ಬೆಂಗಳೂರು: ಕನ್ನಡದ ಮೇರು ನಟ ಡಾ. ರಾಜ್‌ಕುಮಾರ್ ಅವರ 84ನೇ ಹುಟ್ಟು ಹಬ್ಬವನ್ನು ನಗರದಲ್ಲಿ ಮಂಗಳವಾರ ಅತ್ಯಂತ ಸಡಗರ- ಸಂಭ್ರಮದಿಂದ ಆಚರಿಸಲಾಯಿತು.
ವರ ನಟ ಅಸ್ತಂಗತರಾಗಿ ಆರು ವರ್ಷಗಳು ಕಳೆದರೂ ಅಭಿಮಾನಿಗಳ ಪ್ರೀತಿ-ಪ್ರೇಮಕ್ಕೆ ಕಿಂಚಿತ್ತೂ ಕೊರತೆ ಇರಲಿಲ್ಲ. ಬೆಳಿಗ್ಗೆಯಿಂದಲೇ ಅಪಾರ ಸಂಖ್ಯೆಯ ಅಭಿಮಾನಿಗಳ ದಂಡು ಕಂಠೀರವ ಸ್ಟುಡಿಯೋ ಬಳಿಯ ಅವರ ಸಮಾಧಿ ಬಳಿಗೆ ಆಗಮಿಸಿ ಗೌರವ ಸಲ್ಲಿಸಿದರು.
ಡಾ. ರಾಜ್ ಪುತ್ರರಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಸಮಾಧಿ ಸ್ಥಳದಲ್ಲಿ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು. ಹುಟ್ಟು ಹಬ್ಬದ ಅಂಗವಾಗಿ ರಾಜ್ ಸಮಾಧಿಯನ್ನು ಬಣ್ಣ-ಬಣ್ಣದ ಹೂಗಳಿಂದ ಅಲಂಕರಿಸಲಾಗಿತ್ತು. ರಾಜ್ ಪುತ್ರರು ಸಮಾಧಿ ಸ್ಥಳಕ್ಕೆ ಆಗಮಿಸಿದಾಗಲಂತೂ ಅಭಿಮಾನಿಗಳ ದಂಡು ಅವರಿಗೆ ಹಸ್ತಲಾಘವ ನೀಡಲು ಮುಗಿಬಿದ್ದಿತು. ಆಗ ಪೊಲೀಸರು ಲಾಠಿ ರುಚಿ ತೋರಿಸಿ ಅವರನ್ನು ಚದುರಿಸಿದರು.
ಸಮಾರಂಭ ನಡೆದ ಸ್ಥಳದಲ್ಲಿಯೂ ನೂಕು-ನುಗ್ಗಲು ಉಂಟಾಗಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ರಾಜ್ ಹುಟ್ಟು ಹಬ್ಬದ ಅಂಗವಾಗಿ ನೂರಾರು ಅಭಿಮಾನಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.
ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ನಗರವಲ್ಲದೆ, ಹೊರ ಭಾಗಗಳಿಂದಲೂ ಸಮಾಧಿ ಸ್ಥಳಕ್ಕೆ ರಾಜ್ ಅಭಿಮಾನಿಗಳ ದಂಡು ಆಗಮಿಸಿದ್ದರಿಂದ ವರ್ತುಲ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೂ ಅಡ್ಡಿಯುಂಟಾಯಿತು.
ಸಮಾಧಿ ಮೇಲೆ ಫೋಟೊ
ಈ ನಡುವೆ, ಸಚಿವರಾದ ಆರ್. ಅಶೋಕ ಹಾಗೂ ವಿ. ಸೋಮಣ್ಣ ಅವರು ಡಾ. ರಾಜ್ ಸಮಾಧಿ ಮೇಲೆ ಅಚಾತುರ್ಯದಿಂದ ಕಾಲಿಟ್ಟು ಪುಷ್ಪ ನಮನ ಸಲ್ಲಿಸಿದ್ದಕ್ಕೆ ಸಾಹಿತಿ ಬರಗೂರು ರಾಮಚಂದ್ರಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
`ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹಾಗೂ ರಾಜ್ ಕುಟುಂಬದವರೇ ಕೆಳಗಡೆ ನಿಂತು ರಾಜ್ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರೆ, ಇಬ್ಬರು ಸಚಿವರು ಸಮಾಧಿ ಮೇಲೆ ಕಾಲಿಟ್ಟು ಮಾಧ್ಯಮಗಳಿಗೆ ಫೋಜು ನೀಡಿದ್ದು ಆಕ್ಷೇಪಾರ್ಹ. ಒಬ್ಬ ಮೇರು ನಟನ ಸಮಾಧಿ ಮೇಲೆ ಕಾಲಿಡಬಹುದೇ ಅಥವಾ ಬೇಡವೇ ಎಂಬ ಕನಿಷ್ಠ ಔಚಿತ್ಯ ಪ್ರಜ್ಞೆ ಸಚಿವರಿಗೆ ಇರಬೇಕು~ ಎಂದು ಟೀಕಿಸಿದರು.
`ಎಲ್ಲ ಅವಮಾನಗಳನ್ನೂ ಸಹಿಸಿಕೊಂಡು ಮೌನ ಸಮರದ ಮೂಲಕ ಎತ್ತರಕ್ಕೇರಿದ ಮುತ್ತುರಾಜ್ ನಿಜವಾದ ಅರ್ಥದಲ್ಲಿಯೂ ರಾಜ್‌ಕುಮಾರ್ ಆದವರು. ಸದಭಿರುಚಿಯ ಸಾಕ್ಷಿ ಪ್ರಜ್ಞೆ ಅವರಿಗಿತ್ತು. ಹೀಗಾಗಿ, ಅವರು ಜನರ ಮನ ಮುಟ್ಟುವ ಸಿನಿಮಾ ಮಾಡಿದರೇ ಹೊರತು ಮೈ ಮುಟ್ಟುವ ಸಿನಿಮಾ ಮಾಡಲಿಲ್ಲ. ಅಂತಹ ಮೇರು ನಟನ ಸಮಾಧಿ ಮೇಲೆ ಕಾಲಿಡುವುದು ಆಕ್ಷೇಪಾರ್ಹ~ ಎಂದು ಅಸಮಾಧಾನ ಹೊರಹಾಕಿದರು.
`ಡಾ.ರಾಜ್ ಸಮಾಧಿಯನ್ನು ನಾವು ಸಮಾಧಿಯೆಂದು ಭಾವಿಸಿಲ್ಲ. ಅದು ಸಂಸ್ಕೃತಿಯ ಸ್ಥಳ. ನಟ ರಾಜ್ ಕೇವಲ ಸಿನಿಮಾ ರಂಗಕ್ಕೆ ಸೀಮಿತವಾದ ವ್ಯಕ್ತಿ ಅಲ್ಲ. ಜಾತಿ, ಶಿಕ್ಷಣ, ಹಣವನ್ನೂ ಮೀರಿ ಬೆಳೆದ ಮಹಾನ್ ವ್ತಕ್ತಿ. ಶ್ರದ್ಧೆ, ಆತ್ಮವಿಶ್ವಾಸ, ಸಂಕಲ್ಪವಿದ್ದರೆ ಒಬ್ಬ ಹಳ್ಳಿ ಹುಡುಗ ಕೂಡ ಮೇರು ವ್ಯಕ್ತಿಯಾಗಿ ಬೆಳೆಯಬಹುದು ಎಂಬುದಕ್ಕೆ ನಟ ರಾಜ್ ಸಾಕ್ಷಿಯಾಗಿದ್ದಾರೆ~ ಎಂದು ಬಣ್ಣಿಸಿದರು.
`ರಾಜ್‌ಕುಮಾರ್ ವಿನಯದ ಮೂಲಕ ವಿದ್ವಾಂಸರಾದವರು. ಹಣಕ್ಕೆ ಎಂದೂ ಅಂಟಿಕೊಳ್ಳದೆ ಶ್ರೀಮಂತರಾಗಿದ್ದವರು. ಬಸವಣ್ಣನಿಲ್ಲದ ಕಲ್ಯಾಣವನ್ನು ಊಹಿಸಿಕೊಳ್ಳಲು ಹೇಗೆ ಸಾಧ್ಯವಿಲ್ಲವೋ, ಹಾಗೆಯೇ ರಾಜ್‌ಕುಮಾರ್ ಇಲ್ಲದ ಕನ್ನಡ ಚಿತ್ರರಂಗವನ್ನೂ ಊಹಿಸಿೊಳ್ಳುವುದು ಕಷ್ಟ. ಈ ನಿಟ್ಟಿನಲ್ಲಿ ರಾಜ್ ಕುಟುಂಬ ಚಿತ್ರರಂಗದ ಉಳಿವಿಗೆ ಮುಂದಾಗಬೇಕು~ ಎಂದು ಕೋರಿದರು.
ಕ್ಷಮೆ ಯಾಚಿಸಿದರು
ಸಾಹಿತಿ ಬರಗೂರು ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಸಚಿವ ವಿ. ಸೋಮಣ್ಣ, `ಡಾ. ರಾಜ್ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ಅಚಾತುರ್ಯದಿಂದ ಸಮಾಧಿ ಮೇಲೆ ಕಾಲಿಟ್ಟಿದ್ದಕ್ಕೆ ಕ್ಷಮೆಯಾಚಿಸುತ್ತೇನೆ. ನಾನು ಕೂಡ ಸಂಸ್ಕಾರ ಮನೋಭಾವ ಬೆಳೆಸಿಕೊಂಡೇ ಬೆಳೆದವನು. ಇಂತಹ ಸಣ್ಣ ವಿಷಯವನ್ನು ದೊಡ್ಡದಾಗಿ ವೈಭವೀಕರಿಸುವುದು ಬೇಡ~ ಎಂದು ಮಾಧ್ಯಮಗಳಲ್ಲಿ ಮನವಿ ಮಾಡಿದರು.
ಸಾ.ರಾ. ಗೋವಿಂದು ಮಾತನಾಡಿ, `ಮಾಧ್ಯಮ ಪ್ರತಿನಿಧಿಗಳ ಒತ್ತಾಯದಿಂದ ಸಚಿವರು ಸಮಾಧಿ ಮೇಲೆ ಅಚಾನಕ್ಕಾಗಿ ಕಾಲಿಟ್ಟಿರಬಹುದು. ಈ ವಿಷಯಕ್ಕೆ ಅಷ್ಟು ಪ್ರಾಮುಖ್ಯತೆ ಕೊಡುವ ಅಗತ್ಯವಿಲ್ಲ. ರಾಜ್‌ಕುಮಾರ್ ಬಗ್ಗೆ ಎಲ್ಲರಿಗೂ ಅಪಾರವಾದ ಗೌರವವಿದೆ. ನೂಕು-ನುಗ್ಗಲಿನಲ್ಲಿ ಈ ಪ್ರಮಾದವಾಗಿರಬಹುದು. ಅದಕ್ಕೆ ಕ್ಷಮೆ ಕೋರುತ್ತೇನೆ~ ಎಂದರು.
ಸಚಿವ ಆರ್. ಅಶೋಕ ಅವರು ಸಮಾಧಿ ಬಳಿ ಪುಷ್ಪ ನಮನ ಸಲ್ಲಿಸಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಸಚಿವ ವಿ. ಸೋಮಣ್ಣನವರೇ ಸಚಿವ ಅಶೋಕ ಹೆಸರನ್ನೂ ಮೊದಲೇ ಪ್ರಸ್ತಾಪಿಸಿ ಇಬ್ಬರ ಪರವಾಗಿ ಬಹಿರಂಗ ಕ್ಷಮೆಯಾಚಿಸಿದರು.
ನಟಿ ಜಯಂತಿಗೆ ಅವಮಾನ
ಸಮಾರಂಭದಲ್ಲಿ ಹಿರಿಯ ನಟಿ ಜಯಂತಿ ಅವರನ್ನು ವೇದಿಕೆಯಿಂದ ಕೆಳಗಿಳಿಯುವಂತೆ ಸೂಚಿಸುವ ಮೂಲಕ ಅವಮಾನ ಮಾಡಿದ ಪ್ರಸಂಗವೂ ನಡೆಯಿತು.
`ನಟಿ ಜಯಂತಿ ಸೇರಿದಂತೆ ಇತರರು ವೇದಿಕೆಯಿಂದ ಕೆಳಗಿಳಿಯುವ ಮೂಲಕ ಕಾರ್ಯಕ್ರಮ ನಡೆಯಲು ಸಹಕರಿಸಬೇಕು~ ಎಂದು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ. ರಾಮೇಗೌಡ ಸೂಚಿಸಿದರು. ಇದಕ್ಕೆ ರಾಜ್ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದರೂ ಅದಕ್ಕೆ ಕಿವಿಗೊಡದ ರೀತಿಯಲ್ಲಿ ಜಯಂತಿ ಅವರನ್ನು ವೇದಿಕೆಯಿಂದ ಕೆಳಗಿಳಿಸಲಾಯಿತು. ಆಗ ಜಯಂತಿ ಅವರನ್ನು ಗಮನಿಸಿದ ಸಾ.ರಾ. ಗೋವಿಂದು ವೇದಿಕೆಗೆ ಆಹ್ವಾನಿಸಿದರು. ವೇದಿಕೆಯಿಂದ ಕೆಳಗಿಳಿದಿದ್ದ ನಟಿ ಶ್ರುತಿ ಕೂಡ ಜಯಂತಿ ಅವರ ಹಿಂದೆಯೇ ವೇದಿಕೆಗೇರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.