ADVERTISEMENT

ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ

ಕಬ್ಬನ್ ಉದ್ಯಾನ: ಎರಡನೇ ಶನಿವಾರ ವಾಹನ ಸಂಚಾರಕ್ಕೆ ಅನುವು

​ಪ್ರಜಾವಾಣಿ ವಾರ್ತೆ
Published 11 ಜೂನ್ 2017, 19:34 IST
Last Updated 11 ಜೂನ್ 2017, 19:34 IST
ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ
ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ   

ಬೆಂಗಳೂರು: ಕಬ್ಬನ್ ಉದ್ಯಾನದಲ್ಲಿ ಎರಡನೇ ಶನಿವಾರವೂ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವ ವಿಷಯಕ್ಕೆ ಸಂಬಂಧಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ ಚಂದ್ರ ಖುಂಟಿಅ ಅವರು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಹಾಗೂ ನಗರ ಪೊಲೀಸ್ ಕಮಿಷನರ್ ಪ್ರವಿಣ್ ಸೂದ್ ಅವರೊಂದಿಗೆ ಮುಂದಿನ ವಾರ ಸಭೆ ನಡೆಸಲಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ತೋಟಗಾರಿಕಾ ಇಲಾಖೆ ಉಪನಿರ್ದೇಶಕ   (ಕಬ್ಬನ್ ಉದ್ಯಾನ) ಮಹಾಂತೇಶ್ ಮುರಗೋಡ, ‘ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಉದ್ಯಾನ ಹಾಗೂ ಸಾರ್ವಜನಿಕರ ಮೇಲೆ ಬೀರುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಮುಖ್ಯ ಕಾರ್ಯದರ್ಶಿ ಅವರ ಗಮನಕ್ಕೆ ತಂದಿದ್ದೇವೆ. ಅದರಂತೆ ಸಭೆ ನಡೆಸಲು ಅವರು ಒಪ್ಪಿಗೆ ಸೂಚಿಸಿದ್ದಾರೆ’ ಎಂದರು.

‘ಪರಿಸರವಾದಿ ಅ.ನ. ಯಲ್ಲಪ್ಪ ರೆಡ್ಡಿ ಅವರ ಜತೆಗೂಡಿ ಕಮಿಷನರ್ ಅವರನ್ನು ಶುಕ್ರವಾರ ಭೇಟಿಯಾಗಿ ಅವರಿಗೂ ಸಮಸ್ಯೆ ಬಗ್ಗೆ ತಿಳಿಸಿದ್ದೇವೆ. ಆದೇಶ ಬದಲಿಸುವ ಕುರಿತು ಅವರು ಪೂರಕವಾಗಿ ಸ್ಪಂದಿಸಿದ್ದಾರೆ’ ಎಂದು ಹೇಳಿದರು.

ADVERTISEMENT

ಬಾಲಭವನದಿಂದ ಮನವಿ: ಬಾಲಭವನಕ್ಕೆ ಭೇಟಿ ನೀಡುವ ವೀಕ್ಷಕರಿಗೆ ಅನುಕೂಲವಾಗುವಂತೆ ತಿಂಗಳ ಎರಡನೇ ಶನಿವಾರವೂ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಕಮಿಷನರ್ ಅವರಿಗೆ ಬಾಲಭವನದ ಅಧ್ಯಕ್ಷರು ಮನವಿ ಸಲ್ಲಿಸಿದ್ದರು. ಅದರಂತೆ ಕಮಿಷನರ್ ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದಾರೆ ಎನ್ನಲಾಗಿದೆ.

ವಾಹನ ಸಂಚಾರ:  ಒಂದು ವರ್ಷ ಎಂಟು ತಿಂಗಳ ಬಳಿಕ ಎರಡನೇ ಶನಿವಾರ ವಾಹನಗಳು ಸಂಚರಿಸಿದವು. ನೃಪತುಂಗ ರಸ್ತೆಯ ದುರಸ್ತಿ ವೇಳೆ ಉದ್ಯಾನದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರಿಂದ ಮಾಲಿನ್ಯ ಪ್ರಮಾಣ ದ್ವಿಗುಣಗೊಂಡಿತ್ತು. ವಾಹನ ಸಂಚಾರಕ್ಕೆ ಹೆಚ್ಚು ಅವಕಾಶ ಮಾಡಿಕೊಟ್ಟಲ್ಲಿ, ಉದ್ಯಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗುತ್ತದೆ ಎಂದು ಪರಿಸರ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.