ADVERTISEMENT

ಮೆಟ್ರೊ ಪ್ರಯಾಣಿಕರಿಗೂ ಟ್ರಿಣ್‌ ಟ್ರಿಣ್‌ ಬೈಸಿಕಲ್‌!

​ಪ್ರಜಾವಾಣಿ ವಾರ್ತೆ
Published 2 ಜುಲೈ 2017, 20:04 IST
Last Updated 2 ಜುಲೈ 2017, 20:04 IST
ಮೆಟ್ರೊ ಪ್ರಯಾಣಿಕರಿಗೂ ಟ್ರಿಣ್‌ ಟ್ರಿಣ್‌ ಬೈಸಿಕಲ್‌!
ಮೆಟ್ರೊ ಪ್ರಯಾಣಿಕರಿಗೂ ಟ್ರಿಣ್‌ ಟ್ರಿಣ್‌ ಬೈಸಿಕಲ್‌!   

ಬೆಂಗಳೂರು: ನಗರದಲ್ಲಿ ವಾಹನ ಸಂಚಾರ ದಟ್ಟಣೆ ತಗ್ಗಿಸಲು ಮತ್ತು ಮೆಟ್ರೊ ರೈಲು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಬೆಂಗಳೂರು ಬೃಹತ್‌ ಮಹಾನಗರ ಪಾಲಿಕೆ ‘ಟ್ರಿಣ್‌ ಟ್ರಿಣ್‌ ಸೈಕಲ್‌’ ಸೌಲಭ್ಯ ಪರಿಚಯಿಸಲು ಮುಂದಾಗಿದೆ.

‘ಹೀರೊ ಸೈಕಲ್‌ ಕಂಪೆನಿ ಮೆಟ್ರೊ ರೈಲು ಪ್ರಯಾಣಿಕರಿಗೆ ಗಂಟೆ ಲೆಕ್ಕದಲ್ಲಿ ಬಾಡಿಗೆಗೆ ಸೈಕಲ್‌ ಸೇವೆ ಒದಗಿಸಲು ಮುಂದೆ ಬಂದಿದೆ. ಬಿಬಿಎಂಪಿ, ಬಿಎಂಆರ್‌ಸಿಎಲ್ ಹಾಗೂ ನಗರ ಭೂಸಾರಿಗೆ ನಿರ್ದೇಶನಾಲಯದ ಅಧಿಕಾರಿಗಳು ಯೋಜನೆ ಅನುಷ್ಠಾನ ಸಂಬಂಧ ಈಗಾಗಲೇ ಒಂದು ಸುತ್ತಿನ ಚರ್ಚೆ ನಡೆಸಿದ್ದೇವೆ. ಕಂಪೆನಿಯ ಪ್ರತಿನಿಧಿಗಳೊಂದಿಗೆ ಈ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಸಭೆ ನಡೆಸುತ್ತೇವೆ’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯೋಜನೆ ಇನ್ನೂ ಚರ್ಚೆಯ ಹಂತದಲ್ಲಿದೆ. ಯಾವ ಯಾವ ಮಾರ್ಗದಲ್ಲಿ ಯೋಜನೆ ಅನುಷ್ಠಾನಗೊಳಿಸಬಹುದೆನ್ನುವುದರ ಬಗ್ಗೆ ಕಂಪೆನಿ ವಿಸ್ತೃತ ವರದಿ ಸಲ್ಲಿಸಿದ ನಂತರ ಯೋಜನೆಯ ಕಾರ್ಯಸಾಧ್ಯತೆ ಬಗ್ಗೆ ಪರಿಶೀಲಿಸಿ, ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದೇವೆ’ ಎನ್ನುತ್ತಾರೆ ಅವರು.

ADVERTISEMENT

ವಾಹನ ದಟ್ಟಣೆಯಿಂದ ನಲುಗುತ್ತಿರುವ ರಸ್ತೆಗಳಲ್ಲಿ ಟ್ರಿಣ್‌ ಟ್ರಿಣ್‌ ಸೈಕಲ್‌ಗಳಿಗೆ ಪ್ರತ್ಯೇಕ ಪಥ ಒದಗಿಸುವ ದೊಡ್ಡ ಸವಾಲು ಪಾಲಿಕೆ ಮುಂದಿದೆ. ಮೆಟ್ರೊ ನಿಲ್ದಾಣಗಳ ಬಳಿಯೇ ಬಾಡಿಗೆ ಸೈಕಲ್‌ಗಳಿಗೂ ತಾಣ ಒದಗಿಸಬೇಕಿದೆ ಸುರಕ್ಷಿತ ಮತ್ತು ನಿರ್ಭಯವಾಗಿ ಸೈಕಲ್‌ ಸವಾರಿ ನಡೆಸಬಹುದೆನ್ನುವ ವಿಶ್ವಾಸ ಪ್ರಯಾಣಿಕರಿಗೆ ಬರುವಂತೆ ಮಾಡಿದರೆ ಮಾತ್ರ ಸೌಲಭ್ಯ ಬಳಸಿಕೊಳ್ಳಲು ಜನರು ಆಸಕ್ತಿ ತೋರುತ್ತಾರೆ.

ಇದನ್ನು  ಗಮನದಲ್ಲಿಟ್ಟುಕೊಂಡೇ, ಸೈಕಲ್‌ ಸಂಚಾರಕ್ಕೆ ಪಥ ರೂಪಿಸುತ್ತೇವೆ. ಮೆಟ್ರೊ ನಿಲ್ದಾಣಗಳಲ್ಲಿ ಇಳಿದು ಹತ್ತಿರದ ಮೂರ್ನಾಲ್ಕು ಕಿ.ಮೀ. ವ್ಯಾಪ್ತಿಯ ಕಚೇರಿಗಳಿಗೆ ತೆರಳುವವರಿಗೆ ಬಾಡಿಗೆ ಸೈಕಲ್‌ ಹೆಚ್ಚು ಸಹಕಾರಿಯಾಗಲಿದೆ ಎನ್ನುತ್ತಾರೆ ಅವರು.

‘ಹಿಂದೊಮ್ಮೆ ಆರಂಭವಾಗಿದ್ದ ಟ್ರಿಣ್‌ ಟ್ರಿಣ್‌ ಸೈಕಲ್‌ ಯೋಜನೆ ಯಾವ ಕಾರಣಕ್ಕೆ ಯಶಸ್ವಿಯಾಗಲಿಲ್ಲ ಎನ್ನುವುದು ಗೊತ್ತಿಲ್ಲ. ಹಿಂದೆ ಮೆಟ್ರೊ ಮೊದಲ ಹಂತ ಪೂರ್ಣವಾಗದಿರುವುದೂ ಯೋಜನೆ ವೈಫಲ್ಯಕ್ಕೆ ಕಾರಣವಾಗಿರಬಹುದು. ಈಗ ಗ್ರೀನ್‌ ಕಾರಿಡಾರ್‌ನಲ್ಲೂ ಮೆಟ್ರೊ ರೈಲು ಸೇವೆ ಆರಂಭವಾಗಿದೆ. ಇದರಿಂದ ಮೆಟ್ರೊ ಪ್ರಯಾಣಿಕರಿಗೆ ಬಾಡಿಗೆಗೆ ಸೈಕಲ್‌ ಒದಗಿಸುವ ಪರಿಕಲ್ಪನೆ ಖಂಡಿತಾ ಯಶಸ್ವಿಯಾಗಲಿದೆ’ ಎನ್ನುವುದು ಅವರ ವಿಶ್ವಾಸದ ನುಡಿ.

ಟ್ರಿಣ್‌ ಟ್ರಿಣ್‌ ಸೈಕಲ್‌ ಯೋಜನೆಗೂ ಅವಕಾಶವಿರುವಂತೆ ಮೆಟ್ರೊ ಎರಡನೇ ಹಂತದ ಕಾಮಗಾರಿ ನಡೆಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಕುಮಾರ್‌ ಖರೋಲಾ ಅವರೊಂದಿಗೆ ಚರ್ಚಿಸಲಾಗಿದೆ. ಟ್ರಿಣ್‌ ಟ್ರಿಣ್‌ ಸೈಕಲ್‌ ಯೋಜನೆಯ ರೂಪರೇಷೆಯನ್ನು ನಗರ ಭೂಸಾರಿಗೆ ನಿರ್ದೇಶನಾಲಯ ಸಿದ್ಧಪಡಿಸಿಕೊಡಲಿದೆ ಎಂದು ಅವರು ತಿಳಿಸಿದರು.

***

ಎರಡನೇ ನಗರಿಯ ಗರಿ
‘ಟ್ರಿಣ್ ಟ್ರಿಣ್’ ಬಾಡಿಗೆ ಸೈಕಲ್‌ ಯೋಜನೆ ಈಗಾಗಲೇ ಮೈಸೂರಿನಲ್ಲಿ ಜಾರಿಯಲ್ಲಿದೆ. 52 ನಿಲ್ದಾಣಗಳಲ್ಲಿ 450 ಸೈಕಲ್ ಬಾಡಿಗೆಗೆ ಒದಗಿಸಲಾಗುತ್ತಿದೆ.

ಬೆಂಗಳೂರಿನಲ್ಲಿಯೂ ಈ ಯೋಜನೆ ಜಾರಿಗೆ ಬಂದರೆ ‘ಟ್ರಿಣ್ ಟ್ರಿಣ್’ ಬಾಡಿಗೆ ಸೈಕಲ್‌ ಒದಗಿಸುತ್ತಿರುವ ಏಷ್ಯಾದ ಎರಡನೇ ಮಹಾನಗರಿ ಎನ್ನುವ ಗರಿ ಸಿಲಿಕಾನ್‌ ಸಿಟಿಗೆ ದಕ್ಕಲಿದೆ.

ಸೈಕಲ್‌ ತುಳಿಯುವ ಆಸಕ್ತರು, ಮೆಟ್ರೊ ನಿಲ್ದಾಣದಲ್ಲಿ ಇಳಿದು ಟ್ಯಾಕ್ಸಿ, ಆಟೊ, ಬಸ್‌ ಕಾಯುತ್ತ ನಿಲ್ಲಬೇಕಿಲ್ಲ. ನಿಲ್ದಾಣದಲ್ಲೇ ಒಂದು ಬದಿ ಲಾಕ್‌ ಮಾಡಿ ಬಾಡಿಗೆಗೆ ಕೊಡಲು ಸನ್ನದ್ಧವಾಗಿ ನಿಲ್ಲಿಸಿರುವ ಟ್ರಿಣ್‌ ಟ್ರಿಣ್‌ ಸೈಕಲ್‌ಗಳನ್ನು ಸ್ಮಾರ್ಟ್‌ ಕಾರ್ಡ್‌ ಪಂಚ್‌ ಮಾಡಿ ಪಡೆಯಬಹುದು. ತಾವು ತಲುಪಬೇಕಿರುವ ಕಚೇರಿ ಅಥವಾ ಗಮ್ಯ ಸ್ಥಳ ತಲುಪಲು ಸವಾರಿ ಹೊರಡಬಹುದು. ತಮ್ಮ ಕೆಲಸ ಮುಗಿಸಿಕೊಂಡು ಪುನಾ ಮೆಟ್ರೊ ನಿಲ್ದಾಣಗಳಿಗೆ ಸೈಕಲ್‌ ಒಪ್ಪಿಸಿ, ರೈಲು ಹತ್ತಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.