ADVERTISEMENT

ಮಹಿಳಾ ಸಮಾನತೆ: ಆಶಯ ಪೂರ್ಣಗೊಂಡಿಲ್ಲ: ರಾಮಚಂದ್ರಗೌಡ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 19:30 IST
Last Updated 16 ಏಪ್ರಿಲ್ 2012, 19:30 IST

ಬೆಂಗಳೂರು: `ಪ್ರಸ್ತುತ ಸಮಾಜದಲ್ಲಿ ಮಹಿಳೆಯರ ಸಮಾನತೆಯ ಆಶಯದ ಪರಿಕಲ್ಪನೆ ಇನ್ನೂ ಸಂಪೂರ್ಣವಾಗಿ ಸಾಧ್ಯವಾಗಿಲ್ಲ~ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ರಾಮಚಂದ್ರಗೌಡ ವಿಷಾದಿಸಿದರು.
ನಗರದಲ್ಲಿ ಸೋಮವಾರ ನಡೆದ ಪ್ರಕೃತಿ ಮಹಿಳಾ ಸಮಾಜದ ದಶಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

`ರಾಜಕೀಯದಲ್ಲಿ ಮಹಿಳೆಯರಿಗೆ ಶೇಕಡ 33 ರಷ್ಟು ಮೀಸಲಾತಿ ಇನ್ನೂ ಸ್ಥಳೀಯ ಸಂಸ್ಥೆಗಳಿಗಷ್ಟೇ ಸೀಮಿತವಾಗಿದೆ. ಸಂಸತ್ತಿನ ರಾಜಕೀಯದಲ್ಲಿ ಸಮಾನತೆ ಮಹಿಳೆಯರಿಗೆ ಇನ್ನೂ ಸಾಧ್ಯವಾಗಿಲ್ಲ. ಮಹಿಳೆಯರ ಸಮಾನತೆಯು ಕೇವಲ ಬಾಯಿ ಮಾತಿಗಷ್ಟೇ ಸೀಮಿತಗೊಳ್ಳಬಾರದು~ ಎಂದು ಅವರು ನುಡಿದರು.

`ಹತ್ತು ವರ್ಷಗಳಿಂದ ಪ್ರಕೃತಿ ಮಹಿಳಾ ಸಮಾಜ ಮಹಿಳೆಯರ ಸಮಾನತೆಗಾಗಿ ಹೋರಾಡುತ್ತಾ ಬಂದಿದೆ. ಮಹಿಳೆಯರು ಸ್ವತಂತ್ರ್ಯ ಆಲೋಚನೆಗಳನ್ನು ಬೆಳೆಸಿಕೊಳ್ಳಲು ಮಹಿಳಾ ಸಮಾಜವು ತನ್ನ ಮಿತಿಯನ್ನು ಮೀರಿ ಕೆಲಸ ಮಾಡಿದೆ~ ಎಂದು ಅವರು ಶ್ಲಾಘಿಸಿದರು.

ಸಮಾರಂಭದಲ್ಲಿ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಸಂಸ್ಥೆಯ ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮೀ ದೇಶಮಾನೆ, ಕತ್ರಿಗುಪ್ಪೆ ವಾರ್ಡ್‌ನ ಬಿಬಿಎಂಪಿ ಸದಸ್ಯ ಡಿ.ವೆಂಕಟೇಶಮೂರ್ತಿ ಮತ್ತಿತರರನ್ನು ಸನ್ಮಾನಿಸಲಾಯಿತು. ಮಹಿಳಾ ಸಮಾಜದ ದಶಮಾನೋತ್ಸವದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ನಂತರ ಮಹಿಳಾ ಸಮಾಜದ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮನಡೆದವು. ಪ್ರಕೃತಿ ಮಹಿಳಾ ಸಮಾಜದ ಅಧ್ಯಕ್ಷೆ ಸೇವಂತಿ ಎಂ. ಹೆಗಡೆ, ಕಾರ್ಯದರ್ಶಿ ಡಿ.ಅಂಬುಜಾ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.