ADVERTISEMENT

ಮಾರತ್‌ಹಳ್ಳಿ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಖಾತೆಗಾಗಿ ಅಲೆದಾಟ

​ಪ್ರಜಾವಾಣಿ ವಾರ್ತೆ
Published 20 ಮೇ 2012, 19:30 IST
Last Updated 20 ಮೇ 2012, 19:30 IST
ಮಾರತ್‌ಹಳ್ಳಿ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಖಾತೆಗಾಗಿ ಅಲೆದಾಟ
ಮಾರತ್‌ಹಳ್ಳಿ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಖಾತೆಗಾಗಿ ಅಲೆದಾಟ   

ಬೆಂಗಳೂರು: ಮಾರತ್‌ಹಳ್ಳಿ ಮೇಲ್ಸೇತುವೆ ಸಮೀಪವಿರುವ ಪೂರ್ವಾ ರಿವೇರಾ, ವಸಂತ ರೋಹನ್, ಪೂರ್ವಾ ಫೌಂಟೇನ್ ಸ್ಕ್ವೇರ್ ಅಪಾರ್ಟ್‌ಮೆಂಟ್‌ಗಳು ನಿರ್ಮಾಣಗೊಂಡು 5 ವರ್ಷಗಳೇ ಕಳೆದರೂ ಬಿಬಿಎಂಪಿಯು ಖಾತಾ ಒದಗಿಸಲು ಮೀನಮೇಷ ಎಣಿಸುತ್ತಿದೆ.

ಇಲ್ಲಿಯ ನಿವಾಸಿಗಳು ಐದು ವರ್ಷಗಳಿಂದ ಖಾತಾ ಪಡೆಯಲು ಪಾಲಿಕೆ ಕಚೇರಿಗಳಿಗೆ ಅಲೆಯುತ್ತಿದ್ದರೂ ಪ್ರಯೋಜನವಾಗಿಲ್ಲ. ಭಾನುವಾರ `ಪ್ರಜಾವಾಣಿ~ ಸ್ಥಳಕ್ಕೆ ಭೇಟಿ ನೀಡಿದಾಗ ಖಾತಾ, ಕುಡಿಯುವ ನೀರು, ಭದ್ರತೆ, ವಾಹನ ದಟ್ಟಣೆ, ಕ್ರೀಡಾ ಮೈದಾನ ಸೇರಿದಂತೆ ಹಲವು ಮೂಲ ಸೌಕರ್ಯಗಳ ಸಮಸ್ಯೆಗಳ ಬಗ್ಗೆ ನಿವಾಸಿಗಳು ಅಳಲು ತೋಡಿಕೊಂಡರು.

ಅಧಿಕ ಫ್ಲ್ಯಾಟ್
ಒಂದೇ ಆವರಣದಲ್ಲಿರುವ ಪೂರ್ವಾ ರಿವೇರಾ, ವಸಂತ ರೋಹನ್, ಪೂರ್ವಾ ಫೌಂಟೇನ್ ಸ್ಕ್ವೇರ್, ಎಸ್‌ಜೆಆರ್ ಸ್ಪೆನ್ಸರ್ ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಫ್ಲ್ಯಾಟ್‌ಗಳಿವೆ. ಈ ಮುಂಚೆ ಅಭಿವೃದ್ಧಿ ಶುಲ್ಕ ಸಂಗ್ರಹಿಸಿ ಖಾತಾ ನೀಡಲಾಗುತ್ತಿತ್ತು. ಆದರೆ, ಅಭಿವೃದ್ಧಿ ಶುಲ್ಕ ಸಂಗ್ರಹಿಸುವ ಪ್ರಕರಣ ಸದ್ಯಕ್ಕೆ ಹೈಕೋರ್ಟ್‌ನಲ್ಲಿ ಬಾಕಿ ಇರುವುದರಿಂದ ಖಾತಾ ವಿತರಣೆ ವಿಳಂಬವಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿದ ಅಪಾರ್ಟ್‌ಮೆಂಟ್ ನಿವಾಸಿ ಗೋಪಾಲ ದೇವನಹಳ್ಳಿ, `ಖಾತಾ ಪಡೆಯುವ ಸಲುವಾಗಿ ಸಂಬಂಧಪಟ್ಟ ಬಿಬಿಎಂಪಿ ಮತ್ತು ಬಿಡಿಎ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ. ಭರವಸೆ ಮತ್ತು ಸಬೂಬುಗಳನ್ನು ಕೇಳಿಸಿಕೊಂಡೇ ಇಷ್ಟು ದಿನ ದೂಡಿದ್ದಾಗಿದೆ. ಖಾತಾ ಸಮರ್ಪಕವಾಗಿ ಇಲ್ಲದೇ ಇರುವುದರಿಂದ ಫ್ಲ್ಯಾಟ್‌ಗಳನ್ನು ಇನ್ನೊಬ್ಬರಿಗೆ ಮಾರಾಟ ಮಾಡಲು ಸಾಧ್ಯವಿಲ್ಲ~ ಎಂದರು.

ಕುಡಿಯುವ ನೀರಿನ ಸಮಸ್ಯೆ
ಇನ್ನು, ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಳೆಗಾಲದಲ್ಲೂ ಕುಡಿಯುವ ನೀರಿಗೆ ಪರದಾಡಬೇಕಾದ ಪರಿಸ್ಥಿತಿಯಿದ್ದು, ಖಾಸಗಿ ಟ್ಯಾಂಕರ್‌ಗಳು ನೀರು ಪೂರೈಸುತ್ತಿವೆ.

ಅಪಾರ್ಟ್‌ಮೆಂಟ್‌ಗಳ ಆವರಣದಲ್ಲಿ ಮೂರು ಕೊಳವೆ ಬಾವಿಗಳಿದ್ದು, ಇದರಲ್ಲಿ ಎರಡು ಬತ್ತಿ ಹೋಗಿವೆ. ಆಗಾಗ ವಿದ್ಯುತ್ ಸಮಸ್ಯೆ ತಲೆದೋರುವುದರಿಂದ ಬಾವಿಯಿಂದ ನೀರು ಪಡೆಯಲು ಸಾಧ್ಯವಾಗುತ್ತಿಲ್ಲ.

ವಸಂತ ರೋಹನ್ ಅಪಾರ್ಟ್‌ಮೆಂಟ್‌ನ ನಿವಾಸಿ ರಾಹುಲ್, `ಎರಡು ದಿನಕ್ಕೊಮ್ಮೆ ಬೆಳಿಗ್ಗೆ ಮತ್ತು ಸಂಜೆ ಎರಡು ಗಂಟೆಗಳ ಕಾಲ ಕಾವೇರಿ ನೀರು ಪೂರೈಕೆಯಾಗುತ್ತಿದೆ. ಆದರೆ, ವಿದ್ಯುತ್ ಕಡಿತಗೊಳ್ಳುವುದರಿಂದ ಕೆಲವೊಮ್ಮೆ ನೀರು ಪೂರೈಕೆಯಾಗುತ್ತಿಲ್ಲ. ಕುಡಿಯುವ ನೀರು ಪೂರೈಸುವ ಸಲುವಾಗಿಯೇ ಖಾಸಗಿ ಟ್ಯಾಂಕರ್ ಮಾಲೀಕರ ನಡುವೆ ಘರ್ಷಣೆ ನಡೆಯುತ್ತದೆ~ ಎಂದರು.

ವಾಹನ ದಟ್ಟಣೆ
`ಮಾರತ್‌ಹಳ್ಳಿ ಮೇಲ್ಸೇತುವೆ ಮಾರ್ಗದಲ್ಲಿರುವ ಕುಂದಲಹಳ್ಳಿ ಜಂಕ್ಷನ್‌ನಲ್ಲಿ ವಾಹನ ದಟ್ಟಣೆಯಿಂದಾಗಿ ಬೆಳಿಗ್ಗೆ ಮತ್ತು ಸಂಜೆ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಇದರಿಂದ ಕೆಲವೊಮ್ಮೆ ಅಪಾರ್ಟ್‌ಮೆಂಟ್ ನಿವಾಸಿಗಳು ತಮ್ಮ ವಾಹನಗಳನ್ನು ರಸ್ತೆಗಿಳಿಸಲು ಸಾಧ್ಯವಾಗುವುದಿಲ್ಲ~ ಎಂದು ಯತಿನ್ ಸಾಮಂತ್ ಆರೋಪಿಸಿದರು.

`ಈ ಮೇಲ್ಸೇತುವೆ ಕೆಳಭಾಗದಲ್ಲಿ ಯಾವುದೇ ಬೀದಿ ದೀಪಗಳನ್ನು ಅಳವಡಿಸದೇ ಇರುವುದರಿಂದ ಸಂಜೆ 6ರ ನಂತರ ಮಹಿಳೆಯರು ಓಡಾಡಲು ಸಾಧ್ಯವಾಗದೇ ಇರುವಂತಹ ಪರಿಸ್ಥಿತಿ ಎದುರಾಗಿದೆ. ರಾತ್ರಿ 10 ಗಂಟೆ ನಂತರ ಈ ಭಾಗದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಈ  ಬಗ್ಗೆ ಪಾಲಿಕೆ ಗಮನಹರಿಸಬೇಕು. ಇನ್ನು ಅರ್ಪಾಟ್‌ಮೆಂಟ್‌ನಲ್ಲಿ ವಾಸಿಸುವ ಮಕ್ಕಳಿಗೆ ಕ್ರೀಡಾ ಮೈದಾನವಿಲ್ಲ. ಸ್ಥಳೀಯ ಶಾಲೆ ಮೈದಾನಗಳಲ್ಲೇ ಮಕ್ಕಳಿಗೆ ಆಟವಾಡಲು ಅವಕಾಶ ನೀಡಬೇಕು~ ಎಂದು ಒತ್ತಾಯಿಸಿದರು.

`ಅಪಾರ್ಟ್‌ಮೆಂಟ್‌ನ ಕೂಗಳತೆ ದೂರದಲ್ಲಿರುವ ಮುನ್ನೆಕೊಳಲ ಕೆರೆಯು ಸಂಪೂರ್ಣವಾಗಿ ಮಲಿನಗೊಂಡಿದೆ. ಸ್ಥಳೀಯರು ಆಗಾಗ್ಗೆ ತ್ಯಾಜ್ಯಗಳನ್ನು ಸುರಿಯುತ್ತಿದ್ದಾರೆ. ತ್ಯಾಜ್ಯ ವಿಲೇವಾರಿ ಹಾಗೂ ಹೂಳು ತೆಗೆಯದ ಕಾರಣ ಕೆಟ್ಟ ವಾಸನೆ ಬರುತ್ತಿದೆ. ಬೇಸಿಗೆ ಕಾಲದಲ್ಲಿ ಸೊಳ್ಳೆಯ ಕಾಟ ಇರುವುದರಿಂದ ಈ ಭಾಗದಲ್ಲಿ ವಾಸಿಸುವುದೇ ಕಷ್ಟಕರವೆನಿಸುತ್ತದೆ~ ಎಂದು ತಮ್ಮ ಸಮಸ್ಯೆಯನ್ನು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.