ಬೆಂಗಳೂರು: ವಿವಾಹಪೂರ್ವ ಔತಣಕ್ಕೆ ಮಾಂಸದ ಬಿರಿಯಾನಿ ಮಾಡಿಸಲಿಲ್ಲ ಎಂಬ ಕಾರಣಕ್ಕೆ ಮದುವೆಯೊಂದು ಮುರಿದು ಬಿದ್ದಿದೆ. ದುಬೈನಲ್ಲಿ ಉದ್ಯೋಗದಲ್ಲಿರುವ ನಗರದ ಕಾಡುಗೊಂಡನಹಳ್ಳಿಯ ಸೈಫುಲ್ಲಾ ಮದುವೆ ಯಾಸ್ಮಿನಾ ತಾಜ್ ಎಂಬುವರ ಜತೆ ಸೋಮವಾರ (ಮಾ.10) ನಿಶ್ಚಯವಾಗಿತ್ತು.
ಶುಕ್ರವಾರ ನಡೆದ ವಿವಾಹಪೂರ್ವ ಔತಣಕ್ಕೆ ಮಾಂಸದ ಬಿರಿಯಾನಿ ಮಾಡಿಸುವಂತೆ ವರನ ಕಡೆಯವರು ಹೇಳಿದ್ದರು. ಆದರೆ, ವಧುವಿನ ಕಡೆಯವರು ಕೋಳಿ ಬಿರಿಯಾನಿ ಮಾಡಿಸಿದ್ದರು. ಇದರಿಂದ ಅಸಮಾಧಾನಗೊಂಡ ವರನ ಕಡೆಯವರು ತಗಾದೆ ತೆಗೆದಿದ್ದಾರೆ.
ಮಾಂಸದ ಬಿರಿಯಾನಿ ಮಾಡಿಸದೆ ಸಂಬಂಧಿಕರ ಎದುರು ಅವಮಾನ ಮಾಡಿದ್ದೀರಿ ಎಂದು ಸೈಫುಲ್ಲಾ ಕುಟುಂಬದವರು ವಧುವಿನ ಪೋಷಕರ ವಿರುದ್ಧ ಆರೋಪ ಮಾಡಿದ್ದಾರೆ. ಆದರೆ, ಅಡುಗೆಯ ವಿಷಯಕ್ಕೆ ಇಷ್ಟೆಲ್ಲಾ ರಾದ್ಧಾಂತ ಮಾಡಿರುವ ವರನ ಪೋಷಕರು ಮದುವೆ ಬಳಿಕ ತನ್ನನ್ನು ಚೆನ್ನಾಗಿ ನೋಡಿಕೊಳ್ಳುವುದು ಅನುಮಾನ ಎಂದು ವದು ಯಾಸ್ಮಿನ್ ಆರೋಪಿಸಿ ಮದುವೆಗೆ ಅಸಮ್ಮತಿ ಸೂಚಿಸಿದ್ದಾರೆ.
ಪ್ರಕರಣ ಸಂಬಂಧ ಎರಡೂ ಕುಟುಂಬದವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪೊಲೀಸರು ನಡೆಸಿದ ರಾಜೀ ಸಂಧಾನವೂ ವಿಫಲವಾಗಿದೆ. ಎರಡೂ ಕುಟುಂಬಗಳು ಮದುವೆಗಾಗಿ ನೀಡಿದ್ದ ಉಡುಗೊರೆಗಳನ್ನು ಪರಸ್ಪರ ಹಿಂದಿರುಗಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.