ADVERTISEMENT

ಮಹಿಳೆ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಮಚ್ಚಿನಿಂದ ಕೊಚ್ಚಿ ಮಹಿಳೆಯೊಬ್ಬರನ್ನು ಕೊಲೆ ಮಾಡಿದ ವ್ಯಕ್ತಿ ಅದೇ ಮಚ್ಚಿನಿಂದ ಹೊಡೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಾಡುಗೋಡಿಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ಚಿಕ್ಕಬಾನಹಳ್ಳಿ ನಿವಾಸಿಯಾಗಿದ್ದ ಪದ್ಮಮ್ಮ (38) ಕೊಲೆಯಾದವರು. ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಆನಂದಪ್ಪನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆನಂದಪ್ಪ ಸಿದ್ಧ ಉಡುಪು ಕಾರ್ಖಾನೆಯಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದ. ಪದ್ಮಮ್ಮ ಸಹ ಅದೇ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದರು. ಕೆಲ ದಿನಗಳಿಂದ ಅವರಿಬ್ಬರು ಒಟ್ಟಿಗೆ ವಾಸಿಸುತ್ತಿದ್ದರು. ಪದ್ಮಮ್ಮ ಅವರ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿದ ಆತ ಬೆಳಿಗ್ಗೆ ಮಚ್ಚಿನಿಂದ ಹಲ್ಲೆ ನಡೆಸಿದ.

ತೀವ್ರವಾಗಿ ಗಾಯಗೊಂಡ ಅವರು ಕುಸಿದು ಬಿದ್ದ ನಂತರ ಆತ ಮಚ್ಚಿನಿಂದ ಹೊಡೆದುಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಪದ್ಮಮ್ಮ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಆನಂದಪ್ಪನಿಗೂ ಇಬ್ಬರು ಮಕ್ಕಳಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರೋಡೆ

ಐದು ಮಂದಿ ದುಷ್ಕರ್ಮಿಗಳು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ದರೋಡೆ ಮಾಡಿರುವ ಘಟನೆ ಕಾಮಾಕ್ಷಿಪಾಳ್ಯ ಸಮೀಪದ ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.ಕುಮಾರ್ ದರೋಡೆಗೊಳಗಾದವರು.

ಕುರುಬರಹಳ್ಳಿ ನಿವಾಸಿಯಾದ ಅವರು ಪಶ್ಚಿಮ ಕಾರ್ಡ್ ರಸ್ತೆಯಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ಅವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಏಕಾಏಕಿ ಹಲ್ಲೆ ನಡೆಸಿ 15 ಗ್ರಾಂ ತೂಕದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮಗು ಸಾವು
ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ಒಂದೂವರೆ ವರ್ಷದ ಹೆಣ್ಣು ಮಗುವೊಂದು ಚಪ್ಪಡಿ ಕಲ್ಲಿನ ಮೇಲೆ ಬಿದ್ದು ಗಾಯಗೊಂಡು ಸಾವನ್ನಪ್ಪಿದ ದಾರುಣ ಘಟನೆ ಸುಬ್ರಹ್ಮಣ್ಯಪುರ ಸಮೀಪದ ಅರೆಹಳ್ಳಿಯಲ್ಲಿ ಸೋಮವಾರ ನಡೆದಿದೆ.

ಅರೆಹಳ್ಳಿಯ ಗಣಪತಿ ರಸ್ತೆ ನಿವಾಸಿ ಮುನಿಯನ್ ಎಂಬುವರ ಪುತ್ರಿ ವೆಳ್ಳಿ ಮೃತಪಟ್ಟ ಮಗು. ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ಮಗು ವೆಳ್ಳಿ ಆಯತಪ್ಪಿ ಚಪ್ಪಡಿ ಕಲ್ಲಿನ ಮೇಲೆ ಬಿದ್ದ ಪರಿಣಾಮ ತಲೆಗೆ ಪೆಟ್ಟಾಗಿ ತೀವ್ರ ರಕ್ತ ಸ್ರಾವವಾಯಿತು.

ಅಸ್ವಸ್ಥಗೊಂಡಿದ್ದ ಮಗುವನ್ನು ನಿಮ್ಹಾನ್ಸ್‌ಗೆ ದಾಖಲಿಸಲಾಗಿತ್ತು. ಆದರೆ ಮಧ್ಯಾಹ್ನದ ವೇಳೆಗೆ ಮಗು ಮೃತಪಟ್ಟಿತು ಎಂದು ಪೊಲೀಸರು ತಿಳಿಸಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.