ಬೆಂಗಳೂರು: ಬಿಬಿಎಂಪಿಯು ನಾಡಪ್ರಭು ಕೆಂಪೇಗೌಡ ದಿನಾಚರಣೆ ಪ್ರಯುಕ್ತ ಭಾನುವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ `ಮೇಯರ್ ಕಪ್~ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಯುಕ್ತರ `ಎ~ ತಂಡ ಗೆಲುವು ಸಾಧಿಸಿತು.
ಬೆಳಿಗ್ಗೆ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿದ ಉಪ ಮೇಯರ್ ಎಸ್. ಹರೀಶ್ ನೇತೃತ್ವದ ಮೇಯರ್ `ಎ~ ತಂಡವು ನಿಗದಿತ 20 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತು. ಆನಂತರ ಉತ್ತಮ ಪ್ರದರ್ಶನ ನೀಡಿದ ಎಂ.ಕೆ. ಶಂಕರಲಿಂಗೇಗೌಡ ನೇತೃತ್ವದ ಆಯುಕ್ತರ `ಎ~ ತಂಡವು 18 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು.
ಮಧ್ಯಾಹ್ನ ನಡೆದ ಸೌಹಾರ್ದ ಪಂದ್ಯದಲ್ಲಿ ಪಾಲಿಕೆ ಸದಸ್ಯ ರಮೇಶ್‌ರಾಜು ನೇತೃತ್ವದ ಮೇಯರ್ `ಬಿ~ ತಂಡ ಜಯ ಗಳಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಮೇಯರ್ `ಬಿ~ ತಂಡವು 15 ಓವರ್‌ಗಳಲ್ಲಿ 137 ರನ್ ಗಳಿಸಿದರೆ, ಪಾಲಿಕೆ ಸಾರ್ವಜನಿಕ ಸಂಪರ್ಕಾಧಿಕಾರಿ ಶಿವಶರಣಪ್ಪ ಖಂಡ್ರೆ ನೇತೃತ್ವದ ಮಾಧ್ಯಮ ತಂಡವು 15 ಓವರ್‌ಗಳಲ್ಲಿ ಏಳು ಕಳೆದುಕೊಂಡು 122 ರನ್ ಗಳಿಸುವ ಮೂಲಕ ಸೋಲೊಪ್ಪಿಕೊಂಡಿತು.
ಇದಕ್ಕೂ ಮುನ್ನ ನಿವೃತ್ತ ಕ್ರಿಕೆಟಿಗ ಸುನಿಲ್ ಜೋಷಿ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು. ಪಾಲಿಕೆಯ ವಿರೋಧ ಪಕ್ಷದ ಮಾಜಿ ನಾಯಕ ಎಂ. ನಾಗರಾಜ್ ವೀಕ್ಷಕ ವಿವರಣೆ ನೀಡಿದರು. ಏಪ್ರಿಲ್ 6 ರಂದು ನಡೆಯುವ ಕೆಂಪೇಗೌಡ ದಿನಾಚರಣೆ ಸಮಾರಂಭದಲ್ಲಿ ವಿಜೇತ ತಂಡಕ್ಕೆ ಟ್ರೋಫಿ ಪ್ರದಾನ ಮಾಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.