ADVERTISEMENT

ಮೂವರ ಬಂಧನ: ರೂ 8 ಲಕ್ಷ ಮೌಲ್ಯದ ವಸ್ತು ವಶ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 19:30 IST
Last Updated 24 ಫೆಬ್ರುವರಿ 2012, 19:30 IST

ಬೆಂಗಳೂರು: ಆನೆ ದಂತದಿಂದ ತಯಾರಿಸಿದ್ದ ಕೆತ್ತನೆಗಳನ್ನು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸಿಐಡಿ ಅರಣ್ಯ ಘಟಕದ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಫೈಜುಲ್ಲಾ ಖಾನ್, ಪ್ರವೀಣ್ ಮತ್ತು ದೆಹಲಿಯ ಮನೋಜ್‌ಜೋಷಿ ಬಂಧಿತರು. ಆರೋಪಿಗಳಿಂದ ಸುಮಾರು ಎಂಟು ಲಕ್ಷ ರೂಪಾಯಿ ಮೌಲ್ಯದ ಆನೆ ದಂತದ ಕೆತ್ತನೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಕಲಾಸಿಪಾಳ್ಯ ಬಸ್ ನಿಲ್ದಾಣದ ಬಳಿ ಆ ಕೆತ್ತನೆಗಳನ್ನು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಅವರನ್ನು ಬಂಧಿಸಲಾಯಿತು. ಅವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಎಸ್‌ಐಗಳಾದ ಅನಂತಯ್ಯ, ವಿ.ರಾಜು ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ADVERTISEMENT

ಸರಗಳ್ಳರ ಬಂಧನ: ಸರಗಳವು ಪ್ರಕರಣದ ಆರೋಪಿಗಳನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಸುಮಾರು ಆರು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಬೈಕ್ ವಶಪಡಿಸಿಕೊಂಡಿದ್ದಾರೆ. ಹಳೆ ಗುಡ್ಡದಹಳ್ಳಿಯ ಇಮ್ರೋನ್ ಷರೀಫ್ (22) ಮತ್ತು ಇಮ್ರೋನ್ ಬೇಗ್ (23) ಬಂಧಿತರು. ಆರೋಪಿಗ ಳಿಂದ 210 ಗ್ರಾಂ ತೂಕದ ಏಳು ಚಿನ್ನದ ಸರ ಮತ್ತಿತರ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅವರು ಸುಬ್ರಹ್ಮಣ್ಯಪುರ, ಬನಶಂಕರಿ, ಶಂಕರಪುರ, ಜ್ಞಾನಭಾರತಿ, ಮಾಗಡಿ ರಸ್ತೆ, ವಿಜಯನಗರ ಮತ್ತು ಯಲಹಂಕ ಠಾಣಾ ವ್ಯಾಪ್ತಿಯ ಬಡಾವಣೆಗಳಲ್ಲಿ ಸರಗಳನ್ನು ದೋಚಿದ್ದರು. ಆರೋಪಿಗಳ ಬಂಧನದಿಂದ ಎಂಟು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಮ್ರೋನ್ ವಿರುದ್ಧ ಕಲಾಸಿಪಾಳ್ಯ ಠಾಣೆಯಲ್ಲಿ ಆರು ಸರಗಳವು ಪ್ರಕರಣಗಳು ದಾಖಲಾಗಿದ್ದವು. ಅಲ್ಲದೇ ಫ್ರೇಜರ್‌ಟೌನ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಸರಗಳವು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು.

ಆ ಪ್ರಕರಣಗಳ ವಿಚಾರಣೆಗೆ ಹಾಜರಾಗದೆ ಆತ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಆತನ ಬಂಧನಕ್ಕೆ ವಾರೆಂಟ್ ಜಾರಿ ಮಾಡಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಸಿಸಿಬಿ ಇನ್‌ಸ್ಪೆಕ್ಟರ್‌ಗಳಾದ ಕೆ.ಸಿ.ಅಶೋಕನ್, ಬಿ.ಬಾಲರಾಜು ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ವಂಚನೆ: ಕೋಲಾರದ ರೂಪ್ ಸ್ಯಾಮ್ಯುಯಲ್ ಎಂಬಾತ ಹಣ ದ್ವಿಗುಣಗೊಳಿಸಿ ಕೊಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಯು `ಯು ಡಿಸರ್ವ್ ಇಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್~ ಎಂಬ ಕಂಪೆನಿಯ ಪ್ರತಿನಿಧಿ ಎಂದು ಹೇಳಿಕೊಂಡು ಆರು ತಿಂಗಳುಗಳಲ್ಲಿ ಹಣ ದ್ವಿಗುಣಗೊಳಿಸಿ ಕೊಡುವುದಾಗಿ ನಂಬಿಸಿ ಕೊಡಗು, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಜನರಿಂದ ಸುಮಾರು 10 ಲಕ್ಷ ರೂಪಾಯಿ ಹಣ ಪಡೆದಿದ್ದ. ಆ ನಂತರ ಹಣವನ್ನು ವಾಪಸ್ ನೀಡದೆ ಪರಾರಿಯಾಗಿದ್ದಾನೆ ಎಂದು ಸಿಐಡಿ ಪೊಲೀಸರು ಹೇಳಿದ್ದಾರೆ.

`ಆರೋಪಿಯು 50ಕ್ಕೂ ಹೆಚ್ಚು ಜನರಿಗೆ ವಂಚಿಸಿದ್ದಾನೆ. ಆತನಿಂದ ವಂಚನೆಗೊಳಗಾದ ಶಾರದಾ ಎಂಬುವರು ಭಾಗಮಂಡಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ~ ಎಂದು ಸಿಐಡಿ ಆರ್ಥಿಕ ಅಪರಾಧಗಳ ವಿಭಾಗದ ಎಸ್ಪಿ ಲೋಕೇಶ್‌ಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.

ಸ್ಯಾಮ್ಯುಯಲ್‌ನ ಬಗ್ಗೆ ಸಾರ್ವಜನಿಕರಿಗೆ ಸುಳಿವು ಇದ್ದರೆ ಸಿಐಡಿ ನಿಯಂತ್ರಣ ಕೊಠಡಿ ಸಂಖ್ಯೆ 080 22942444 ಅಥವಾ ಇನ್‌ಸ್ಪೆಕ್ಟರ್ ಎನ್.ಸಿ.ನಾಗರಾಜ್ ಅವರ ಮೊಬೈಲ್ ಸಂಖ್ಯೆ 95359 71231ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.