ADVERTISEMENT

ಮೂವರು ಮಕ್ಕಳನ್ನು ಕೊಲೆಗೈದು ತಂದೆ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 21 ಮೇ 2012, 18:30 IST
Last Updated 21 ಮೇ 2012, 18:30 IST
ಮೂವರು ಮಕ್ಕಳನ್ನು ಕೊಲೆಗೈದು ತಂದೆ ಆತ್ಮಹತ್ಯೆ
ಮೂವರು ಮಕ್ಕಳನ್ನು ಕೊಲೆಗೈದು ತಂದೆ ಆತ್ಮಹತ್ಯೆ   

ಯಲಹಂಕ: ಮೊದಲ ಪತ್ನಿಯ ಮಗಳ ಮದುವೆಗೆ ಹಣ ಹೊಂದಿಸಲು ಸಾಧ್ಯವಾಗದೆ ತಂದೆಯೊಬ್ಬ ತನ್ನ ಮೂವರು ಮಕ್ಕಳನ್ನು ಕೊಲೆಗೈದು ನಂತರ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಇಲ್ಲಿನ ಚೌಡೇಶ್ವರಿ ಬಡಾವಣೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ಮಗ್ಗದ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಮೂಲತಃ ಸೇಲಂ ಮೂಲದ ಧರ್ಮಲಿಂಗಂ (45), ಮಕ್ಕಳಾದ ಸುಂದರ್ ವಿಘ್ನೇಶ್ (10) ಇಂದು (8) ಹಾಗೂ ಶಕ್ತಿವೇಲು (6) ಆತ್ಮಹತ್ಯೆ ಮಾಡಿಕೊಂಡವರು. ಸದ್ಗುರು ಪ್ರಾಥಮಿಕ ಶಾಲೆಯಲ್ಲಿ ವಿಘ್ನೇಶ್ 4ನೇ ತರಗತಿ, ಇಂದು 2ನೇ ತರಗತಿ ಹಾಗೂ ಶಕ್ತಿವೇಲು ಯುಕೆಜಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಸುಮಾರು ಹತ್ತು ವರ್ಷಗಳಿಂದ ಚೌಡೇಶ್ವರಿ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಧರ್ಮಲಿಂಗಂಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ಮಹೇಶ್ವರಿಗೆ ಮೂರು ಹೆಣ್ಣು ಮಕ್ಕಳಾದ ಕಾರಣ ಗಂಡು ಮಗು ಪಡೆಯಬೇಕೆಂಬ ಉದ್ದೇಶದಿಂದ ಹೆಂಡತಿಯ ಒಪ್ಪಿಗೆಯ ಮೇರೆಗೆ 12 ವರ್ಷಗಳ ಹಿಂದೆ ತುಳಸಿ ಎಂಬುವರನ್ನು ಮದುವೆಯಾಗಿ ಇಬ್ಬರು ಪತ್ನಿಯರೊಂದಿಗೆ ಅನ್ಯೋನ್ಯವಾಗಿ ಸಂಸಾರ ನಡೆಸುತ್ತಿದ್ದರು ಎನ್ನಲಾಗಿದೆ. 

ಈ ನಡುವೆ, ಮೂರು ತಿಂಗಳ ಹಿಂದೆ ಸೇಲಂನಲ್ಲಿರುವ ತನ್ನ ತವರು ಮನೆಗೆ ಹೋಗಿದ್ದ ಎರಡನೇ ಪತ್ನಿ ತುಳಸಿ ಅಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈಗ ಮೃತಪಟ್ಟಿರುವ ಮೂವರು ಕೂಡ ಈಕೆಯ ಮಕ್ಕಳು. ಮೊದಲ ಪತ್ನಿ ಮಹೇಶ್ವರಿಗೆ ಗೀತಾ, ಶರಣ್ಯ ಹಾಗೂ ಪ್ರಿಯಾ ಎಂಬ ಮೂವರು ಹೆಣ್ಣು ಮಕ್ಕಳಿದ್ದು, ಗೀತಾ, ಶರಣ್ಯ ಅವರಿಗೆ ಈಗಾಗಲೇ ಮದುವೆಯಾಗಿದೆ. ಪ್ರಿಯಾ ಅವರಿಗೆ ತಮಿಳುನಾಡಿನ ತಿರುಪುರದಲ್ಲಿ ಬುಧವಾರ ಮದುವೆ ನಡೆಯಬೇಕಿತ್ತು.

ಹಣ ಹೊಂದಿಸಲು ಪರದಾಟ: ಈ ಮಧ್ಯೆ ಎರಡನೇ ಪತ್ನಿ ಮೃತಪಟ್ಟ ಘಟನೆಯಿಂದ ಮಾನಸಿಕವಾಗಿ ನೊಂದಿದ್ದ ಧರ್ಮಲಿಂಗಂ, ಮೂರು ತಿಂಗಳಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲ.

ಮಗಳ ಮದುವೆಗಾಗಿ ಹಣ ಹೊಂದಿಸಲು ಪರದಾಡುತ್ತಿದ್ದ ಎನ್ನಲಾಗಿದೆ. ಆರ್ಥಿಕ ಸಂಕಷ್ಟದಲ್ಲಿದ್ದ ತಂದೆಗೆ ಮೊದಲ ಪತ್ನಿಯ ಮಗಳು ಗೀತಾ ಒಡವೆಗಳನ್ನು ಅಡವಿಟ್ಟು ಹತ್ತು ಸಾವಿರ ರೂಪಾಯಿ ನೀಡಿದ್ದಳು. ಎರಡನೇ ಮಗಳಾದ ಶರಣ್ಯಳನ್ನು ಕರೆದುಕೊಂಡು ಬರುವುದಕ್ಕಾಗಿ ಪತ್ನಿ ಮಹೇಶ್ವರಿ ಮತ್ತು ಪ್ರಿಯಾ, ಗೀತಾ ಮತ್ತು ಆಕೆಯ ಪತಿಯನ್ನು ದೊಡ್ಡಬಳ್ಳಾಪುರಕ್ಕೆ ಕಳಿಸಿದ್ದರು.

ಸೋಮವಾರ ಬೆಳಿಗ್ಗೆ 6 ಗಂಟೆಗೆ ದೊಡ್ಡಬಳ್ಳಾಪುರದಿಂದ ಮನೆಗೆ ವಾಪಸ್ ಬಂದು ನೋಡಿದಾಗ ಧರ್ಮಲಿಂಗಂ ಮೂರು ಮಕ್ಕಳನ್ನು ಪ್ರತ್ಯೇಕವಾಗಿ ನೇಣು ಹಾಕಿ ಕೊಲೆಗೈದು ನಂತರ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಯಲಹಂಕ ಠಾಣೆಯ ಇನ್ಸ್‌ಪೆಕ್ಟರ್ ಈ. ಕೆಂಚೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಗಳ ಮದುವೆಗೆ ಹಣ ಹೊಂದಿಸಲು ಸಾಧ್ಯವಾಗದೆ ನಿರಾಶೆಯಿಂದ ಮಕ್ಕಳನ್ನು ಕೊಲೆಗೈದು ನಂತರ ಆತನೂ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಮತ್ತು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಂಬೇಡ್ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.