ADVERTISEMENT

ಮಾರ್ಚ್‌ನಲ್ಲಿ 45 ಮಿ.ಮೀ ಮಳೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 19:30 IST
Last Updated 31 ಮಾರ್ಚ್ 2018, 19:30 IST
ಮಾರ್ಚ್‌ನಲ್ಲಿ 45 ಮಿ.ಮೀ ಮಳೆ
ಮಾರ್ಚ್‌ನಲ್ಲಿ 45 ಮಿ.ಮೀ ಮಳೆ   

ಬೆಂಗಳೂರು: ಬೇಸಿಗೆಯಲ್ಲಿ ಸುರಿಯುವ ಪೂರ್ವಮುಂಗಾರು ಮಳೆ ನಗರದಲ್ಲಿ ಉತ್ತಮವಾಗಿದ್ದು, ಮಾರ್ಚ್‌ನಲ್ಲಿ ಒಟ್ಟು 45 ಮಿ.ಮೀ ಮಳೆ ಸುರಿದಿದೆ.

ಕಳೆದ ವರ್ಷ ಮಾರ್ಚ್‌ನಲ್ಲಿ ಸುರಿದಿದ್ದ 47.8 ಮಿ.ಮೀ ವರ್ಷಧಾರೆ ಹತ್ತು ವರ್ಷಗಳ ನಂತರದ ದಾಖಲೆಯಾಗಿತ್ತು. ಶುಕ್ರವಾರ ನಗರದಲ್ಲಿ 4 ಮಿ.ಮೀ ಮಳೆ ಸುರಿದಿದೆ. 2008ರಲ್ಲಿ ಈ ತಿಂಗಳಲ್ಲಿ 59.8 ಮಿ.ಮೀ ಮಳೆಯಾಗಿತ್ತು. ಇದಲ್ಲದೆ 1981ರಲ್ಲಿ ಸುರಿದ್ದ 101.2 ಮಿ.ಮೀ ಮಳೆ ಸಾರ್ವಕಾಲಿಕ ದಾಖಲೆಯಾಗಿದೆ.

‘ಮಾರ್ಚ್‌ನಲ್ಲಿ ಸಾಮಾನ್ಯವಾಗಿ 9.4 ಮಿ.ಮೀ ಮಳೆಯಾಗುತ್ತದೆ. ಆದರೆ, ಈ ಬಾರಿ ಅದಕ್ಕಿಂತ ಐದು ಪಟ್ಟು ಹೆಚ್ಚು ವರ್ಷಧಾರೆಯಾಗಿದೆ’ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ನಿರ್ದೇಶಕ ರಮೇಶ್ ತಿಳಿಸಿದರು.

ADVERTISEMENT

ಮಾರ್ಚ್‌ 1ರಿಂದ ಪೂರ್ವಮುಂಗಾರು ಪ್ರಾರಂಭವಾಗುತ್ತದೆ. ಈ ತಿಂಗಳಲ್ಲಿ ಸಾಮಾನ್ಯವಾಗಿ ಒಂದೆರಡು ದಿನಗಳು ಮಾತ್ರ ಮಳೆಯಾಗುತ್ತದೆ. ಆದರೆ, ಈ ಬಾರಿ ಐದಾರು ಬಾರಿ ವರುಣನ ಸಿಂಚನವಾಗಿದೆ. 16ರಂದು ಸುರಿದಿದ್ದ38 ಮಿ.ಮೀ ಒಂದು ದಿನದಲ್ಲಿ ದಾಖಲಾದ ಅತಿ ಹೆಚ್ಚು ಮಳೆ.

ದೇಶದ ಪೂರ್ವಭಾಗದಲ್ಲಿ ಮೇಲ್ಮೈ ಸುಳಿಗಾಳಿಯೂ ಉಂಟಾಗಿದ್ದು, ಇದರಿಂದ ಉಂಟಾದ ಮೋಡಗಳು ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಮತ್ತು ರಾಜ್ಯದ ದಕ್ಷಿಣ ಒಳನಾಡು ಪ್ರದೇಶಗಳತ್ತ ಸಾಗಿಬರುತ್ತಿವೆ. ಇದರ ಪರಿಣಾಮ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ.

ಇನ್ನೂ ಮೂರು ದಿನ ಮಳೆ

ನಗರದಲ್ಲಿ ಸುರಿಯುತ್ತಿರುವ ತುಂತುರು ಮಳೆ ಇನ್ನೂ ಮೂರು ದಿನಗಳವರೆಗೆ ಮುಂದುವರಿಯಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಇದು ಮಧ್ಯಾಹ್ನದ ನಂತರ ಪ್ರಾರಂಭವಾಗಿ, ಸ್ವಲ್ಪ ಹೊತ್ತು ಸುರಿಯುತ್ತದೆ. ಇದು ಪೂರ್ವ ಮುಂಗಾರು ಮಳೆಯ ವೈಶಿಷ್ಟ್ಯ. ಏಪ್ರಿಲ್‌ 6 ಮತ್ತು 7ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.