ADVERTISEMENT

ಮೂಢನಂಬಿಕೆಗಳ ವಿರುದ್ಧ ಅರಿವು ಅಗತ್ಯ

​ಪ್ರಜಾವಾಣಿ ವಾರ್ತೆ
Published 22 ಜನವರಿ 2012, 19:30 IST
Last Updated 22 ಜನವರಿ 2012, 19:30 IST

ಬೆಂಗಳೂರು:  `ಅಸಮಾನತೆ ಹಾಗೂ ಮೂಢನಂಬಿಕೆಗಳ ವಿರುದ್ಧ ಒಂದೆಡೆ ಹೋರಾಟ ನಡೆಯುತ್ತಿದ್ದರೆ, ಇನ್ನೊಂದೆಡೆ ಅದನ್ನು ಉಳಿಸಿಕೊಂಡು ಅನುಸರಿಸುವಂತೆ ಸಮಾಜಘಾತುಕ ಶಕ್ತಿಗಳು ಪ್ರೇರೇಪಿಸುತ್ತಿವೆ. ಈ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸಬೇಕು~ ಎಂದು ಸಾಹಿತಿ ಬಿ.ಟಿ.ಲಲಿತಾನಾಯಕ್ ಹೇಳಿದರು.

ಪದ್ಮನಾಭನಗರ ವನಿತಾ ಸಮಾಜವು ಪದ್ಮನಾಭ ನಗರದ ಸಹಕಾರಿ ತರಬೇತಿ ಸಂಸ್ಥೆಯ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ 30ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
`ಮಹಿಳೆಯರು ಮೂಢನಂಬಿಕೆಯನ್ನು ಹೆಚ್ಚಾಗಿ ಪಾಲಿಸುತ್ತಾರೆ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಅರಿವಿರುವುದಿಲ್ಲ ಎಂಬ ಆರೋಪವಿದೆ. ಇದರಿಂದ ಮುಕ್ತಗೊಳ್ಳುವ ನಿಟ್ಟಿನಲ್ಲಿ ಮಹಿಳಾ ಪರ ಸಂಘಟನೆಗಳು ಕಾರ್ಯನಿರ್ವಹಿಸಬೇಕು~ ಎಂದರು.

`ರಾಜ್ಯದಲ್ಲಿ 18 ಲಕ್ಷ ಮಂದಿ ವೇಶ್ಯೆಯರಿದ್ದಾರೆ ಎಂಬ ಅಘಾತಕಾರಿ ಅಂಶವನ್ನು ಸಮೀಕ್ಷೆಯೊಂದು ಬಹಿರಂಗಪಡಿಸಿದ್ದು, ಇದು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಸಂಗತಿಯಾಗಿದೆ. ಈ ಸಮಸ್ಯೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಮಹಿಳಾಪರ ಸಂಘಟನೆಗಳು ಗಂಭೀರ ಚಿಂತನೆ ನಡೆಸಬೇಕು~ ಎಂದು ಹೇಳಿದರು.

`ದೇಶಗಳಲ್ಲಿ ಸುಮಾರು 24 ಲಕ್ಷ ದೇವಾಲಯಗಳಿದ್ದು, ಈ ಪೈಕಿ ಶೇ 74ರಷ್ಟು ಅಕ್ರಮ ದೇವಾಲಯಗಳೇ ತಲೆಯೆತ್ತಿವೆ. ಪುರೋಹಿತಶಾಹಿ ವರ್ಗವು ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ನಡೆಸುತ್ತಿರುವ ದಬ್ಬಾಳಿಕೆ ಯನ್ನು ವಿರೋಧಿಸಿ, ಜನತೆ ಆದರ್ಶ ತತ್ವಗಳನ್ನು ಆಳವಡಿಸಿಕೊಳ್ಳಬೇಕಿದೆ~ ಎಂದರು.

ಸಚಿವ ಆರ್.ಅಶೋಕ ಮಾತನಾಡಿ, `ದೇಶದಲ್ಲಿ ಅವ್ಯಾಹತವಾಗಿ ಸಂಘ- ಸಂಸ್ಥೆಗಳು ಸ್ಥಾಪನೆಯಾಗುತ್ತಿವೆ. ಆದರೆ, ಸ್ಥಾಪನೆಯ ಉದ್ದೇಶಕ್ಕೆ ಬದ್ದವಾಗಿ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳುತ್ತಿರುವ ಸಂಘಟನೆಗಳು ವಿರಳವಾಗಿದ್ದು, ಈ ಪೈಕಿ ವನಿತಾ ಸಂಘಟನೆಯು ಒಂದು~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
  
`ಸುಶಿಕ್ಷಿತ ಮಹಿಳೆ ಯರು ಈ ಮೊದಲು ವೈದ್ಯ ಮತ್ತು ಶಿಕ್ಷಕ ವೃತ್ತಿಯನ್ನೆ ಹೆಚ್ಚಾಗಿ ನೆಚ್ಚಿ ಕೊಂಡಿದ್ದರು. ಆದರೆ, ಪ್ರಸ್ತುತ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಕಾರ್ಯನಿರ್ವಹಿಸುತ್ತಿರುವುದು ಪ್ರಶಂಸನೀಯ. ಮಹಿಳೆ ಯರಿಗೆ ಎಲ್ಲ ರಂಗಗಳಲ್ಲಿಯೂ ಹೆಚ್ಚಿನ ಅವಕಾಶ ದೊರೆಯುವ ಸ್ಥಿತಿ ನಿರ್ಮಾಣವಾಗಬೇಕು~ ಎಂದರು.

ಲಕ್ಷ್ಮಿನಾರಾಯಣರಾವ್ (ಸಮಾಜ ಸೇವೆ), ಪ್ರೊ.ಬಿ.ಲಲಿತಾಂಬ (ಸಾಹಿತ್ಯ), ರೇಣುಕಾ ವಿಶ್ವನಾಥ್ (ವೇದ ಉಪನಿಷತ್ತು) ಹಾಗೂ ಮೋಹನ್ ಕುಮಾರ್ (ಜನಪದ) ಅವರನ್ನು ಸನ್ಮಾನಿಸಲಾಯಿತು. ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಪದ್ಮನಾಭನಗರ ಬಿಜೆಪಿ ಘಟಕದ ಅಧ್ಯಕ್ಷ ಶಶಿಕುಮಾರ್ ಇತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.