ADVERTISEMENT

ಮೊಬೈಲ್‌ಗಾಗಿ ಎದೆಗೆ ಇರಿದು ಕೊಂದರು!

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2018, 19:30 IST
Last Updated 19 ಏಪ್ರಿಲ್ 2018, 19:30 IST

ಬೆಂಗಳೂರು: ನಾಯಂಡನಹಳ್ಳಿ ಮೆಟ್ರೊ ನಿಲ್ದಾಣ ಸಮೀಪದ ಹಳೆ ಕ್ವಾಲಿಟಿ ಬಿಸ್ಕೆಟ್ ಫ್ಯಾಕ್ಟರಿ ಮುಂಭಾಗದ ರಸ್ತೆಯಲ್ಲಿ ನಡೆದಿದ್ದ ರಾಹುಲ್ ಉರ್ಫ್‌ ಸಿದ್ದೇಶ್ (18) ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

ಗಂಗೊಂಡನಹಳ್ಳಿಯ ನಿವಾಸಿಗಳಾದ ಸದ್ದಾಂ ಹುಸೇನ್ ಅಲಿಯಾಸ್‌ ಸಿದ್ದಿಕ್ (20) ಹಾಗೂ ಮಹಮದ್ ಶಫಿ (19) ಬಂಧಿತರು. ರಾಹುಲ್‌ ಬಳಿ ಇದ್ದ ₹4,500 ಮೌಲ್ಯದ ಮೊಬೈಲ್‌ ಕಸಿದುಕೊಳ್ಳುವುದಕ್ಕಾಗಿ ಆರೋಪಿಗಳು, ಆತನನ್ನು ಕೊಲೆ ಮಾಡಿದ್ದರು ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣನವರ ತಿಳಿಸಿದರು.

‘ಮಲ್ಲತ್ತಹಳ್ಳಿ ನಿವಾಸಿ ರಾಹುಲ್, ‘ಅಂಜನಿಪುತ್ರ’ ಸಿನಿಮಾ ನಿರ್ಮಾಪಕ ಎಂ.ಎನ್‌.ಕುಮಾರ್ ಅವರ ಅಳಿಯ (ತಂಗಿಯ ಮಗ). ಎಸ್ಸೆಸ್ಸೆಲ್ಸಿ ನಂತರ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದ ಆತ, ಕುಮಾರ್ ಮಾಲೀಕತ್ವದ ರಾಜರಾಜೇಶ್ವರಿನಗರದಲ್ಲಿರುವ ರಾಜರಾಜೇಶ್ವರಿ ಚಿತ್ರಮಂದಿರದಲ್ಲಿ ಕೆಲಸ ಮಾಡುತ್ತಿದ್ದ. ಆತ, ಏಪ್ರಿಲ್ 12ರಂದು ರಾತ್ರಿ 11 ಗಂಟೆ ಸುಮಾರಿಗೆ ಚಿತ್ರಮಂದಿರದಿಂದ ಕೆಲಸ ಮುಗಿಸಿ ವಾಪಸ್‌ ಮನೆಗೆ ಹೊರಟಿದ್ದ ವೇಳೆ ಈ ಘಟನೆ ನಡೆದಿತ್ತು’ ಎಂದು ಹೇಳಿದರು.

ADVERTISEMENT

‘ಮೊಬೈಲ್‌ನಲ್ಲಿ ಮಾತನಾಡುತ್ತಲೇ ರಾಹುಲ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಅವರ ಹಿಂದೆಯೇ ಬಂದಿದ್ದ ಆರೋಪಿಗಳು, ಮೊಬೈಲ್‌ ಕಸಿದುಕೊಳ್ಳಲು ಯತ್ನಿಸಿದ್ದರು. ಮೊಬೈಲ್‌ ಬಿಗಿಯಾಗಿ ಹಿಡಿದಿದ್ದರಿಂದ ಕಿತ್ತುಕೊಳ್ಳಲು ಸಾಧ್ಯವಾಗಿರಲಿಲ್ಲ. ಆಗ ಆತನ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳು, ಚಾಕುವಿನಿಂದ ಎದೆಗೆ ಇರಿದಿದ್ದರು. ರಕ್ತಸ್ರಾವದಿಂದ ರಾಹುಲ್‌ ಕುಸಿದು ಬೀಳುತ್ತಿದ್ದಂತೆ ಮೊಬೈಲ್‌ ಕಿತ್ತುಕೊಂಡು ಆರೋಪಿಗಳು ಪರಾರಿಯಾಗಿದ್ದರು’ ಎಂದು ವಿವರಿಸಿದರು.

ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯ: ‘ರಾಹುಲ್ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದು ಹಾಗೂ ಸ್ಥಳದಿಂದ ಪರಾರಿಯಾದ ದೃಶ್ಯಗಳು ಸ್ಥಳೀಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಮೃತನ ಮೊಬೈಲ್‌ ಆರೋಪಿಗಳ ಬಳಿಯೇ ಇತ್ತು. ಅದರ ಲೋಕೇಶನ್‌ ಆಧರಿಸಿ ಆರೋಪಿಗಳು ಇದ್ದ ಜಾಗ ಪತ್ತೆ ಹಚ್ಚಿ ಬಂಧಿಸಿದೆವು’ ಎಂದು ಪೊಲೀಸರು ಹೇಳಿದರು.

‘ಕೊಲೆಯಾದ ಯುವಕನ ಜೇಬಿನಲ್ಲಿದ್ದ ಕೆಲ ಗುರುತಿನ ಚೀಟಿಗಳ ಮೂಲಕ ಸಂಬಂಧಿಕರನ್ನು ಪತ್ತೆ ಹಚ್ಚಿದ್ದೆವು. ಪೋಷಕರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದರು.

ಎರಡು ಬಾರಿ ಜೈಲಿಗೆ ಹೋಗಿ ಬಂದಿದ್ದರು: ಆರೋಪಿಗಳಾದ ಸದ್ದಾಂ ಹುಸೇನ್ ಹಾಗೂ ಮಹಮದ್ ಶಫಿ, ಬಾಲ್ಯದಿಂದಲೇ ಅಪರಾಧ ಕೃತ್ಯ ಎಸಗುತ್ತಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದರು.

‘ಸುಲಿಗೆ ಆರೋಪದಡಿ ಜ್ಞಾನಭಾರತಿ ಹಾಗೂ ಚಂದ್ರಾಲೇಔಟ್ ಠಾಣೆ ಪೊಲೀಸರು ಈ ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಕೆಲ ತಿಂಗಳು ಜೈಲಿನಲ್ಲಿದ್ದ ಇವರು, ಜಾಮೀನು ಮೇಲೆ ಹೊರಬಂದು ಪುನಃ ಕೃತ್ಯವೆಸಗಲಾರಂಭಿಸಿದ್ದರು’ ಎಂದು ಮಾಹಿತಿ ನೀಡಿದರು.

‘ರಾತ್ರಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಸಾರ್ವಜನಿಕರನ್ನು ಈ ಆರೋಪಿಗಳು ಅಡ್ಡಗಟ್ಟುತ್ತಿದ್ದರು. ಚಾಕು ತೋರಿಸಿ ಬೆದರಿಸಿ ಮೊಬೈಲ್ ಹಾಗೂ ನಗದು ಸುಲಿಗೆ ಮಾಡುತ್ತಿದ್ದರು. ಈ ಆರೋಪಿಗಳ ವಿರುದ್ಧ ನಗರದ ಹಲವು ಠಾಣೆಗಳಲ್ಲಿ 7 ಪ್ರಕರಣಗಳು ದಾಖಲಾಗಿದ್ದವು. ಆ ಪೈಕಿ ಎರಡು ಪ್ರಕರಣಗಳಲ್ಲಿ ಮಾತ್ರ ಅವರನ್ನು ಬಂಧಿಸಲಾಗಿತ್ತು. ಉಳಿದ ಪ್ರಕರಣಗಳ ಮಾಹಿತಿ ಪಡೆಯುತ್ತಿದ್ದೇವೆ’ ಎಂದರು.

ತಾಯಿ ಕೊಡಿಸಿದ್ದ ಮೊಬೈಲ್‌
‘ಘಟನೆ ನಡೆಯುವುದಕ್ಕೂ ಮೂರು ದಿನಗಳ ಮುಂಚೆಯಷ್ಟೇ ರಾಹುಲ್‌ಗೆ ತಾಯಿಯೇ ಮೊಬೈಲ್‌ ಕೊಡಿಸಿದ್ದರು’ ಎಂದು ತನಿಖಾಧಿಕಾರಿಗಳು ತಿಳಿಸಿದರು.

‘ಅಂದು ರಾತ್ರಿ ರಸ್ತೆಯಲ್ಲಿ ಹೊರಟಿದ್ದ ರಾಹುಲ್, ತಾಯಿ ಜತೆಯೇ ಮಾತನಾಡುತ್ತಿದ್ದ. ತನ್ನ ಸ್ನೇಹಿತನಿಗೆ ಮೊಬೈಲ್‌ ತೋರಿಸಿಕೊಂಡು ಮನೆಗೆ ಬರುವುದಾಗಿ ತಾಯಿ ಬಳಿ ಹೇಳಿದ್ದ. ಸ್ನೇಹಿತನ ಬಳಿ ಹೋಗುವಷ್ಟರಲ್ಲೇ ಆತನ ಕೊಲೆಯಾಯಿತು’ಎಂದರು.

**

ಆರೋಪಿಗಳು ಮತ್ತಷ್ಟು ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಅನುಮಾನವಿದೆ. ಇಬ್ಬರನ್ನೂ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಿದ್ದೇವೆ
– ರವಿ ಚನ್ನಣ್ಣನವರ, ಡಿಸಿಪಿ, ಪಶ್ಚಿಮ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.