ADVERTISEMENT

ಮಾನಸಿಕ ಅಸ್ವಸ್ಥ ಹಳ್ಳಿ ಹೈದಕೆ.ಆರ್.ಆಸ್ಪತ್ರೆಗೆ ದಾಖಲು

​ಪ್ರಜಾವಾಣಿ ವಾರ್ತೆ
Published 12 ಜುಲೈ 2012, 18:30 IST
Last Updated 12 ಜುಲೈ 2012, 18:30 IST

ಮೈಸೂರು: ಮಾನಸಿಕವಾಗಿ ಅಸ್ವಸ್ಥಗೊಂಡಿರುವ `ಹಳ್ಳಿ ಹೈದ ಪ್ಯಾಟೆಗೆ ಬಂದ~ ರಿಯಾಲಿಟಿ ಶೋ ವಿಜೇತ, `ಜಂಗಲ್ ಜಾಕಿ~ ಚಿತ್ರದ ನಾಯಕ ರಾಜೇಶ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಕೆ.ಆರ್.ಆಸ್ಪತ್ರೆಯ ಮಾನಸಿಕ ಚಿಕಿತ್ಸಾ ವಿಭಾಗಕ್ಕೆ ಗುರುವಾರ ದಾಖಲು ಮಾಡಲಾಗಿದೆ. ಈತನ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಕೆಲವು ದಿನಗಳಿಂದ ಮಾನಸಿಕವಾಗಿ ಅಸ್ವಸ್ಥಗೊಂಡು ವಿಚಿತ್ರವಾಗಿ ವರ್ತಿಸುತ್ತಿದ್ದ ಈತನನ್ನು ಬುಧವಾರ ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕು ಸರಗೂರಿನ ಸ್ವಾಮಿ ವಿವೇಕಾನಂದ ಸ್ಮಾರಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ಕೆ.ಆರ್.ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯ  ಡಾ.ಪ್ರಶಾಂತ್ ಸೂಚಿಸಿದರು.

ಹೀಗಾಗಿ ಮಧ್ಯಾಹ್ನ ಕೆ.ಆರ್.ಆಸ್ಪತ್ರೆಯ ಮಾನಸಿಕ ಚಿಕಿತ್ಸಾ ವಿಭಾಗದಲ್ಲಿ ದಾಖಲು ಮಾಡಲಾಗಿದ್ದು, ವೈದ್ಯರು ಚಿಕಿತ್ಸೆಯನ್ನು ಆರಂಭಿಸಿದ್ದಾರೆ. ಈಗಲೂ ಈತನ ಕಾಲು ಮತ್ತು ಕೈಗಳನ್ನು ಹಗ್ಗದಿಂದ ಕಟ್ಟಲಾಗಿದೆ.
 

ನಾಯಕಿ ಭೇಟಿ: `ಹಳ್ಳಿ ಹೈದ ಪ್ಯಾಟೆಗೆ ಬಂದ~ ಶೋ ನ ಜೊತೆಗಾರ್ತಿ ಹಾಗೂ `ಜಂಗಲ್ ಜಾಕಿ~ ಚಿತ್ರದ ನಾಯಕಿ ಐಶ್ವರ್ಯ ಹಾಗೂ ಚಿತ್ರದ ನಿರ್ದೇಶಕ ಕಡೂರು ರವಿ ಗುರುವಾರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ರಾಜೇಶನ ತಾಯಿ ಲಕ್ಷ್ಮಿ, ತಂದೆ ಕೃಷ್ಣ ಅವರಿಗೆ ಸಾಂತ್ವನ ಹೇಳಿದರು.

ನಿರ್ದೇಶಕ ಸ್ಪಷ್ಟನೆ: `ಜಂಗಲ್ ಜಾಕಿ ಚಿತ್ರದ ಡಿಜಿಟಲ್ ಕೆಲಸ ನಡೆಯುತ್ತಿದ್ದು, ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಯಾವುದೇ ಕಾರಣಕ್ಕೂ ಇದು ವಿಳಂಬವಾಗುವುದಿಲ್ಲ. ನಮ್ಮಿಂದ ರಾಜೇಶ್‌ಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಈತನಿಗೆ  ಸಂಭಾವನೆಯನ್ನು ಕೊಟ್ಟಿದ್ದೇವೆ~ ಎಂದು ನಿರ್ದೇಶಕ ಕಡೂರು ರವಿ ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT