ಸಲ್ಲಿಸುವಂತೆ ಆದೇಶಿಸಲಾಗುತ್ತಿದೆ~ ಎಂಬ ಉತ್ತರ ಬರುತ್ತಿದೆ.
ಮಹಿಳಾ ಠಾಣೆಗಳು ನಿಷ್ಪ್ರಯೋಜಕವಾಗಿದ್ದು ಅವುಗಳನ್ನು ಮುಚ್ಚುವಂತೆ 2008ರಲ್ಲೇ ಅಂದಿನ ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ಅವರು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಆದರೆ, ಇದಕ್ಕೆ ಕೆಲವು ಮಹಿಳಾ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಸರ್ಕಾರ ಈ ಪ್ರಸ್ತಾವವನ್ನು ಕೈಬಿಟ್ಟಿತ್ತು.
ಹಲಸೂರು ಗೇಟ್ ಮಹಿಳಾ ಠಾಣೆಯಲ್ಲಿ ಅಂಜುಮಾಲ ಟಿ.ನಾಯಕ್ ಇನ್‌ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಬಸವನಗುಡಿ ಮಹಿಳಾ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಹುದ್ದೆಯೇ ಖಾಲಿ ಇದೆ. ಎಸ್‌ಐ ನೇತೃತ್ವದಲ್ಲೇ ಎಲ್ಲಾ ಕೆಲಸಗಳು ನಡೆಯಬೇಕಾಗಿದೆ. ನಿಯಮದ ಪ್ರಕಾರ ಠಾಣೆಯಲ್ಲಿ 24 ಕಾನ್‌ಸ್ಟೇಬಲ್‌ಗಳು ಇರಬೇಕಾಗಿತ್ತು. ಆದರೆ, ಇಲ್ಲಿ ಕೇವಲ 12 ಕಾನ್‌ಸ್ಟೇಬಲ್‌ಗಳು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಲ್ಲಿ ಇತ್ತೀಚೆಗೆ ನೇಮಕಗೊಂಡಿದ್ದ ಏಳು ಕಾನ್‌ಸ್ಟೇಬಲ್‌ಗಳು ಮಾರ್ಚ್ ತಿಂಗಳಿಂದ ತರಬೇತಿಗಾಗಿ ಧಾರವಾಡಕ್ಕೆ ಹೋಗಿದ್ದಾರೆ.
ಹೀಗಾಗಿ ಒಬ್ಬರು ಸಬ್‌ಇನ್‌ಸ್ಪೆಕ್ಟರ್, ಒಬ್ಬರು ಹೆಡ್‌ಕಾನ್‌ಸ್ಟೇಬಲ್ ಸೇರಿದಂತೆ ಕೇವಲ ಏಳು ಮಂದಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಮೂವರು ಬೇರೆ ಠಾಣೆಯಿಂದ ಇಲ್ಲಿಗೆ ನಿಯೋಜನೆಗೊಂಡವರು. ಈಗಿರುವ ಆ ಮೂರು ಮಂದಿಯನ್ನು ಯಾವಾಗ ಹಿಂಪಡೆಯುತ್ತಾರೋ ಎಂಬ ಆತಂಕವನ್ನು ಠಾಣೆಯ ಸಿಬ್ಬಂದಿ ವ್ಯಕ್ತಪಡಿಸಿದ್ದಾರೆ.
`ಎಸ್‌ಐ ವಿ.ರೇಣುಕಾ ಅವರು ಠಾಣೆಯ ಜವಾಬ್ದಾರಿ ಹೊತ್ತಿದ್ದು, ಹೆರಿಗೆ ರಜೆ ಮುಗಿಸಿಕೊಂಡು ಇತ್ತೀಚೆಗಷ್ಟೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅವರಿಗೆ ಒಂದು ಜೀಪನ್ನು ನೀಡಲಾಗಿದೆಯಾದರೂ ಅದಕ್ಕೆ ಚಾಲಕರನ್ನು ನಿಯೋಜಿಸಿಲ್ಲ. ಆದ್ದರಿಂದ ರೇಣುಕಾ ಅವರೇ ವಾಹನ ಚಾಲನೆ ಮಾಡಬೇಕಾಗಿದೆ~ ಎಂದು ಠಾಣೆಯ ಸಿಬ್ಬಂದಿ ಹೇಳಿದರು.
`ಬಸವನಗುಡಿ ಮಹಿಳಾ ಠಾಣೆಯಲ್ಲಿ ಸಿಬ್ಬಂದಿಯ ಕೊರತೆ ಇರುವುದರಿಂದ ಅಲ್ಲಿ ದೂರು ನೀಡುವ ಮಹಿಳೆಯರಿಗೆ ಸ್ಥಳೀಯ ಠಾಣೆಗಳಲ್ಲಿ ದೂರು ಸಲ್ಲಿಸುವಂತೆ ಸೂಚಿಸಲಾಗುತ್ತಿದೆ. ಈ ಠಾಣೆಯಲ್ಲಿ ಉಳಿದಿದ್ದ ಬ್ಯಾಕ್‌ಲಾಗ್ ಪ್ರಕರಣಗಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ~ ಎಂದು ದಕ್ಷಿಣ ವಿಭಾಗದ ಡಿಸಿಪಿ ಸೋನಿಯಾ ನಾರಂಗ್ `ಪ್ರಜಾವಾಣಿ~ಗೆ ತಿಳಿಸಿದರು.
ದೂರು ನೀಡಲು ಎಲ್ಲಿಗೆ ಹೋಗಬೇಕು?
`ಮಹಿಳೆಯರು ಹಲವು ರೀತಿಯಲ್ಲಿ ದೌರ್ಜನ್ಯಗಳಿಗೆ ಒಳಗಾಗುತ್ತಾರೆ. ಈ ಬಗ್ಗೆ ದೂರು ನೀಡಲು ಸ್ಥಳೀಯ ಠಾಣೆಗೆ ಹೋದಾಗ ಅಲ್ಲಿನ ಪುರುಷ ಸಿಬ್ಬಂದಿ ಮಹಿಳಾ ಠಾಣೆಗೆ ಹೋಗುವಂತೆ ತಿಳಿಸುತ್ತಾರೆ. ಆದರೆ, ಮಹಿಳಾ ಠಾಣೆಗಳಲ್ಲಿ ದೂರು ದಾಖಲಿಸಿಕೊಳ್ಳುತ್ತಿಲ್ಲ. ವೈಯಕ್ತಿಕ ಜೀವನ ಸೇರಿದಂತೆ ಯಾವುದೇ ಸಮಸ್ಯೆಗಳಿಗೆ ಸಂಬಂಧಿಸಿದ ದೂರುಗಳನ್ನು ಮಹಿಳೆಯರು ಮುಕ್ತವಾಗಿ ದಾಖಲಿಸಬೇಕು ಎಂಬ ಉದ್ದೇಶದಿಂದ ಮಹಿಳಾ ಠಾಣೆಗಳನ್ನು ಸ್ಥಾಪಿಸಲಾಗಿದೆ. ಆದರೆ, ನಗರದಲ್ಲಿ ಅವು ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದು ದುರಂತ~
- ಡೊನ್ನಾ ಫರ್ನಾಂಡಿಸ್, ವಿಮೋಚನಾ ಮಹಿಳಾ ಸಂಘಟನೆ
ಸಮಾಲೋಚನಾ ಕೇಂದ್ರವಾದ ಠಾಣೆ
ದೂರು ನೀಡಲು ಠಾಣೆಗೆ ಬರುವ ಮಹಿಳೆಯರಿಗೆ ನಿರಾಸೆ ಕಾದಿರುತ್ತದೆ. ಕಾರಣ ಠಾಣೆಯ ಸಿಬ್ಬಂದಿ ಯಾವುದೇ ಪ್ರಕರಣ ದಾಖಲಿಸಿಕೊಳ್ಳದೇ ಸಾಂತ್ವನದ ಮಾತನಾಡಿ ಕಳಿಸುತ್ತಿದ್ದಾರೆ. ಅಲ್ಲದೇ, ನಿಮ್ಮ ನಿವಾಸಕ್ಕೆ ಸಮೀಪದ ಠಾಣೆಗೆ ಹೋಗಿ ದೂರು ನೀಡಿ ಎಂದು ಹೇಳುತ್ತಾರೆ. ಕೌಟುಂಬಿಕ ಕಲಹ ಸಂಬಂಧ ದೂರು ನೀಡಲು ಠಾಣೆಗೆ ಬರುವ ಮಹಿಳೆ ಮತ್ತು ಆಕೆಯ ಕುಟುಂಬದವರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ. ಅಲ್ಲದೇ, ಯಾವುದೇ ದೂರು ನೀಡಬೇಡಿ ಎಂದು ಠಾಣೆಯ ಸಿಬ್ಬಂದಿ ಆ ಮಹಿಳೆಯನ್ನು ವಾಪಸ್ ಕಳುಹಿಸುತ್ತಾರೆ. ಈ ರೀತಿ ಬಸವನಗುಡಿ ಮಹಿಳಾ ಠಾಣೆ ಸಮಾಲೋಚನಾ ಕೇಂದ್ರದಂತೆ ಕಾರ್ಯ ನಿರ್ವಹಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.