ಬೆಂಗಳೂರು: `ದೈನಂದಿನ ಜೀವನದಲ್ಲಿ ನೈತಿಕತೆ ಮತ್ತು ಪ್ರಾಮಾಣಿಕತೆಯನ್ನು ನಂಬಿ ಬಾಳುವವರಿಗೆ ಹಲವಾರು ಸವಾಲುಗಳು ಎದುರಾಗುತ್ತವೆ. ನೈತಿಕ ಮೌಲ್ಯ ಎತ್ತಿ ಹಿಡಿಯುವ ಸಂದರ್ಭದಲ್ಲಿ ಯುವಜನತೆ ಕಠಿಣ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು~ ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ಜೈರಾಜ್ ಅಭಿಪ್ರಾಯಪಟ್ಟರು.
ನಗರದ ಬೃಂದಾವನ ಕ್ಯಾಂಪಸ್‌ನಲ್ಲಿರುವ ಸತ್ಯಸಾಯಿ ಇನ್‌ಸ್ಟಿಟ್ಯೂಟ್ ಆಫ್ ಹೈಯರ್ ಲರ್ನಿಂಗ್‌ನಲ್ಲಿ ಗುರುವಾರ ನಡೆದ `ಭಾರತೀಯ ಸಂಸ್ಕೃತಿ ಹಾಗೂ ಅಧ್ಯಾತ್ಮ~ ಕುರಿತ ಬೇಸಿಗೆ ಶಿಬಿರದಲ್ಲಿ ಅವರು ಮಾತನಾಡಿದರು.
`ಭಗವದ್ಗೀತೆ ಒಂದು ಸಮುದಾಯಕ್ಕೆ ಸೀಮಿತವಾದ ಕಥನವಲ್ಲ. ಅದು ಇಡೀ ಮಾನವ ಸಮುದಾಯಕ್ಕೆ ಬೆಳಕು ನೀಡುವ ಮಹಾನ್ ಜ್ಯೋತಿ. ಗೀತೆಯ ಪಠಣದಿಂದ ನೆಮ್ಮದಿ ಪಡೆಯಬಹುದು~ ಎಂದು ಸ್ವಾಮಿ ಚಿದ್ರೂಪಾನಂದ ತಿಳಿಸಿದರು.
`ಆಧ್ಯಾತ್ಮಿಕ ಪ್ರೌಢತೆಯೇ ಪ್ರತಿ ಮನುಷ್ಯನ ಗುರಿಯಾಗಬೇಕು. ಮಾನಸಿಕ ಸಂತೋಷ ಎಲ್ಲೋ ಹೊರಗೆ ಸಿಗುವ ವಸ್ತುವಲ್ಲ. ಅದನ್ನು ಜನ ತಮ್ಮ ಮನಸ್ಸಿನಲ್ಲಿ ಅರಸಬೇಕು~ ಎಂದು ಅವರು ಕಿವಿಮಾತು ಹೇಳಿದರು.
ವಿಜಯ್ ಮೆನನ್ ಉಪನ್ಯಾಸ ನೀಡಿ, `ಮಾನವ ಜೀವಿಗೆ ಮಾಡುವ ಸೇವೆಯನ್ನು ಭಗವಂತನಿಗೆ ಸಲ್ಲಿಸಿದ ಸೇವೆ ಎಂಬ ತತ್ವವನ್ನು ಪ್ರತಿಪಾದಿಸಿ ಯುವಜನತೆ ದೈನಂದಿನ ಕಾರ್ಯದಲ್ಲಿ ಅಧ್ಯಾತ್ಮವನ್ನು ಕಾಣುವ ಮನೋಭಾವ ರೂಢಿಸಿಕೊಳ್ಳಬೇಕು. ಯುವಜನತೆ ತಂಬಾಕು, ಮದ್ಯಪಾನ, ಮಾಂಸಾಹಾರಗಳಿಂದ ದೂರವಿರಬೇಕು~ ಎಂದು ಕರೆ ನೀಡಿದರು. ಪ್ರಸಿದ್ಧ ಸಂಶೋಧಕ ಅಮೈ ದೇಶಪಾಂಡೆ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.