ADVERTISEMENT

ಮಾರ್ಚ್ 1ರಿಂದ ಪ್ರಾಯೋಗಿಕ ಜಾರಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 19:30 IST
Last Updated 22 ಫೆಬ್ರುವರಿ 2012, 19:30 IST

ಬೆಂಗಳೂರು: ಮಾರ್ಚ್ ಒಂದರಿಂದ ಪ್ರಾಯೋಗಿಕವಾಗಿ ಬೀದರ್, ಚಿತ್ರದುರ್ಗ, ಧಾರವಾಡ, ದಕ್ಷಿಣ ಕನ್ನಡ ಜಿಲ್ಲೆಯ ತಲಾ ಒಂದು ತಾಲ್ಲೂಕು ಹಾಗೂ ಬೆಂಗಳೂರಿನ ಜಯನಗರ ಕಂದಾಯ ವಿಭಾಗದಲ್ಲಿ ನಾಗರಿಕ ಸೇವೆಗಳ ಖಾತರಿ ಕಾಯ್ದೆ ಜಾರಿಯಾಗಲಿದೆ ಎಂದು ಕಾನೂನು ಸಚಿವ ಎಸ್.ಸುರೇಶಕುಮಾರ್ ತಿಳಿಸಿದರು.

ಏಪ್ರಿಲ್ ಎರಡರಿಂದ ರಾಜ್ಯದ ಎಲ್ಲ ಕಡೆ ಈ ಕಾಯ್ದೆ ಅನುಷ್ಠಾನಕ್ಕೆ ಬರಲಿದ್ದು, ಈಗಿನಿಂದಲೇ ಸಿದ್ಧತೆ ನಡೆಸುವ ಮೂಲಕ ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಗೃಹ ಕಚೇರಿ `ಕೃಷ್ಣಾ~ದಲ್ಲಿ ಬುಧವಾರ ಏರ್ಪಡಿಸಿದ್ದ ವಿಡಿಯೊ ಸಂವಾದದಲ್ಲಿ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಈ ಕಾಯ್ದೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಮಾರ್ಚ್ ಒಂದರಿಂದ ನಗರದಲ್ಲಿ ಕಾಲ್‌ಸೆಂಟರ್ ಆರಂಭಿಸಲಾಗುವುದು. ದೂರವಾಣಿ ಸಂಖ್ಯೆ: 080-44554455ಕ್ಕೆ ಕರೆ ಮಾಡಿ ಕಾಯ್ದೆ ಬಗ್ಗೆ ವಿವರಗಳನ್ನು ಪಡೆಯಬಹುದು.

ಕಾಯ್ದೆ ಅನುಷ್ಠಾನದ ಬಗ್ಗೆ ಸಚಿವಾಲಯ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು. ಜಿಲ್ಲಾ ಮಟ್ಟದಲ್ಲೂ ಇದೇ ರೀತಿ ತರಬೇತಿ ನೀಡಲಾಗುತ್ತದೆ. ಕಿಯೊನಿಕ್ಸ್ ಮೂಲಕ ಅಗತ್ಯವಿರುವ ಸಿಬ್ಬಂದಿಯನ್ನು ಪಡೆಯಲು ಅವಕಾಶ ನೀಡಲಾಗಿದೆ ಎಂದು ಸುರೇಶಕುಮಾರ್ ಹೇಳಿದರು.

ಸಕಾಲದಲ್ಲಿ ಕೆಲಸ ಆಗುವುದಿಲ್ಲ ಎಂಬ ದೂರುಗಳಿಗೆ ಇತಿಶ್ರೀ ಹಾಡಲು ಈ ಕಾಯ್ದೆ ಸಹಕಾರಿಯಾಗಲಿದೆ. ಇದರ ಅನುಷ್ಠಾನದಲ್ಲಿ ಅಧಿಕಾರಿಗಳು ಹಿಂದೆ ಬೀಳಬಾರದು. ಉತ್ಸಾಹದಿಂದ ಜಾರಿಗೊಳಿಸಬೇಕು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.