ಬೆಂಗಳೂರು: ವಕೀಲರು, ಮಾಧ್ಯಮದವರು ಮತ್ತು ಪೊಲೀಸರ ನಡುವಿನ ಸಂಘರ್ಷ ಅಂತ್ಯಗೊಂಡು, ಸಾಮರಸ್ಯ ಮೂಡಬೇಕೆಂದು ಚಿತ್ರದುರ್ಗದ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ನಗರದಲ್ಲಿ ಮಂಗಳವಾರ ಸಾಂಕೇತಿಕ ನಿರಶನ ಆರಂಭಿಸಿದರು.
ಗಾಂಧಿನಗರದ ಮುರುಘಾ ಮಠದ ಆವರಣದಲ್ಲಿ ನಿರಶನ ಕೈಗೊಂಡ ಶರಣರು, `ಸಮಾಜದ ಸ್ವಾಸ್ಥ ಉಳಿಸುವ ಸಲುವಾಗಿ ವಕೀಲರು, ಮಾಧ್ಯಮದವರು ಮತ್ತು ಪೊಲೀಸರ ನಡುವಿನ ಸಂಘರ್ಷ ಕೊನೆಗೊಳ್ಳಲಿ~ ಎಂದು ಆಶಿಸಿದರು.
`ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದಿರುವ ಈ ಸಂಘರ್ಷವು ನಿಜಕ್ಕೂ ಕೆಟ್ಟ ಘಟನೆ. ಒಂದು ವೃತ್ತಿ ಯವರು ಮತ್ತೊಂದು ವೃತ್ತಿಯನ್ನು ಅವ ಮಾನಿಸುವುದು ಸರಿಯಲ್ಲ. ಸಮಾಜದ ಒಳಿತಿಗಾಗಿ ಈ ಮೂರು ವೃತ್ತಿಯಲ್ಲಿ ರುವವರು ಪರಸ್ಪರ ಸಾಮರಸ್ಯದಿಂದ ಬದುಕಬೇಕಿದೆ~ ಎಂದು ಹೇಳಿದರು. ನಿರಶನದಲ್ಲಿ ಭಾಗವಹಿಸಿದ್ದ ಸಮತಾ ಸೈನಿಕ ದಳದ ಅಧ್ಯಕ್ಷ ಎನ್.ವೆಂಕಟಸ್ವಾಮಿ, ಅವರು, `ವಕೀಲರು ನ್ಯಾಯಾಲಯ ಕಲಾಪಗಳ ಬಹಿಷ್ಕಾರ ನಿರ್ಧಾರದಿಂದ ದೂರ ಸರಿಯಬೇಕು~ ಎಂದು ವಕೀಲ ಸಮುದಾಯಕ್ಕೆ ಮನವಿ ಮಾಡಿದರು.
ಸದ್ಯದಲ್ಲಿಯೇ ಎರಡನೇ ಸುತ್ತಿನ ಮಾತುಕತೆ
ನಿರಶನ ಸ್ಥಳಕ್ಕೆ ಭೇಟಿ ನೀಡಿದ ಕಾನೂನು ಸಚಿವ ಎಸ್. ಸುರೇಶ್‌ಕುಮಾರ್ ಮುರುಘಾ ಶರಣ ರೊಂದಿಗೆ ಮಾತುಕತೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ವಕೀಲರು, ಮಾಧ್ಯಮದವರು ಮತ್ತು ಪೊಲೀಸರ ನಡುವೆ ಉಂಟಾಗಿರುವ ಸಂಘರ್ಷ ಕುರಿತಂತೆ ಮುಖ್ಯಮಂತ್ರಿ ಅವರು ಎರಡನೇ ಸುತ್ತಿನ ಮಾತುಕತೆಯನ್ನು ಸದ್ಯದಲ್ಲೇ ನಡೆಸಲಿದ್ದಾರೆ~ ಎಂದು ಹೇಳಿದರು. `ಪೊಲೀಸ್ ವೈಫಲ್ಯದ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿ ಗಳಾದ ಆರ್.ಕೆ.ದತ್ತ ಮತ್ತು ವೈದ್ಯ ನಾಥನ್ ಅವರು ಈಗಾಗಲೇ ತನಿಖೆ ಆರಂಭಿಸಿದ್ದಾರೆ. ಸರ್ಕಾರವು ಸಂಘರ್ಷವನ್ನು ಕೊನೆಗಾಣಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಿದೆ~ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.