ADVERTISEMENT

ಮಾತೃ ಭಾಷೆಗೆ ಆದ್ಯತೆ ನೀಡಿ: ಪ್ರೊ. ರಮಾಕಾಂತ್ ಅಗ್ನಿಹೋತ್ರಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 19:30 IST
Last Updated 14 ಫೆಬ್ರುವರಿ 2012, 19:30 IST

ಬೆಂಗಳೂರು: `ಮಕ್ಕಳ ಸಾಮರ್ಥ್ಯ ಅರಿತು ಅವರ ಮಾತೃ ಭಾಷೆಗೂ ಪ್ರಾಮುಖ್ಯತೆ ನೀಡಿ ಇಂಗ್ಲಿಷ್ ಬೋಧಿಸಿದರೆ ಕಲಿಕೆ ಸುಲಭವಾಗುತ್ತದೆ~ ಎಂದು ದೆಹಲಿ ವಿಶ್ವವಿದ್ಯಾಲಯದ ನಿವೃತ್ತ ಭಾಷಾ ಪ್ರಾಧ್ಯಾಪಕ ಪ್ರೊ.ರಮಾಕಾಂತ್ ಅಗ್ನಿಹೋತ್ರಿ ಹೇಳಿದರು.

ಇಂಗ್ಲಿಷ್ ಪ್ರಾದೇಶಿಕ ಸಂಸ್ಥೆಯು (ದಕ್ಷಿಣ ವಿಭಾಗ) ನಗರದ ಜ್ಞಾನಭಾರತಿ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ `ದ್ವಿತೀಯ ಭಾಷೆ ಮತ್ತು ಶಿಕ್ಷಕರ ಶಿಕ್ಷಣ, ಸವಾಲುಗಳು~ ವಿಷಯ ಕುರಿತ ಅಖಿಲ ಭಾರತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

`ಶಾಲೆಯಲ್ಲಿ ಇರುವ ಎಲ್ಲ ಮಕ್ಕಳ ಮಾತೃ ಭಾಷೆಯನ್ನೂ ಮುಖ್ಯ ಎಂದು ಶಿಕ್ಷಕರು ಭಾವಿಸಬೇಕು. ಅವರ ಭಾಷೆಗೂ ಪ್ರಾಮುಖ್ಯತೆ ನೀಡಬೇಕು. ವಿದ್ಯಾರ್ಥಿಯೊಬ್ಬ ಇಂಗ್ಲಿಷ್ ಪ್ರಶ್ನೆಗೆ ತನ್ನ ಭಾಷೆಯಲ್ಲಿ ಉತ್ತರಿಸಿದಾಗ ಆತನನ್ನು ಕಡೆಗಣಿಸಬಾರದು. ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಪರಿಗಣನೆಗೆ ತೆಗೆದುಕೊಂಡು ಬೋಧಿಸಬೇಕು~ ಎಂದು ಅವರು ಸಲಹೆ ನೀಡಿದರು.

ಹಳ್ಳಿಯ ಮಕ್ಕಳಿಗೆ ಹೇಗೆ ಇಂಗ್ಲಿಷ್ ಬೋಧಿಸಬೇಕು ಎಂದು ತಮಿಳುನಾಡಿನ ಕರ್ಪಗಂ ಎಂಬುವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, `ನಾಲ್ಕು ವರ್ಷದ ಮಗುವಿಗೆ ಹಲವು ಭಾಷೆಗಳನ್ನು ಕಲಿಯುವ ಶಕ್ತಿ ಇರುತ್ತದೆ. ಇಂಗ್ಲಿಷ್ ಭಾಷೆ ಕಲಿಕೆಗೆ ಸಂಬಂಧಿಸಿದಂತೆ ಹಳ್ಳಿ ಮತ್ತು ಪಟ್ಟಣದ ಮಗುವಿನಲ್ಲಿ ಏನೂ ವ್ಯತ್ಯಾಸ ಇರುವುದಿಲ್ಲ. ಆದ್ದರಿಂದ ಬೋಧನೆಗೆ ಭಿನ್ನವಾದ ಮಾರ್ಗ ಬೇಕಿಲ್ಲ. ಆದರೆ ಪಟ್ಟಣದಲ್ಲಿ ಇಂಗ್ಲಿಷ್‌ಗೆ ಹೆಚ್ಚಿನ ಮಹತ್ವ ಇರುತ್ತದೆ. ಹಳ್ಳಿಯಲ್ಲೂ ಮಹತ್ವ ಸಿಗುವಂತೆ ಮಾಡಬೇಕಾಗುತ್ತದೆ ಎಂದರು.

ನೂರು ಮಂದಿ ಹೆಣ್ಣು ಮಕ್ಕಳು ಒಂದನೇ ತರಗತಿಗೆ ಸೇರಿದರೆ ಅವರಲ್ಲಿ ಒಬ್ಬಳು ಮಾತ್ರ ಹತ್ತನೇ ತರಗತಿ ಉತ್ತೀರ್ಣಳಾಗುತ್ತಾಳೆ. ಮಕ್ಕಳು ಅರ್ಧಕ್ಕೆ ವಿದ್ಯಾಭ್ಯಾಸ ನಿಲ್ಲಿಸಲು ಭಾಷೆಯೂ ಒಂದು ಕಾರಣವಾಗುತ್ತದೆ. ಹಾಗಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.

`ಆಧುನಿಕ ಉಪಕರಣಗಳಿಗೆ ಒಗ್ಗಿಕೊಂಡಿರುವ ನಾವು ಬರೆಯುವುದನ್ನೇ ಬಿಟ್ಟಿದ್ದೇವೆ. ಹೀಗೆ ಮುಂದುವರೆದರೆ ಮುಂದೊಂದು ದಿನ ಬರೆಯುವುದನ್ನು ನಾವು ಮರೆತು ಬಿಡಬಹುದು. ಈಗ ಯಾರೂ ಪತ್ರ ಬರೆಯುವುದಿಲ್ಲ. ಇ-ಮೇಲ್ ಕಳುಹಿಸುತ್ತಾರೆ ಅಥವಾ ದೂರವಾಣಿ ಮೂಲಕ ಮಾತನಾಡುತ್ತಾರೆ. ಇ-ಮೇಲ್ ಭಾಷೆ ಪರಿಪೂರ್ಣವಾಗಿರುವುದಿಲ್ಲ. ಪೂರ್ತಿ ವಾಕ್ಯ ಬರೆಯದೆ ಸಂಕ್ಷಿಪ್ತವಾಗಿ ಬರೆಯುತ್ತಿದ್ದಾರೆ. ಇದೂ ಸಹ ವ್ಯತಿರಿಕ್ತ ಪರಿಣಾಮ ಬೀರಲಿದೆ~ ಎಂದು ಬೆಂಗಳೂರು ವಿವಿ  ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್.ರಾಮಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಬೆಂಗಳೂರು ವಿವಿ ಇಂಗ್ಲಿಷ್ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ಎಸ್.ಕೆ.ರಂಗಾಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.