ADVERTISEMENT

`ಮೆಟ್ರೊ' ಕಾರ್ಮಿಕರಿಗೆ ಉಸಿರಾಟದ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 20:02 IST
Last Updated 21 ಏಪ್ರಿಲ್ 2013, 20:02 IST

ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ `ನಮ್ಮ ಮೆಟ್ರೊ' ಕಾಮಗಾರಿಯ ಕಾರ್ಮಿಕರನ್ನು ಉಸಿರಾಟ ಸಂಬಂಧಿ ಕಾಯಿಲೆಗಳು ಬಾಧಿಸುತ್ತಿವೆ. ನಿರ್ಮಾಣ ಕಾಮಗಾರಿಯ ಕಾರ್ಮಿಕರಿಗೆ ಕೆಮ್ಮು ಹಾಗೂ ಉಸಿರಾಟದ ಸಮಸ್ಯೆ ಹೆಚ್ಚಾಗಿದೆ.

`ಕೆಮ್ಮು ಬಂದರೆ 10 ನಿಮಿಷವಾದರೂ ನಿಲ್ಲುವುದಿಲ್ಲ. ಸರಿಯಾಗಿ ಉಸಿರಾಡಲು ಸಾಧ್ಯವಾಗುವುದಿಲ್ಲ. ರಾತ್ರಿ ವೇಳೆ ಉಸಿರಾಡಲು ತುಂಬಾ ಕಷ್ಟವಾಗುತ್ತದೆ' ಎಂದು ಕಾರ್ಮಿಕ ಕಿಷನ್ ದಾಸ್ ಹೇಳಿದರು.

`ನಮ್ಮ ಮೆಟ್ರೊ' ಕಾಮಗಾರಿಯಲ್ಲಿ ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಬಿಹಾರ ರಾಜ್ಯಗಳ ಕಾರ್ಮಿಕರೇ ಹೆಚ್ಚಾಗಿದ್ದು, ಅವರಿಗೆ ಸರಿಯಾದ ಆರೋಗ್ಯ ಸೌಲಭ್ಯ ಹಾಗೂ ಸುರಕ್ಷತಾ ಸಾಧನಗಳನ್ನು ನೀಡುತ್ತಿಲ್ಲ ಎಂಬ ಆರೋಪ ಎದುರಾಗಿದೆ.

`ಕಾಮಗಾರಿ ಸಮಯದಲ್ಲಿ ಧರಿಸಲು ನಮಗೆ ಮಾಸ್ಕ್ ನೀಡಿಲ್ಲ. ಇದರಿಂದ ದೂಳನ್ನು ಕುಡಿಯುವುದು ಅನಿವಾರ್ಯವಾಗಿದೆ. ಹೀಗಾಗಿ ಕನಿಷ್ಠ ತಿಂಗಳಿಗೊಮ್ಮೆ ಆರೋಗ್ಯ ಕೆಡುತ್ತಿದೆ' ಎಂದು ತಮ್ಮ ಸಮಸ್ಯೆಯನ್ನು ಹೇಳಿಕೊಂಡವರು ಎರಡು ವರ್ಷಗಳಿಂದ `ನಮ್ಮ ಮೆಟ್ರೊ' ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ಒಡಿಶಾ ಮೂಲದ ಅನಿಲ್.

ಕಾಮಗಾರಿ ಸಂದರ್ಭದಲ್ಲಿ ದೂಳು ಹೆಚ್ಚಾಗಿರುವುದರಿಂದ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕಾಗಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯ ಎಂಬುದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರ ಸಲಹೆ.

ಆರೋಗ್ಯ ಸೌಲಭ್ಯಗಳು ಹಾಗೂ ಮಾಸ್ಕ್ ನೀಡದೇ ಇರುವ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುವುದಾಗಿ ಬಿಎಂಆರ್‌ಸಿಎಲ್ ವಕ್ತಾರ ಬಿ.ಎಲ್.ಯಶವಂತ ಚವ್ಹಾಣ್ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.