ADVERTISEMENT

ಮಾಗಡಿ ರಸ್ತೆ ರೂಪ ಬದಲಿಸಿದ ಮೆಟ್ರೊ

​ಪ್ರಜಾವಾಣಿ ವಾರ್ತೆ
Published 16 ಜನವರಿ 2011, 20:30 IST
Last Updated 16 ಜನವರಿ 2011, 20:30 IST

ಬೆಂಗಳೂರು: ಹಳ್ಳಬಿದ್ದ, ಕಿತ್ತು ಬಂದ, ಜಲ್ಲಿಕಲ್ಲಿನಿಂದ ಕೂಡಿರುವ, ಅಲ್ಲಲ್ಲಿ ಬಿರುಕು ಬಿಟ್ಟಿರುವ, ಕೆಸರುಗುಂಡಿಯಂತಹ ರಸ್ತೆ. ದೂಳುಮಯ ವಾತಾವರಣ. ಇದು ಮಾಗಡಿ ರಸ್ತೆಯ ಸದ್ಯದ ‘ರೂಪ’. ಮಾಗಡಿ ರಸ್ತೆಯಲ್ಲಿ ಮೆಟ್ರೊ ಕಾಮಗಾರಿ ಆರಂಭವಾದ ನಂತರ ಈ ಭಾಗದ ಜನರಿಗೆ ನೆಮ್ಮದಿ ಇಲ್ಲದಂತಾಗಿದೆ.

ನಗರದ ಕುಷ್ಠರೋಗ ಆಸ್ಪತ್ರೆಯಿಂದ ಮಾಗಡಿ ರಸ್ತೆಯ ಟೋಲ್‌ಗೇಟ್‌ವರೆಗಿನ ಸಂಚಾರ ನಿಜಕ್ಕೂ ಸವಾಲೇ ಸರಿ. ವರ್ಷದಿಂದೀಚೆಗೆ ಆರಂಭವಾದ ಮೆಟ್ರೊ ಕಾಮಗಾರಿಯಿಂದ ಸ್ಥಳೀಯರು ಪರದಾಡುವಂತಾಗಿದೆ.

ಮಾಗಡಿ ರಸ್ತೆಯಲ್ಲಿ ಈ ಹಿಂದೆಯೇ ವಾಹನ ಸಂಚಾರ ತೀವ್ರವಾಗಿದ್ದು, ಟ್ರಾಫಿಕ್ ಜಾಮ್ ಮಾಮೂಲಿ ಎನಿಸಿತ್ತು. ರಸ್ತೆ ವಿಭಜಕವಿಲ್ಲದ ಕಾರಣ ವಾಹನಗಳು ಅಡ್ಡಾದಿಡ್ಡಿಯಾಗಿ ಚಲಿಸಿ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಇದೀಗ ಮೆಟ್ರೊ ಕಾಮಗಾರಿಗಾಗಿ ರಸ್ತೆಯ ಮಧ್ಯಭಾಗದಲ್ಲೇ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಪರಿಣಾಮವಾಗಿ ಸಂಚಾರ ದಟ್ಟಣೆ ತೀವ್ರವಾಗಿದೆ.

ADVERTISEMENT

ಹದಗೆಟ್ಟ ರಸ್ತೆ: ಕಾಮಗಾರಿ ಆರಂಭವಾದ ಬಳಿಕ ಯಾವುದೇ ರೀತಿಯ ನಿರ್ವಹಣೆ ಕೈಗೊಳ್ಳದಿರುವುದನ್ನು ರಸ್ತೆಯ ಸ್ಥಿತಿಯೇ ಹೇಳುತ್ತದೆ. ಹತ್ತು ಅಡಿ ಅಂತರಕ್ಕೂ ಗುಂಡಿಗಳು ಎದುರಾಗುತ್ತವೆ. ಅಲ್ಲಲ್ಲಿ ಭಾರಿ ಕಲ್ಲುಗಳು. ಸ್ವಲ್ಪ ಆಯತಪ್ಪಿದ್ದರೂ ಅಪಘಾತ ಖಚಿತ.

ಅಲ್ಲದೇ ರಸ್ತೆಯ ಎರಡೂ ಬದಿಯಲ್ಲೂ ಕೇವಲ ಒಂದು ಬಸ್ ಮಾತ್ರ ಚಲಿಸುವಷ್ಟು ಸ್ಥಳಾವಕಾಶವಿದೆ. ಅಲ್ಲಲ್ಲಿ ರಸ್ತೆಬದಿಯ ವಿದ್ಯುತ್ ಕಂಬಗಳಿಗೆ ತಾಗಿಸಿಕೊಂಡೇ ಬಸ್ಸುಗಳು ಚಲಿಸುವುದು ಸಾಮಾನ್ಯ. ಎರಡೂ ದಿಕ್ಕಿನಿಂದ ಬಸ್ಸುಗಳು ಬಂದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತದೆ. ಬಳಿಕ ಪರಿಸ್ಥಿತಿ ಸುಧಾರಿಸಲು ಬಹಳ ಸಮಯ ಬೇಕಾಗುತ್ತದೆ.

ಇದೇ ರಸ್ತೆಯಲ್ಲಿ ಹಾದು ಹೋಗಿರುವ ರಾಜಕಾಲುವೆಗೆ ನಿರ್ಮಿಸಿರುವ ಸೇತುವೆಯ ಬಳಿ ಜಲ್ಲಿಯನ್ನು ಮನಬಂದಂತೆ ಹರಡಲಾಗಿದೆ. ಇದರಿಂದ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿದೆ ಎನ್ನುತ್ತಾರೆ ಸ್ಥಳೀಯರು.

ದೂಳುಮಯ ವಾತಾವರಣ: ಇನ್ನು ರಸ್ತೆಬದಿಯ ಪ್ರತಿಯೊಂದು ಕಟ್ಟಡದ ಇಂಚು ಜಾಗವನ್ನು ಬಿಡದಂತೆ ದೂಳು ಆವರಿಸಿದೆ. ರಸ್ತೆಯ ಹಲವೆಡೆ ಸಾಕಷ್ಟು ಮಣ್ಣು- ಮರಳು ಹರಡಿದ್ದು, ವಿಪರೀತ ದೂಳು ಏಳುತ್ತದೆ. ಇದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಆಟೊ ಚಾಲಕರು, ಪ್ರಯಾಣಿಕರು ಅನುಭವಿಸುವ ತೊಂದರೆ ಅಷ್ಟಿಷ್ಟಲ್ಲ.

ಇದರಿಂದ ಬೇಸತ್ತ ಅಂಗಡಿ ಮಾಲೀಕರು ತಮ್ಮ ಮಳಿಗೆಗಳಿಗೆ ಗಾಜಿನ ತಡೆಗೋಡೆ, ಬಾಗಿಲುಗಳನ್ನು ಅಳವಡಿಕೊಂಡಿದ್ದಾರೆ. ದಿನಕ್ಕೆ ಎರಡು ಬಾರಿ ಮೆಟ್ರೊ ವತಿಯಿಂದ ಟ್ಯಾಂಕರ್ ಮೂಲಕ ನೀರು ಹಾಯಿಸಲಾಗುತ್ತಿದೆ. ಆದರೆ ನೀರು ಹಾಯಿಸಿದ ಸ್ವಲ್ಪ ಸಮಯದ ಬಳಿಕ ಮತ್ತೆ ದೂಳು ಏಳಲಾರಂಭಿಸುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ವಾಹನ ದಟ್ಟಣೆಯಿಂದ ಜನತೆ ತೊಂದರೆ ಅನುಭವಿಸುತ್ತಿದ್ದರೂ ಸಂಚಾರ ನಿಯಂತ್ರಣಕ್ಕೆ ಸಂಚಾರ ಪೊಲೀಸರನ್ನು ನಿಯೋಜಿಸಿಲ್ಲ. ಇದರಿಂದ ವಾಹನಗಳು ಅಡ್ಡಾದಿಡ್ಡಿಯಾಗಿ ಚಲಿಸುವುದು ಮುಂದುವರಿದಿದೆ.

ಜಲಮಂಡಳಿ ಕೊಳವೆ ಅಡ್ಡಿ: ಮಾಗಡಿ ರಸ್ತೆಯಲ್ಲಿ ನೆಲ ಮಟ್ಟದ ಜಲ ಸಂಗ್ರಹಾಗಾರವಿದೆ. ಈ ಸಂಗ್ರಹಾಗಾರಕ್ಕೆ ಸಂಪರ್ಕ ಹೊಂದಿರುವ ನೀರಿನ ಕೊಳವೆ ಮಾಗಡಿ ರಸ್ತೆಯಲ್ಲಿ ಹಾದು ಹೋಗಿದೆ. ಆದರೆ ಈವರೆಗೆ ಕೊಳವೆ ಸ್ಥಳಾಂತರಗೊಳ್ಳದ ಕಾರಣ ಒಂದು ಭಾಗದಲ್ಲಿ ಕಾಮಗಾರಿ ಸ್ಥಗಿತಗೊಂಡಿದೆ. ಕೊಳವೆ ಸ್ಥಳಾಂತರವಾದ ನಂತರಷ್ಟೇ ಕಾಮಗಾರಿಗೆ ಚುರುಕುಗೊಳ್ಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.