ADVERTISEMENT

ಮಹಿಳೆ ಕೊಲೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 19:30 IST
Last Updated 11 ಅಕ್ಟೋಬರ್ 2012, 19:30 IST

ಬೆಂಗಳೂರು: ಬಸವೇಶ್ವರನಗರ ಬಳಿಯ ಕೆಎಚ್‌ಬಿ ಕಾಲೊನಿಯಲ್ಲಿ ಮಂಗಳವಾರ ನಡೆದಿದ್ದ ಸುಜಾತಾ (37) ಅವರ ಕೊಲೆ ಪ್ರಕರಣವನ್ನು ಘಟನೆ ನಡೆದ 24 ತಾಸುಗಳಲ್ಲಿ ಭೇದಿಸಿರುವ ಕಾಮಾಕ್ಷಿಪಾಳ್ಯ ಪೊಲೀಸರು ಕೃಷ್ಣಮೂರ್ತಿ (33) ಎಂಬ ಆರೋಪಿಯನ್ನು ಬಂಧಿಸಿದ್ದಾರೆ.

`ಬಸವೇಶ್ವರನಗರ ಮೂರನೇ ಬ್ಲಾಕ್ ನಿವಾಸಿಯಾದ ಕೃಷ್ಣಮೂರ್ತಿ ಗ್ಯಾರೇಜ್ ಇಟ್ಟುಕೊಂಡಿದ್ದ. ಆತ ಸುಜಾತಾ ಅವರ ಮನೆಯಿಂದ ದೋಚಿಕೊಂಡು ಹೋಗಿದ್ದ 600 ಗ್ರಾಂ ಚಿನ್ನಾಭರಣ, ಎರಡು ಕೆ.ಜಿ ಬೆಳ್ಳಿ ವಸ್ತುಗಳು ಮತ್ತು 35 ಸಾವಿರ ನಗದನ್ನು ಜಪ್ತಿ ಮಾಡಲಾಗಿದೆ~ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೃಷ್ಣಮೂರ್ತಿ ನಾಲ್ಕೈದು ತಿಂಗಳುಗಳ ಹಿಂದೆ ಸುಜಾತಾ ದಂಪತಿಗೆ ಪರಿಚಿತನಾಗಿದ್ದ. ಆತನೇ ದಂಪತಿಯ ಬೈಕ್‌ಗಳನ್ನು ಸರ್ವಿಸ್ ಮಾಡಿಕೊಡುತ್ತಿದ್ದ. ದಂಪತಿಯ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದ ಆತ, ಮನೆಯಲ್ಲಿ ಸಾಕಷ್ಟು ಚಿನ್ನಾಭರಣ ಮತ್ತು ಹಣ ಇರುವುದನ್ನು ತಿಳಿದುಕೊಂಡಿದ್ದ.

ಈ ನಡುವೆ ಮೀನು ವ್ಯಾಪಾರ ಆರಂಭಿಸಿ ಸಾಕಷ್ಟು ನಷ್ಟ ಅನುಭವಿಸಿದ್ದ. ಸುಮಾರು 12 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ ಆತ, ಸಾಲ ತೀರಿಸುವ ಉದ್ದೇಶಕ್ಕಾಗಿ ಈ ಕೊಲೆ ಮಾಡಿ ಚಿನ್ನಾಭರಣ ಹಾಗೂ ಹಣ ದೋಚಿದ್ದ ಎಂದು ಮಿರ್ಜಿ ಮಾಹಿತಿ ನೀಡಿದರು.

`ಕೊಲೆಯ ಸ್ವರೂಪ ಹಾಗೂ ಕೊಲೆಯಾದ ದಿನ ಘಟನಾ ಸ್ಥಳದಲ್ಲಿ ದೊರೆತ ಸಾಂದರ್ಭಿಕ ಸಾಕ್ಷ್ಯಗಳು ಪರಿಚಿತ ವ್ಯಕ್ತಿಗಳೇ ಈ ಕೃತ್ಯ ಎಸಗಿದ್ದಾರೆ ಎಂಬ ಸುಳಿವು ನೀಡಿದ್ದವು. ಈ ಸುಳಿವು ಆಧರಿಸಿ ದಂಪತಿಯ ಮನೆಗೆ ಬಂದು ಹೋಗುತ್ತಿದ್ದ ವ್ಯಕ್ತಿಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಪ್ರಕರಣ ಭೇದಿಸಲಾಯಿತು~ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ ಹೇಳಿದರು.

ನೆರೆಹೊರೆಯವರಿಂದ ಮಾಹಿತಿ: ದೀಪಾ ಎಂಬುವರನ್ನು ವಿವಾಹವಾಗಿದ್ದ ಕೃಷ್ಣಮೂರ್ತಿಗೆ ಇಬ್ಬರು ಗಂಡು ಮಕ್ಕಳು. ಆತ, ಪತ್ನಿಯ ಪೋಷಕರ ಆಭರಣಗಳನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ಸಾಲ ಪಡೆದುಕೊಂಡಿದ್ದ. ಆ ಆಭರಣಗಳನ್ನು ಬಿಡಿಸಿಕೊಡುವಂತೆ ದೀಪಾ ಪೋಷಕರು ಒತ್ತಾಯಿಸುತ್ತಿದ್ದರು. ಆಭರಣಗಳನ್ನು ಬಿಡಿಸಿಕೊಳ್ಳಲು ಬೇಕಿದ್ದ ಹಣಕ್ಕಾಗಿ ಆತ ಈ ಕೊಲೆ ಮಾಡಿದ್ದಾನೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಆರೋಪಿ ಬೇರೊಬ್ಬ ಮಹಿಳೆಯ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಕೊಲೆ ಮಾಡಿದ ನಂತರ ಆತ ಆಭರಣಗಳನ್ನು ತನ್ನ ಮನೆಯಲ್ಲಿಟ್ಟು ಬಳಿಕ ಆ ಮಹಿಳೆಯ ಮನೆಗೆ ಹೋಗಿ ನೆಲೆಸಿದ್ದ. ಕೊಲೆ ನಡೆದ ದಿನ ಕೃಷ್ಣಮೂರ್ತಿ ಬೈಕ್‌ನಲ್ಲಿ ಸುಜಾತಾ ಅವರ ಮನೆಯ ಬಳಿ ಬಂದಿದ್ದನ್ನು ನೋಡಿದ್ದ ನೆರೆಹೊರೆಯವರು, ಆ ಬಗ್ಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆತನ ಚಲನವಲನಗಳ ಬಗ್ಗೆ ನಿಗಾ ಇಟ್ಟು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂತು ಎಂದು ಪೊಲೀಸರು ತಿಳಿಸಿದ್ದಾರೆ.
 

ADVERTISEMENT

ಅಪರಿಚಿತರನ್ನು ಮನೆಗೆ ಸೇರಿಸಬೇಡಿ: `ಮನೆಗಳಲ್ಲಿ ಒಬ್ಬಂಟಿಯಾಗಿರುವ ಮಹಿಳೆಯರು ಅಪರಿಚಿತ ವ್ಯಕ್ತಿಗಳನ್ನು ಮನೆಗೆ ಸೇರಿಸಬಾರದು. ಮನೆಗಳಿಗೆ ಬರುವ ಅಪರಿಚಿತ ವ್ಯಕ್ತಿಗಳು ಚಿನ್ನಾಭರಣ ಹಾಗೂ ಹಣಕ್ಕಾಗಿ ಕೊಲೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಆದ ಕಾರಣ ಮಹಿಳೆಯರು ಈ ಬಗ್ಗೆ ಎಚ್ಚರದಿಂದಿರಬೇಕು.

ಸಾರ್ವಜನಿಕರು ಚಿನ್ನಾಭರಣ ಮತ್ತು ಹೆಚ್ಚಿನ ಹಣವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಆಭರಣಗಳು ಹಾಗೂ ಹಣವನ್ನು ಸಾಧ್ಯವಾದಷ್ಟು ಬ್ಯಾಂಕ್ ಲಾಕರ್‌ಗಳಲ್ಲಿ ಇಡಬೇಕು~ ಎಂದು ಮಿರ್ಜಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.