ADVERTISEMENT

ಯಲಹಂಕ: ವಿದ್ಯುತ್ ಕಡಿತದ ಬರೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 19:32 IST
Last Updated 17 ಜುಲೈ 2013, 19:32 IST
ಯಲಹಂಕದ ಪುಟ್ಟೇನಹಳ್ಳಿ ಸಮೀಪದಲ್ಲಿ ನಿರ್ಮಾಣಗೊಂಡು ಸಾರ್ವಜನಿಕರ ಸೇವೆಗೆ ಲಭ್ಯವಾಗದ 220 ಕೆ.ವಿ. ಸಾಮರ್ಥ್ಯದ ವಿದ್ಯುತ್ ಘಟಕ
ಯಲಹಂಕದ ಪುಟ್ಟೇನಹಳ್ಳಿ ಸಮೀಪದಲ್ಲಿ ನಿರ್ಮಾಣಗೊಂಡು ಸಾರ್ವಜನಿಕರ ಸೇವೆಗೆ ಲಭ್ಯವಾಗದ 220 ಕೆ.ವಿ. ಸಾಮರ್ಥ್ಯದ ವಿದ್ಯುತ್ ಘಟಕ   

ಯಲಹಂಕ: ಯಲಹಂಕ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕೆಲವು ಸಮಯದಿಂದ ಅನಿಯಮಿತ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಕೆಪಿಟಿಸಿಎಲ್ ಅಧಿಕಾರಿಗಳ ನಿಧಾನಗತಿಯ ಧೋರಣೆಯಿಂದಾಗಿ ವಿದ್ಯುತ್ ಬಳಕೆದಾರರು ಪಡಿಪಾಟಲು ಪಡುವಂತಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಯಲಹಂಕ ಹಳೇನಗರ, ಉಪನಗರ, ಮಾರುತಿನಗರ, ಸಹಕಾರನಗರ, ಜಕ್ಕೂರು, ರಾಜಾನುಕುಂಟೆ, ಅಬ್ಬಿಗೆರೆ ಸೇರಿದಂತೆ ಹಲವಾರು ಪ್ರದೇಶಗಳ ಜನರು ಸುಮಾರು ನಾಲ್ಕೈದು ತಿಂಗಳಿಂದ ಪ್ರತಿನಿತ್ಯ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

`220 ಕೆ.ವಿ. ಸಾಮರ್ಥ್ಯದ ಪೀಣ್ಯ ವಿದ್ಯುತ್ ಉಪಕೇಂದ್ರದಿಂದ ಸರಬರಾಜು ಆಗುತ್ತಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ(ಕೆಪಿಟಿಸಿಎಲ್) ವಿದ್ಯುತ್ ತಂತಿಗಳು ಕೇವಲ 40 ಮೆಗಾವ್ಯಾಟ್ ಸಾಮರ್ಥ್ಯದ್ದು. ಇದನ್ನು ಹಲವಾರು ವರ್ಷಗಳಿಂದ ಉನ್ನತೀಕರಣ ಮಾಡದ ಪರಿಣಾಮ ಈ ಪ್ರದೇಶಗಳಿಗೆ ಸರಿಯಾದ ರೀತಿಯಲ್ಲಿ ವಿದ್ಯುತ್ ಪೂರೈಕೆ ಮಾಡಲು ಆಗುತ್ತಿಲ್ಲ' ಎಂದು ಸ್ಥಳೀಯರು ದೂರಿದ್ದಾರೆ.

`ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವುದರಿಂದ ನಾಗರಿಕರು ತುಂಬಾ ತೊಂದರೆ ಅನುಭವಿಸಬೇಕಾಗಿದೆ. ಈ ಸಮಸ್ಯೆ ನಗರದ ಉಳಿದೆಲ್ಲಾ ಪ್ರದೇಶಗಳಿಗಿಂತ ಯಲಹಂಕ ಭಾಗದಲ್ಲಿ ಹೆಚ್ಚಾಗಿ ಕಾಡುತ್ತಿದೆ' ಎಂದು ಮಾರುತಿನಗರದ ನಿವಾಸಿ ಡಿ.ಎಸ್.ವೆಂಕಟಾಚಲಪತಿ ದೂರಿದ್ದಾರೆ.

`ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಾಗ ಅಸಹಾಯಕತೆ ವ್ಯಕ್ತಪಡಿಸಿದರು. ಸಂಜೆ ಮತ್ತು ಬೆಳಗಿನ ಸಮಯದಲ್ಲೆ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವುದರಿಂದ ವಿದ್ಯಾರ್ಥಿಗಳ ದಿನನಿತ್ಯದ ವ್ಯಾಸಂಗಕ್ಕೂ ಸಹ ತೊಂದರೆಯಾಗುತ್ತಿದೆ. ತಿಂಗಳಿಗೊಮ್ಮೆ ಸಮಯಕ್ಕೆ ಸರಿಯಾಗಿ ವಿದ್ಯುತ್ ಬಿಲ್ ಪಾವತಿ ಮಾಡದಿದ್ದರೆ ನಿರ್ದಾಕ್ಷಿಣ್ಯವಾಗಿ ವಿದ್ಯುತ್ ಸಂಪರ್ಕವನ್ನು ತೆಗೆಯುತ್ತಾರೆ. ಆದರೆ, ಗ್ರಾಹಕರಿಗೆ ಸರಿಯಾದ ವಿದ್ಯುತ್ ಸರಬರಾಜು ಮಾಡಲು ಸಂಸ್ಥೆ ವಿಫಲವಾಗಿದೆ' ಎಂದು ಅವರು ಆಪಾದಿಸಿದರು.

`ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿ ಸ್ಥಾಪಿಸಿರುವ 400 ಕೆ.ವಿ. ಸಾಮರ್ಥ್ಯದ ವಿದ್ಯುತ್ ಘಟಕದ ಮೂಲಕ ಪುಟ್ಟೇನಹಳ್ಳಿ ಸಮೀಪದಲ್ಲಿ ಸುಮಾರು 50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 220 ಕೆವಿ ಸಾಮರ್ಥ್ಯದ ವಿದ್ಯುತ್ ಘಟಕಕ್ಕೆ ವಿದ್ಯುತ್ ಮಾರ್ಗ ಅಳವಡಿಸಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ' ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

`ಎರಡು ವರ್ಷಗಳ ಹಿಂದೆಯೇ ಈ ಕೇಂದ್ರದ ನಿರ್ಮಾಣ ಕಾಮಗಾರಿ ಆರಂಭವಾಗಿ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಇದಲ್ಲದೆ ಅಟ್ಟೂರಿನಲ್ಲಿರುವ ಡೀಸೆಲ್ ಜನರೇಟರ್‌ನ ಒಂದು ಘಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಆಕ್ಷೇಪಣೆಯಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿರುವ ಪರಿಣಾಮ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ' ಎಂದು ಸ್ಥಳೀಯರು ಆಪಾದಿಸಿದ್ದಾರೆ.

ಸಿಂಗನಾಯಕನ ಹಳ್ಳಿಯಿಂದ ಪುಟ್ಟೇನಹಳ್ಳಿ ವಿದ್ಯುತ್ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಮೂರು ಬಾರಿ ಟೆಂಡರ್ ಕರೆಯಲಾಗಿತ್ತು. ನಿರ್ವಹಣೆ ವೆಚ್ಚ ಅಧಿಕವಾಗಿದ್ದರಿಂದ ಗುತ್ತಿಗೆ ಪಡೆಯಲು ಯಾರೂ ಮುಂದೆ ಬಂದಿಲ್ಲ.

ಈಗ ಮತ್ತೆ ಟೆಂಡರ್ ಕರೆಯಲಾಗಿದ್ದು, ಈ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಸಂಪರ್ಕ ಕಲ್ಪಿಸುವ ಕಾಮಗಾರಿಯನ್ನು  ಪೂರ್ಣಗೊಳಿಸಲಾಗುವುದು. ವಿದ್ಯುತ್ ಲೋಡ್ ಶೆಡ್ಡಿಂಗ್‌ನಿಂದ ಉಂಟಾಗುತ್ತಿರುವ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಬೇರೆ ಕಡೆಯಿಂದ ವಿದ್ಯುತ್ ಪಡೆದು ಲೋಡ್ ಶೆಡ್ಡಿಂಗ್ ಅಂತರವನ್ನು ತಗ್ಗಿಸಲಾಗುವುದು.
-ಗೋಪಾಲಕೃಷ್ಣ, ಕಾರ್ಯನಿರ್ವಾಹಕ ಎಂಜಿನಿಯರ್, ಕೆಪಿಟಿಸಿಎಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.