ADVERTISEMENT

‘ಮೂರು ತಲೆಮಾರಿಗೆ ಜಿಎಸ್‌ಟಿ ಪರಿಣಾಮ’

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2017, 20:14 IST
Last Updated 10 ಅಕ್ಟೋಬರ್ 2017, 20:14 IST
ಬೆಂಗಳೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಎಚ್‌.ಎನ್‌.ರಮೇಶ್‌ ಅವರಿಗೆ ಸಿ.ಎಸ್.ವಸಂತ್ ಕುಮಾರ್ ಸ್ಮರಣಿಕೆ ನೀಡಿ ಗೌರವಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಎಂ.ಮುನಿನಾರಾಯಣಪ್ಪ ಹಾಗೂ ಇಂಡಿಯನ್‌ ಕೌನ್ಸಿಲ್‌ ಫಾರ್‌ ಬಿಜಿನೆಸ್‌ ಎಜುಕೇಷನ್‌ನ ಅಧ್ಯಕ್ಷ ಡಾ. ಸಿ.ಎಂ.ಸಂಜೀವಯ್ಯ ಇದ್ದರು –ಪ್ರಜಾವಾಣಿ ಚಿತ್ರ
ಬೆಂಗಳೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಎಚ್‌.ಎನ್‌.ರಮೇಶ್‌ ಅವರಿಗೆ ಸಿ.ಎಸ್.ವಸಂತ್ ಕುಮಾರ್ ಸ್ಮರಣಿಕೆ ನೀಡಿ ಗೌರವಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಎಂ.ಮುನಿನಾರಾಯಣಪ್ಪ ಹಾಗೂ ಇಂಡಿಯನ್‌ ಕೌನ್ಸಿಲ್‌ ಫಾರ್‌ ಬಿಜಿನೆಸ್‌ ಎಜುಕೇಷನ್‌ನ ಅಧ್ಯಕ್ಷ ಡಾ. ಸಿ.ಎಂ.ಸಂಜೀವಯ್ಯ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸರಕು ಮತ್ತು ಸೇವಾ ತೆರಿಗೆಯಿಂದಾಗಿ (ಜಿಎಸ್‌ಟಿ) ಸರಕುಗಳ ಮಾರಾಟಗಾರರಿಗೆ ಅನುಕೂಲವಾಗಿದೆ. ಸೇವಾ ಕ್ಷೇತ್ರಕ್ಕೆ ಧಕ್ಕೆಯಾಗಿದೆ’ ಎಂದು ಲೆಕ್ಕಪರಿಶೋಧಕ ಆರ್‌.ಪಂಕಜ್ ಕುಮಾರ್‌ ಅಭಿಪ್ರಾಯಪಟ್ಟರು.

ಇನ್‌ಸ್ಟಿಟ್ಯೂಟ್‌ ಆಫ್‌ ಕಂಪೆನಿ ಸೆಕ್ರೆಟರೀಸ್‌ ಆಫ್‌ ಇಂಡಿಯಾವು (ಐಸಿಎಸ್ಐ) ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಸಹಯೋಗದಲ್ಲಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ವಾಣಿಜ್ಯ ಉಪನ್ಯಾಸಕರಿಗೆ ಜಿಎಸ್‌ಟಿ ಕುರಿತ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.

‘ಹೊಸ ತೆರಿಗೆ ನೀತಿಯಿಂದ ಮಾಹಿತಿ ತಂತ್ರಜ್ಞಾನ ವಲಯ, ತ್ವರಿತವಾಗಿ ಬಿಕರಿಯಾಗುವ ಉತ್ಪನ್ನಗಳ (ಎಫ್‌ಎಂಸಿಜಿ) ಮಾರಾಟಕ್ಕೆ ಅನುಕೂಲವಾಗಿದೆ. ಕಟ್ಟಡ ನಿರ್ಮಾಣ, ಶಿಕ್ಷಣ ಕ್ಷೇತ್ರ, ಆರೋಗ್ಯ, ಹೋಟೆಲ್‌ ಉದ್ಯಮಕ್ಕೆ ಧಕ್ಕೆ ಆಗಿದೆ. ಜಿಎಸ್‌ಟಿ ಪರಿಣಾಮ ಮುಂದಿನ ಮೂರು ತಲೆಮಾರುಗಳವರೆಗೂ ಇರಲಿದೆ’ ಎಂದು ಅವರು ಹೇಳಿದರು.

ADVERTISEMENT

‘ಜಿಎಸ್‌ಟಿಯಿಂದ ಸೇವಾ ವಲಯದ ತೆರಿಗೆಗಳು ಹೆಚ್ಚಳವಾಗಿವೆ. ಇದರಿಂದ ಸಾಮಾನ್ಯ ಜನರಿಗೆ ಹೊರೆಯಾಗಿದೆ. ಜಿಎಸ್‌ಟಿಯಲ್ಲಿ ಸಿಜಿಎಸ್‌ಟಿ ಮತ್ತು ಐಜಿಎಸ್‌ಟಿ ಎಂಬ ವಿಧಗಳಿವೆ. ಈ ತೆರಿಗೆಗಳನ್ನು ಯಾವಾಗ ಅನ್ವಯಿಸಬೇಕು ಎಂಬುದೇ ಬಹುತೇಕ ವ್ಯಾಪಾರೋದ್ಯಮಿಗಳಿಗೆ ತಿಳಿದಿಲ್ಲ’ ಎಂದು ತಿಳಿಸಿದರು.

ಐಸಿಎಸ್‌ಐ–ಬೆಂಗಳೂರು ಘಟಕದ ಅಧ್ಯಕ್ಷ ಸಿ.ಎಸ್.ವಸಂತ್‌ ಕುಮಾರ್‌, ‘ಕಂಪೆನಿಯೊಂದರ ಪ್ರಗತಿಗೆ ಹಣಕಾಸಿನ ವ್ಯವಹಾರ ನಿರ್ವಹಿಸುವ ಮಾನವ ಸಂಪನ್ಮೂಲ ಸಮರ್ಥವಾಗಿರಬೇಕು. ಅಂತಹ ಸಂಪನ್ಮೂಲವನ್ನು ವಾಣಿಜ್ಯ ವಿಭಾಗದ ಉಪನ್ಯಾಸಕರು ಸೃಷ್ಟಿಸುತ್ತಾರೆ. ದೇಶದ ಆರ್ಥಿಕ ಸುಧಾರಣೆಗಳ ಕುರಿತ ಇಂತಹ ಕಾರ್ಯಾಗಾರಗಳು ಬೋಧನೆಗೆ ಸಹಕಾರಿ ಆಗಲಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.