ADVERTISEMENT

‘ಮೋದಿ ಅನುಸರಿಸುವ ಕಾರ್ಪೊರೇಟ್‌ ಲೇಖಕರು’

8ನೇ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮಾವೇಶದಲ್ಲಿ ಅರವಿಂದ ಮಾಲಗತ್ತಿ ಕಿಡಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2017, 19:30 IST
Last Updated 29 ಅಕ್ಟೋಬರ್ 2017, 19:30 IST
ಕನ್ನಡ ಸಾಹಿತ್ಯ ಸಂಸ್ಕೃತಿ ಸಮಾವೇಶದ ನಿಕಟಪೂರ್ವ ಅಧ್ಯಕ್ಷ ರಾಂ.ಕೆ.ಹನುಮಂತಯ್ಯ, ಪ್ರೊ.ಅರವಿಂದ ಮಾಲಗತ್ತಿ, ಲೇಖಕ ಆರ್‌.ಕೆ.ನಲ್ಲೂರು ಪ್ರಸಾದ್, ಪ್ರೊ.ನಾರಾಯಣ ಘಟ್ಟ, ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ ಇದ್ದಾರೆ. –ಪ್ರಜಾವಾಣಿ ಚಿತ್ರ
ಕನ್ನಡ ಸಾಹಿತ್ಯ ಸಂಸ್ಕೃತಿ ಸಮಾವೇಶದ ನಿಕಟಪೂರ್ವ ಅಧ್ಯಕ್ಷ ರಾಂ.ಕೆ.ಹನುಮಂತಯ್ಯ, ಪ್ರೊ.ಅರವಿಂದ ಮಾಲಗತ್ತಿ, ಲೇಖಕ ಆರ್‌.ಕೆ.ನಲ್ಲೂರು ಪ್ರಸಾದ್, ಪ್ರೊ.ನಾರಾಯಣ ಘಟ್ಟ, ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ ಇದ್ದಾರೆ. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಮೆಗಾ ಮಾರುಕಟ್ಟೆಯನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅವರನ್ನೇ ಅನುಸರಿಸುವ ಕಾರ್ಪೊರೇಟ್‌ ವಲಯದ ಕೆಲ ಲೇಖಕರು, ಈ ತತ್ವವನ್ನು ಸಾಹಿತ್ಯ ಕ್ಷೇತ್ರದಲ್ಲಿ ಬಿತ್ತಿ ಬೆಳೆಯುವ ಕುರಿತು ಪ್ರಯೋಗ ನಡೆಸುತ್ತಿದ್ದಾರೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ ಕಿಡಿಕಾರಿದರು.

ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್‌ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘8ನೇ ಕನ್ನಡ ಸಾಹಿತ್ಯ ಸಂಸ್ಕೃತಿ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಗ್ರಾಹಕರು ಏನನ್ನು ಕೇಳುತ್ತಾರೆಯೋ ಅದನ್ನು ಕೊಡುತ್ತೇವೆ ಎನ್ನುವುದು ಕಾರ್ಪೊರೇಟ್‌ ವಲಯದ ಲೇಖಕರ ವಾದ. ಅವರ ದೃಷ್ಟಿಯಲ್ಲಿ ಸಾಹಿತ್ಯವೂ ಒಂದು ಸರಕು. ಗ್ರಾಹಕರನ್ನು ಸಂತೋಷ ಪಡಿಸುವುದೇ ಅವರ ಮೂಲ ಉದ್ದೇಶ. ಅವರ ಹೊಸ ರೀತಿಯ ಬರವಣಿಗೆಗೆ ಎಲ್ಲರೂ ಪರವಶರಾಗುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಸಮಾವೇಶದ ಅಧ್ಯಕ್ಷ ಪ್ರೊ.ನಾರಾಯಣ ಘಟ್ಟ, ‘ಕನ್ನಡ ಭಾಷೆ ಸಂಸ್ಕೃತಕ್ಕಿಂತಲೂ ದೊಡ್ಡ ಭಾಷೆಯಾಗಿ ಮೆರೆಯುತ್ತಿದೆ. ಆದರೆ, ಇತ್ತೀಚೆಗೆ ಹೊಲಸು ರಾಡಿಯ ಸಾಹಿತ್ಯ ಸೇರ್ಪಡೆಯಾಗುತ್ತಿದೆ. ಬಸವಲಿಂಗಪ್ಪ ಹೇಳಿದಂತೆ ಬೂಸಾ ಸಾಹಿತ್ಯ ಅಗಬಾರದು. ಕನ್ನಡದ ಶ್ರೇಷ್ಠ ಸಾಹಿತ್ಯ ಬೇರೆ ಭಾಷೆಗಳಿಗೂ ಅನುವಾದಗೊಳ್ಳಬೇಕು’ ಎಂದರು.

‘ಸಾಹಿತಿಗಳ ಕೋಶಕ್ಕೆ ಸ್ವವಿವರ ನೀಡಿ’
‘ಸಾಹಿತ್ಯ ಅಕಾಡೆಮಿಯು ಕನ್ನಡ ಸಾಹಿತಿಗಳ ಕೋಶವನ್ನು ಹೊರತರಲು ನಿರ್ಧರಿಸಿದೆ. 1820ರಿಂದ ಈವರೆಗಿನ ಸಾಹಿತಿಗಳ ಮಾಹಿತಿ ಅದರಲ್ಲಿ ದಾಖಲಾಗಲಿದೆ. ಈ ಮಾಹಿತಿ ಮೊಬೈಲ್‌ನಲ್ಲೂ ಸಿಗುವಂತೆ ಮಾಡುವ ಉದ್ದೇಶವಿದೆ. ಒಂದೆರಡು ಪುಸ್ತಕ ಬರೆದವರೂ ತಮ್ಮ ವೈಯಕ್ತಿಕ ವಿವರಗಳನ್ನು ಅಕಾಡೆಮಿಗೆ ಕಳುಹಿಸಿಕೊಡಬಹುದು’ ಎಂದು ಮಾಲಗತ್ತಿ ಹೇಳಿದರು.

*
ಒಮ್ಮೆಯೂ ಮುದ್ರಣವೇ ಆಗದ ಪುಸ್ತಕ್ಕೆ ಎರಡನೇ ಮುದ್ರಣ ಕಂಡಿದೆ ಎಂದು ಕೆಲ ಸಾಹಿತಿಗಳು ಹೇಳಿಕೊಳ್ಳುತ್ತಾರೆ. ಇದು ಕಾರ್ಪೊರೇಟ್‌ ಆಲೋಚನಾ ಕ್ರಮ.
– ಪ್ರೊ.ಅರವಿಂದ ಮಾಲಗತ್ತಿ,
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.