ADVERTISEMENT

`ಮೂರ್ಖ'ರಾಗಲು ನೂಕುನುಗ್ಗಲು!

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 19:06 IST
Last Updated 1 ಏಪ್ರಿಲ್ 2013, 19:06 IST

ಬೆಂಗಳೂರು: ಕೇವಲ ಒಂದು ರೂಪಾಯಿಗೆ ರೆಫ್ರಿಜರೇಟರ್, ವಾಷಿಂಗ್ ಮಷಿನ್ ಮತ್ತು ಗ್ರೈಂಡರ್ ಸಿಗುವುದೆಂದರೆ ಯಾರಿಗೆ ಬೇಡ? ಒಂದು ರೂಪಾಯಿ ಕೊಟ್ಟು ಅವುಗಳನ್ನೆಲ್ಲಾ ತೆಗೆದುಕೊಂಡು ಬರುವ ಹಂಬಲದಿಂದ ನಗರದ ಅರಮನೆ ಮೈದಾನಕ್ಕೆ ಸೋಮವಾರ ನಸುಕಿನಲ್ಲಿ ನೂರಾರು ಜನ ದಾಂಗುಡಿ ಇಟ್ಟಿದ್ದರು. ಬೆಳಕು ಹರಿಯುತ್ತಿದ್ದಂತೆಯೇ ತಾವೆಲ್ಲ `ಏಪ್ರಿಲ್ ಫೂಲ್'ಗಳಾಗಿದ್ದು ಅರಿವಿಗೆ ಬಂದು, ಬೇಸರದಿಂದ ಮನೆಯತ್ತ ಹೆಜ್ಜೆ ಹಾಕಿದರು.

ಖಾಸಗಿ ಎಫ್‌ಎಂ ರೇಡಿಯೊ ವಾಹಿನಿಯೊಂದು `ಏ. 1ರಂದು ಅರಮನೆ ಮೈದಾನದ ತ್ರಿಪುರವಾಸಿನಿ ದ್ವಾರದ ಬಳಿ ಗೃಹಬಳಕೆ ಸಾಮಗ್ರಿಗಳನ್ನು ಮಾರಾಟ ಮಾಡಲಾಗುತ್ತದೆ. ಹಳೆಯ ಸ್ಟಾಕ್ ಖಾಲಿ ಮಾಡಲು ಕೇವಲ ಒಂದು ರೂಪಾಯಿಗೆ ಮೂರು ವಸ್ತುಗಳನ್ನು ನೀಡಲಾಗುತ್ತದೆ. ರೆಫ್ರಿಜರೇಟರ್, ವಾಷಿಂಗ್ ಮಷಿನ್, ಟಿವಿ, ಗ್ರೈಂಡರ್ ಮತ್ತಿತರ ಸಾಮಗ್ರಿಗಳು ಅದರಲ್ಲಿ ಸೇರಿವೆ' ಎಂದು ಜಾಹೀರಾತು ಪ್ರಸಾರ ಮಾಡಿತ್ತು.

`ಮಾರಾಟವಾಗದೆ ಉಳಿದ ಅಂದಾಜು ಹತ್ತು ಸಾವಿರ ಸಾಮಗ್ರಿಗಳನ್ನು ಈ ವಿಶೇಷ ಮೇಳದಲ್ಲಿ ನೀಡಲಾಗುತ್ತದೆ. ಬಬ್ಬರಿಗೆ ಮೂರು ಸಾಮಾನು ಕೊಳ್ಳಲು ಮಾತ್ರ ಅವಕಾಶ. ಮೊದಲು ಬಂಂದವರಿಗೆ ಆದ್ಯತೆ' ಎಂದು ಘೋಷಣೆ ಮಾಡಲಾಗಿತ್ತು. ಈ ಜಾಹೀರಾತನ್ನು ನಂಬಿ, ನಗರದ ವಿವಿಧ ಬಡಾವಣೆಗಳ ಜನ ನಸುಕಿನಲ್ಲಿಯೇ ಅರಮನೆ ಮೈದಾನದತ್ತ ಧಾವಿಸಿ ಬಂದಿದ್ದರು.

ಮೈದಾನದಲ್ಲಿ ಸಂಘಟಕರು ಇಲ್ಲವೆ ಸಾಮಗ್ರಿಗಳು ಕಾಣದೆ ಜನ ಗಲಿಬಿಲಿಗೆ ಒಳಗಾದರು. ಇನ್ನೇನು ಲಾರಿಯಲ್ಲಿ ತೆಗೆದುಕೊಂಡು ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಕಾಯ್ದರು. `ನಮ್ಮ ಮನೆಯಿಂದ ನಾಲ್ಕು ಜನ ಬಂದಿದ್ದೆವು. ಒಂದು ರೂಪಾಯಿ ಮುಖಬೆಲೆಯ ನಾಲ್ಕು ನಾಣ್ಯಗಳನ್ನೂ ತಂದಿದ್ದೆವು. ಸಾಮಾನು ಕೊಂಡುಕೊಂಡು ಬಳಿಕ ತಿಳಿಸುತ್ತೇವೆ, ಅರಮನೆ ಮೈದಾನಕ್ಕೆ ಬಾ ಎಂದು ಮಿನಿಲಾರಿ ಚಾಲಕನೊಬ್ಬನಿಗೆ ತಿಳಿಸಿ ಬಂದಿದ್ದೆವು. ಇಲ್ಲಿ ಬಂದು ನೋಡಿದರೆ ನಿರಾಸೆಯಾಯಿತು' ಎಂದು ಗೊಲ್ಲರಟ್ಟಿಯಿಂದ ಬಂದಿದ್ದ ಸುರೇಶ್ ನೋವು ತೋಡಿಕೊಂಡರು.

`18 ಕಿ.ಮೀ. ದೂರರಿಂದ ನಸುಕಿನಲ್ಲೇ ಎದ್ದು ಬಂದಿದ್ದೇವೆ. ಆಟೊಕ್ಕೆ ರೂ 200 ಖರ್ಚು ಮಾಡಿದ್ದೇವೆ. ಜನರೊಂದಿಗೆ ಹೀಗೆಲ್ಲ ಚೆಲ್ಲಾಟವಾಡುವ ಪ್ರವೃತ್ತಿ ಒಳ್ಳೆಯದಲ್ಲ' ಎಂದು ಹೇಳಿದರು.

ಅರಮನೆ ಮೈದಾನದಲ್ಲಿ ನಸುಕಿನಲ್ಲಿಯೇ ಜನ ಜಮಾವಣೆ ಆಗುತ್ತಿರುವ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಜನರಿಂದ ವಿವರ ತಿಳಿದ ಅವರು ಮೇಲಧಿಕಾರಿಗಳಿಗೆ ವಿಷಯ ಮುಟ್ಟಿಸಿದರು. ಅಧಿಕಾರಿಗಳು ರೇಡಿಯೊ ವಾಹಿನಿ ಮುಖ್ಯಸ್ಥರನ್ನು ಸಂಪರ್ಕಿಸಿದಾಗ `ಏಪ್ರಿಲ್ ಫೂಲ್' ಮಾಡಲು ಹಾಗೆ ಯೋಚಿಸಲಾಗಿತ್ತು ಎಂಬುದು ತಿಳಿದುಬಂತು.

`ನೀವೆಲ್ಲ ಏಪ್ರಿಲ್ ಫೂಲ್ ಆಗಿದ್ದೀರಿ. ದಯವಿಟ್ಟು ನಿಮ್ಮ ಮನೆಗೆ ಹೋಗಿ' ಎಂದು ಸೇರಿದ್ದ ಜನಕ್ಕೆ ಪೊಲೀಸರು ಹೇಳಿ ಕಳುಹಿಸಿದರು. ಜಮಾವಣೆಯಾಗಿದ್ದ ಜನ ಚದುರಿದ ಮೇಲೂ ಜನ ಆಗಮಿಸುತ್ತಲೇ ಇದ್ದರು.

ಸಾಮಾನುಗಳನ್ನು ಒಯ್ಯಲು ಕೆಲವರು ಆಟೊಗಳನ್ನು ತಂದಿದ್ದರು. ದ್ವಾರದಲ್ಲಿದ್ದ ಭದ್ರತಾ ಸಿಬ್ಬಂದಿ ಸಮಜಾಯಿಷಿ ನೀಡುವಷ್ಟರಲ್ಲಿ ಸುಸ್ತು ಹೊಡೆದಿದ್ದರು. ದ್ವಾರದ ಬಳಿ ಯಾರೇ ಬಂದರೂ `ಏಪ್ರಿಲ್ ಫೂಲ್ ಮಾಡಿದ್ದಾರೆ. ಇಲ್ಲಿ ಯಾವುದೇ ಮೇಳ ಇಲ್ಲ' ಎನ್ನುತ್ತಿದ್ದರು. ತಮ್ಮನ್ನು ಮೂರ್ಖರನ್ನಾಗಿಸಿದ ಜಾಹೀರಾತಿಗೆ ಬೈದುಕೊಳ್ಳುತ್ತಾ ಜನ ವಾಪಸು ಹೋಗುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.