ADVERTISEMENT

‘ಮೆಟ್ರೊ’ಕ್ಕೆ ರಿಯಾಯಿತಿ ದರದಲ್ಲಿ ವಿದ್ಯುತ್‌

ಕೆಇಆರ್‌ಸಿಗೆ ಕೋರಿಕೆ ಸಲ್ಲಿಸಿದ ಬಿಎಂಆರ್‌ಸಿಎಲ್‌

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2018, 20:14 IST
Last Updated 28 ಮಾರ್ಚ್ 2018, 20:14 IST
‘ಮೆಟ್ರೊ’ಕ್ಕೆ ರಿಯಾಯಿತಿ ದರದಲ್ಲಿ ವಿದ್ಯುತ್‌
‘ಮೆಟ್ರೊ’ಕ್ಕೆ ರಿಯಾಯಿತಿ ದರದಲ್ಲಿ ವಿದ್ಯುತ್‌   

ಬೆಂಗಳೂರು: ‘ನಮ್ಮ ಮೆಟ್ರೊ’ ಸೇವೆಗೆ ಬಳಸುವ ವಿದ್ಯುತ್‌ಗೆ ಪ್ರತ್ಯೇಕ ದರ ನಿಗದಿಪಡಿಸುವಂತೆ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಆರ್‌ಇಸಿ) ಹಾಗೂ ಬೆಸ್ಕಾಂಗೆ ಕೋರಿಕೆ ಸಲ್ಲಿಸಿದೆ.

ವಿದ್ಯುತ್ ದರ ಪರಿಷ್ಕರಣೆಗೆ ಸಿದ್ಧತೆ ನಡೆಸಿರುವ ಕೆಆರ್‌ಇಸಿ ಈ ಸಂಬಂಧ ಬಳಕೆದಾರ ಸಂಸ್ಥೆಗಳಿಂದ ಅಭಿಪ್ರಾಯ ಸಂಗ್ರಹಿಸುತ್ತಿದೆ.

‘ಈಗಿರುವ ದರವನ್ನು ಪರಿಷ್ಕರಿಸಬೇಕು. ಪ್ರತಿ ಯೂನಿಟ್‌ಗೆ ಈಗಿನ ದರಕ್ಕಿಂತ ಒಂದೂವರೆ ರೂಪಾಯಿಯಷ್ಟು ಕಡಿಮೆ ಮೊತ್ತವನ್ನು ನಿಗದಿ
ಪಡಿಸಬೇಕು’ ಎಂದು ಬಿಎಂಆರ್‌ಸಿಎಲ್ ಒತ್ತಾಯಿಸಿದೆ.

ADVERTISEMENT

‘ಯೂನಿಟ್‌ಗೆ ₹ 5 ನಿಗದಿಪಡಿಸುವಂತೆ ಬಿಎಂಆರ್‌ಸಿಎಲ್‌ನವರುಕೋರಿದ್ದಾರೆ. ದೇಶದ ಇತರ ಮೆಟ್ರೊಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ದರ. ದೆಹಲಿ ಮೆಟ್ರೊ ಪ್ರತಿ ಯೂನಿಟ್‌ ವಿದ್ಯುತ್‌ಗೆ ₹ 6.5 ಪಾವತಿಸುತ್ತಿದೆ’ ಎಂದು ಹೆಸರು ಹೇಳಲಿಚ್ಛಿಸದ ಕೆಆರ್‌ಇಸಿ ಅಧಿಕಾರಿಯೊಬ್ಬರು ತಿಳಿಸಿದರು.

‘ಮೆಟ್ರೊ ನಿಗಮವು ಲಾಭಗಳಿಸುತ್ತಿದೆ. ಆದರೂ ವಿದ್ಯುತ್‌ ದರ ಪರಿಷ್ಕರಣೆಗೆ ಒತ್ತಾಯಿಸುತ್ತಿದೆ. ದರವನ್ನು ಇಳಿಸುವಂತೆ ಕಳೆದ ವರ್ಷವೂ ಮನವಿ ಮಾಡಿತ್ತು’ ಎಂದರು.

‘ವಿದ್ಯುತ್‌ ದರವನ್ನು ಇಳಿಸದಿದ್ದರೆ ಟಿಕೆಟ್‌ ದರವನ್ನು ಹೆಚ್ಚಿಸುವ ಮೂಲಕ ಪ್ರಯಾಣಿಕರಿಗೆ ಹೊರೆಯನ್ನು ವರ್ಗಾಯಿಸಬೇಕಾಗುತ್ತದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ’ ಎಂದು ಹೆಸರು ಇಂಧನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಟಿಕೆಟ್‌ ಮಾರಾಟದಿಂದ ಬಿಎಂಆರ್‌ಸಿಎಲ್‌ ಪ್ರತಿ ತಿಂಗಳು ₹95 ಲಕ್ಷದಿಂದ ₹ 1 ಕೋಟಿಯಷ್ಟು ವರಮಾನ ಗಳಿಸುತ್ತಿದೆ. ಇದರಲ್ಲಿ ವಿದ್ಯುತ್‌ ದರ ಪಾವತಿಗಾಗಿಯೇ ₹ 50 ಲಕ್ಷ ವೆಚ್ಚ ಮಾಡುತ್ತಿದೆ. ವರಮಾನದಲ್ಲಿ ವಿದ್ಯುತ್‌ಗೆ ಇಷ್ಟೊಂದು ಪ್ರಮಾಣವನ್ನು ವೆಚ್ಚ ಮಾಡುವುದರಿಂದ ಹೊರೆಯಾಗುತ್ತಿದೆ ಎಂಬುದು ನಿಗಮದ ಅಧಿಕಾರಿಗಳ ವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.