ADVERTISEMENT

ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಯತ್ನ: ಕಾಂಗ್ರೆಸ್ ಮುಖಂಡರ ಬಂಧನ, ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2012, 19:00 IST
Last Updated 10 ನವೆಂಬರ್ 2012, 19:00 IST

ಬೆಂಗಳೂರು: ಸರ್ಕಾರದ ಕಾರ್ಯವೈಖರಿ ಖಂಡಿಸಿ, ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ಶಾಸಕ ಡಿ.ಕೆ. ಶಿವಕುಮಾರ್ ಮತ್ತಿತರರನ್ನು ಪೊಲೀಸರು ಶನಿವಾರ ಬಂಧಿಸಿ, ಬಿಡುಗಡೆ ಮಾಡಿದರು.

ಪ್ರದೇಶ ಯುವ ಕಾಂಗ್ರೆಸ್ ಇಲ್ಲಿನ `ಸ್ವಾತಂತ್ರ್ಯ ಉದ್ಯಾನ~ದಲ್ಲಿ ಆಯೋಜಿಸಿದ್ದ `ಕೆಲಸ ಮಾಡಿ, ಇಲ್ಲಾಂದ್ರೆ ಕುರ್ಚಿ ಬಿಡಿ~ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಮುಖಂಡರು, ನಂತರ ಮುಖ್ಯಮಂತ್ರಿಯವರ ನಿವಾಸಕ್ಕೆ ಮುತ್ತಿಗೆ ಹಾಕುವ ಉದ್ದೇಶದಿಂದ ಹೊರಟರು. ಅವರನ್ನು ಆನಂದರಾವ್ ವೃತ್ತದ ಬಳಿ ತಡೆದ ಪೊಲೀಸರು, ಮುಂದೆ ಹೋಗಲು ಅವಕಾಶ ನೀಡಲಿಲ್ಲ.

ಅಡ್ಡಗಟ್ಟೆ ತಳ್ಳಿ ಮುಂದೆ ನುಗ್ಗಲು ಸಿದ್ದರಾಮಯ್ಯ ಪ್ರಯತ್ನಿಸಿದರು. ಮುನ್ನುಗ್ಗಲು ಅವಕಾಶ ನೀಡದ ಪೊಲೀಸರು, ಅವರನ್ನು ಮತ್ತೆ ತಡೆದರು. ಆಗ ಸ್ಥಳದಲ್ಲೇ ಧರಣಿ ಕುಳಿತ ಕಾಂಗ್ರೆಸ್ ಮುಖಂಡರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪರಮೇಶ್ವರ್ ಮತ್ತು ಇತರರು ಮುಖ್ಯಮಂತ್ರಿಯವರ ನಿವಾಸದತ್ತ ತೆರಳಲು ಮತ್ತೆ ಯತ್ನಿಸಿದಾಗ, ಪೊಲೀಸರು ಮುಖಂಡರನ್ನು ಬಂಧಿಸಿದರು. ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್, ವಿಧಾನ ಪರಿಷತ್ ವಿರೋಧ ಪಕ್ಷದ ಉಪ ನಾಯಕ ದಯಾನಂದ ರೆಡ್ಡಿ, ಶಾಸಕ ನೆ.ಲ. ನರೇಂದ್ರ ಬಾಬು ಸೇರಿದಂತೆ ಹಲವು ಮಂದಿ ಕಾರ್ಯಕರ್ತರು ಬಂಧನಕ್ಕೊಳಗಾದರು. ನಂತರ ಅವರನ್ನು ಬಿಡುಗಡೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.