ADVERTISEMENT

ಯಥಾಸ್ಥಿತಿ ಮುಂದುವರಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 19:59 IST
Last Updated 2 ಜುಲೈ 2013, 19:59 IST
ಕೊರಮ, ಕೊರಚ, ಲಂಬಾಣಿ ಹಾಗೂ ಭೋವಿ ಜನಾಂಗವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆದು ಹಾಕದೆ ಯಥಾಸ್ಥಿತಿಯನ್ನು ಮುಂದುವರಿಸಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಸದಸ್ಯರು ಪುರಭವನದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು 	- ಪ್ರಜಾವಾಣಿ ಚಿತ್ರ
ಕೊರಮ, ಕೊರಚ, ಲಂಬಾಣಿ ಹಾಗೂ ಭೋವಿ ಜನಾಂಗವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆದು ಹಾಕದೆ ಯಥಾಸ್ಥಿತಿಯನ್ನು ಮುಂದುವರಿಸಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಸದಸ್ಯರು ಪುರಭವನದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು - ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೊರಮ, ಕೊರಚ, ಲಂಬಾಣಿ ಹಾಗೂ ಭೋವಿ ಜನಾಂಗಗಳನ್ನು ಪರಿಶಿಷ್ಟ ಜಾತಿಯಿಂದ ತೆಗೆದು ಹಾಕದೆ ಯಥಾಸ್ಥಿತಿಯನ್ನು ಮುಂದುವರಿಸಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಸದಸ್ಯರು ಪುರಭವನದ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಭೋವಿ ಮಹಿಳಾ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷೆ ಪಿ.ಶಾಂತಾ ಮಾತನಾಡಿ, `ಕೊರಮ, ಕೊರಚ, ಲಂಬಾಣಿ ಮತ್ತು ಭೋವಿ ಜನಾಂಗಗಳು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿವೆ. ಹೀಗಾಗಿ, ಆ ಜನಾಂಗಗಳನ್ನು ಪರಿಶಿಷ್ಟ ಜಾತಿಗಳ ಗುಂಪಿನಿಂದ ತೆಗೆದುಹಾಕಬೇಕು ಎಂದು ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆದರೆ, ವಾಸ್ತವವೆಂದರೆ, ಈ ಜನಾಂಗಗಳು ಬಲಾಢ್ಯರ ನಿಲುವುಗಳಿಂದ ಸೌಲಭ್ಯ ವಂಚಿತರಾಗುತ್ತಿದ್ದಾರೆ. ಹೀಗಾಗಿ ಭೋವಿ ಸೇರಿದಂತೆ ಇತರೆ ಜನಾಂಗಗಳನ್ನು ಪರಿಶಿಷ್ಟ ಜಾತಿಯಿಂದ ತೆಗೆದು ಹಾಕದೆ ಯಥಾ ಸ್ಥಿತಿಯನ್ನು ಮುಂದುವರಿಸಬೇಕು' ಎಂದು ಒತ್ತಾಯಿಸಿದರು.

ಭೋವಿ ಜನಾಂಗ ಈಗಲೂ ಸಮಾಜದಲ್ಲಿ ಶೋಷಣೆಗೆ ಒಳಗಾಗುತ್ತಿದೆ. ಆದರೂ ಸರ್ಕಾರದ ಸೌಲಭ್ಯಗಳನ್ನು ಕಸಿದುಕೊಳ್ಳಲು ಕೆಲ ಸಮುದಾಯಗಳು ತಂತ್ರ ರೂಪಿಸುತ್ತಿವೆ. ಸ್ವಾತಂತ್ರ್ಯ ಬಂದ ನಂತರ ಪರಿಶಿಷ್ಟ ಜಾತಿಯಲ್ಲಿ ಯಾವ ಯಾವ ಜನಾಂಗದವರು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಮುಂದುವರಿದಿದ್ದಾರೆ ಎಂಬುದನ್ನು ಅವಲೋಕಿಸಿದರೆ ಸರ್ಕಾರಕ್ಕೆ ಸತ್ಯಾಂಶ ತಿಳಿಯುತ್ತದೆ ಎಂದರು.

ಕೊರಮ-ಕೊರಚ ಒಕ್ಕೂಟದ ಅಧ್ಯಕ್ಷ ಜಿ.ಮಾದೇಶ್ ಮಾತನಾಡಿ, `ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಕೇಂದ್ರ ಸರ್ಕಾರ ನೇರ ಸಾಲದ ಯೋಜನೆಯಡಿ ಪರಿಶಿಷ್ಟ ಜಾತಿಯ ಉಪಜಾತಿಗಳಾದ ಭೋವಿ, ಲಂಬಾಣಿ, ಕೊರಮ, ಕೊರಚ ಸಮುದಾಯಗಳಿಗೆ ಸಾಲ ಸೌಲಭ್ಯ ನೀಡದೆ ವಂಚಿಸಲಾಗಿದೆ. ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು' ಎಂದು ಅವರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.