ADVERTISEMENT

ಮಾರುತಗಳ ಸಂಘರ್ಷ ಹಲವೆಡೆ ಅಕಾಲಿಕ ಮಳೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2016, 19:58 IST
Last Updated 20 ಜನವರಿ 2016, 19:58 IST
ಬೆಂಗಳೂರಿನ ಜಯನಗರದ  ಆರ್.ವಿ.ರಸ್ತೆಯಲ್ಲಿ ನಿಂತಿದ್ದ ಮಳೆ ನೀರಿನಲ್ಲಿ ವಾಹನಗಳು ಸಾಗಿದವು  –ಪ್ರಜಾವಾಣಿ ಚಿತ್ರಗಳು
ಬೆಂಗಳೂರಿನ ಜಯನಗರದ ಆರ್.ವಿ.ರಸ್ತೆಯಲ್ಲಿ ನಿಂತಿದ್ದ ಮಳೆ ನೀರಿನಲ್ಲಿ ವಾಹನಗಳು ಸಾಗಿದವು –ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ಉತ್ತರ ಭಾಗದಿಂದ ಬರುತ್ತಿರುವ ಚಳಿಗಾಲದ ಮಾರುತಗಳು ಮತ್ತು ದಕ್ಷಿಣದಿಂದ ಬೀಸುತ್ತಿರುವ ತೇವಾಂಶ ಭರಿತ ಮಾರುತಗಳ ಸಂಘರ್ಷದಿಂದ ರಾಜ್ಯದಲ್ಲಿ ಕೆಲವೆಡೆ ಅಕಾಲಿಕ ಮಳೆ ಕಾಣಿಸಿಕೊಂಡಿದೆ ಎನ್ನುವುದು ಹವಾಮಾನ ತಜ್ಞರ ಅಭಿಮತ.

‘ಉತ್ತರದ ದೇಶಗಳಿಂದ ಚಳಿ ಮಾರುತಗಳು ಪಶ್ಚಿಮದಿಂದ ಪೂರ್ವದೆಡೆಗೆ ಚಲಿಸುತ್ತಿವೆ. ದಕ್ಷಿಣ ಭಾರತದಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡು ತೇವಾಂಶವಿರುವ ಮಾರುತಗಳು ಪೂರ್ವದಿಂದ ಪಶ್ಚಿಮದತ್ತ ಸಾಗುತ್ತಿವೆ. ಈ ಎರಡು ಮಾರುತಗಳ ಸಂಘರ್ಷದಿಂದಾಗಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಕೆಲ ಪ್ರದೇಶಗಳಲ್ಲಿ ಸಾಧಾರಣ ಮಳೆ ಕಾಣಿಸಿಕೊಂಡಿದೆ’ ಎಂದು ಹವಾಮಾನ ಇಲಾಖೆ ನಿವೃತ್ತ  ನಿರ್ದೇಶಕ ಬಿ.ಪುಟ್ಟಣ್ಣ ಹೇಳಿದರು.

‘ಬಂಗಾಳಕೊಲ್ಲಿಯ ನೈರುತ್ಯ ಭಾಗದಲ್ಲಿ ತಮಿಳುನಾಡಿಗೆ ಹೊಂದಿಕೊಂಡಂತೆ ಸಮುದ್ರಮಟ್ಟದಿಂದ  ಒಂದೂವರೆ ಕಿ.ಮೀ ಎತ್ತರದವರೆಗೆ ಮಂಗಳವಾರ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿತ್ತು. ಇದರಿಂದ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಬೆಂಗಳೂರು, ತುಮಕೂರು ಸುತ್ತಮುತ್ತ ಅಕಾಲಿಕ ಮಳೆ ಸುರಿದಿದೆ’ ಎಂದು ತಿಳಿಸಿದರು.

‘ಚಳಿಗಾಲದಲ್ಲಿ ಮಳೆ ಸುರಿಯುವುದು ಅಪರೂಪದ ಸಂಗತಿಯೇನಲ್ಲ. ಐದು ವರ್ಷಕ್ಕೊಮ್ಮೆ ಇಂತಹ ವಿದ್ಯಮಾನ ನಡೆಯುತ್ತಿರುತ್ತದೆ. ಸಾಮಾನ್ಯವಾಗಿ ಅಕಾಲಿಕ ಮಳೆ ಫೆಬ್ರುವರಿ ತಿಂಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಬಾರಿ ಅದು ಜನವರಿಯಲ್ಲಿ ಬಿದ್ದಿದೆ’ ಎಂದರು.

ಹೆಚ್ಚಾದರೆ ವ್ಯತಿರಿಕ್ತ ಪರಿಣಾಮ: ‘ವಾತಾವರಣ ಒತ್ತಡ ವ್ಯತ್ಯಾಸದಿಂದ ಈ ಅಕಾಲಿಕ ಮಳೆ ಕಾಣಿಸಿಕೊಂಡಿದೆ. ಸಾಮಾನ್ಯವಾಗಿ ಇದು ಬಹಳ ದಿನ ಇರುವುದಿಲ್ಲ. ಒಂದೊಮ್ಮೆ, ತುಂಬಾ ದಿನ ಕಾಣಿಸಿಕೊಂಡರೆ ಅದು ಮುಂಬರುವ ಮಳೆಗಾಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹವಾಮಾನ ತಜ್ಞ ಎಂ.ಬಿ. ರಾಜೇಗೌಡ ಹೇಳಿದರು.

ಮೂರು ದಿನ ಮಳೆ ಸಾಧ್ಯತೆ
‘ನಗರದಲ್ಲಿ ಗುರುವಾರದಿಂದ ಮೂರು ದಿನ ಮಳೆ ಸುರಿಯುವ ಸಾಧ್ಯತೆ ಇದೆ’ ಭಾರತೀಯ ಹವಾ ಮಾನ ಇಲಾಖೆ ಅಧಿಕಾರಿಗಳು ತಿಳಿಸಿದರು. ‘ಬುಧವಾರ ನಗರದಲ್ಲಿ 4.4 ಮಿ.ಮೀ, ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ 5.2 ಮಿ.ಮೀ ಮತ್ತು ಯಲಹಂಕದಲ್ಲಿ 1.2 ಮಿ.ಮೀ ಮಳೆಯಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.