ADVERTISEMENT

ಯಶಸ್ಸಿಗೆ ಸಹಕಾರವೇ ಸೋಪಾನ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 18:45 IST
Last Updated 20 ಫೆಬ್ರುವರಿ 2011, 18:45 IST
ಯಶಸ್ಸಿಗೆ ಸಹಕಾರವೇ ಸೋಪಾನ
ಯಶಸ್ಸಿಗೆ ಸಹಕಾರವೇ ಸೋಪಾನ   

ಬೆಂಗಳೂರು: ‘ಯಾವುದೇ ಒಬ್ಬ ವ್ಯಕ್ತಿಗೆ ಯಶಸ್ಸು ಸಿಗಬೇಕಾದರೆ ಅದಕ್ಕೆ ಪೂರಕವಾಗಿ ಆತನಿಗೆ ಇತರರ ಸಹಕಾರವೂ ಕಾರಣ’ ಎಂದು ಖ್ಯಾತ ಚಿತ್ರನಟ ಶಿವರಾಜ್‌ಕುಮಾರ್ ನುಡಿದರು.

ನಗರದಲ್ಲಿ ಭಾನುವಾರ ‘ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್’ (ಟಿಪಿಎಂಎಲ್)ನ ಲಲಿತಾ ಕಲಾ ಸಂಘ ರಜತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಹಾಗೂ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.

‘ಕಳೆದ 25 ವರ್ಷಗಳನ್ನು ಚಿತ್ರರಂಗದಲ್ಲಿ ಕಳೆದಿದ್ದು, ನನ್ನ ಯಶಸ್ಸಿಗೆ ಪತ್ರಿಕೆಗಳೂ ಸೇರಿದಂತೆ ನಿರ್ದೇಶಕರು, ನಿರ್ಮಾಪಕರು ಸಹಕಾರ ನೀಡಿದ್ದಾರೆ. ಯಶಸ್ಸಿಗೆ ಕಾರಣರಾದ ಕೆಲವರನ್ನು ನೆನೆಸಿಕೊಂಡು ಮತ್ತೆ ಕೆಲವರನ್ನು ಮರೆಯುತ್ತಾರೆ. ಅದರಂತೆ ಬೆಳಿಗ್ಗೆ ನಾವು ಓದುವ ಪತ್ರಿಕೆಯು ವರದಿಗಾರ, ಪತ್ರಿಕೆ ಮುದ್ರಿಸುವ ಕಾರ್ಮಿಕ ಹಾಗೂ ವಿತರಿಸುವವರ ಶ್ರಮದಿಂದ ಕೂಡಿರುತ್ತದೆ’ ಎಂದು ಹೇಳಿದರು. ನಂತರ ಅವರು ತಾವು ಅಭಿನಯಿಸಿದ ಕೆಲ ಚಿತ್ರಗಳ ಗೀತೆಗಳನ್ನು ಹಾಡಿ ರಂಜಿಸಿದರು.

ಲಲಿತ ಕಲಾ ಸಂಘದ ಅಧ್ಯಕ್ಷ ಹಾಗೂ ‘ಪ್ರಜಾವಾಣಿ’ ಸುದ್ದಿ ಸಂಪಾದಕ ಗಂಗಾಧರ ಮೊದಲಿಯಾರ್ ಅವರು ಸಂಘ ನಡೆದುಬಂದ ಹಾದಿ ಹಾಗೂ ಹಮ್ಮಿಕೊಂಡ ಕಾರ್ಯಕ್ರಮಗಳನ್ನು ಪ್ರಸ್ತಾಪಿಸಿ, ‘ಪತ್ರಕರ್ತರ ವೃತ್ತಿ ದಿನದ 24 ಗಂಟೆಗಳನ್ನೂ ಬೇಡುವಂಥದು. ಇಂಥ ಸ್ಥಿತಿಯಲ್ಲಿ ಪತ್ರಕರ್ತರಲ್ಲಿ ಹುದುಗಿರುವ ಕಲಾ ಪ್ರತಿಭೆಗಳನ್ನು ಬೆಳಕಿಗೆತರಲು ಹಾಗೂ ಸಂಸ್ಥೆಯ ಕಾರ್ಮಿಕರ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವ, ಆ ಮೂಲಕ ವರ್ಷಕ್ಕೊಂದು ಬಾರಿಯಾದರೂ ಪರಸ್ಪರ ಭೇಟಿ ಮಾಡುವ ಉದ್ದೇಶದಿಂದ ಈ ಸಂಘ ಸ್ಥಾಪಿಸಲಾಗಿದೆ’ ಎಂದರು.

ಬೆಳಿಗ್ಗೆ ನಡೆದ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಾಹಿತಿ ಸಂಪಟೂರು ವಿಶ್ವನಾಥ್, ‘ಕಾಲ ಬದಲಾದಂತೆ ಶಿಕ್ಷಣ ಕ್ರಮ ಬದಲಾಗುತ್ತದೆ. ಮಕ್ಕಳು ಹೆಚ್ಚು ವಿಷಯಗಳನ್ನು ಕಲಿಯುವ ಅವಕಾಶ ಲಭ್ಯವಾಗುತ್ತಿದೆ’ ಎಂದರು. ನಂತರ ವಿದ್ಯಾರ್ಥಿಗಳಿಗೆ ಕ್ವಿಜ್ ಸ್ಪರ್ಧೆಯನ್ನು ನಡೆಸಿಕೊಟ್ಟರು.

ಟಿಪಿಎಂಎಲ್ ನಿರ್ದೇಶಕ ಹಾಗೂ ‘ಪ್ರಜಾವಾಣಿ’ ಸಂಪಾದಕ ಕೆ.ಎನ್.ಶಾಂತಕುಮಾರ್ ಅವರು ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಹಾಗೂ ದಂಪತಿಗಳಿಗೆ ಬಹುಮಾನ ವಿತರಿಸಿದರು.ಖಾಸಗಿ ವಾಹಿನಿಯೊಂದರ ‘ಪ್ಯಾಟೆ ಹುಡುಗಿ ಹಳ್ಳಿ ಲೈಫು’ ಕಾರ್ಯಕ್ರಮ ಖ್ಯಾತಿಯ ನಟಿ ನಯನಾ ಅವರು ಮಾತನಾಡಿದರು.

‘ಪ್ರಜಾವಾಣಿ’ ಸಹಾಯಕ ಸಂಪಾದಕ ಎಂ.ಎ.ಪೊನ್ನಪ್ಪ, ಸಂಸ್ಥೆಯ ಉತ್ಪಾದನೆ ವಿಭಾಗದ ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸ್, ಮಾನವ ಸಂಪನ್ಮೂಲ ವಿಭಾಗದ ಹಿರಿಯ ವ್ಯವಸ್ಥಾಪಕ ರವಿರಾಜ್ ಕರಮಡಿ, ವೃತ್ತಪತ್ರಿಕಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು. ‘ಮಯೂರ’ ಮಾಸ ಪತ್ರಿಕೆಯ ಹಿರಿಯ ಉಪ ಸಂಪಾದಕಿ ರೋಹಿಣಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.

ಛದ್ಮವೇಷ: ಟಿಪಿಎಂಎಲ್ ಲಲಿತಕಲಾ ಸಂಘದ ರಜತ ಮಹೋತ್ಸವದ ಅಂಗವಾಗಿ ಮಕ್ಕಳಿಗೆ ಹಾಗೂ ದೊಡ್ಡವರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಕಾರ್ಮಿಕರ ಮಕ್ಕಳಿಗೆ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಮಕ್ಕಳು ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಬಾಳೆ ಹಣ್ಣು ಮಾರುವವಳು, ಮರಾಠಿ ಹುಡುಗಿ, ಗಾಯಕ, ಕಾಡು ಮನುಷ್ಯ, ರೋಬೋಟ್ ಹೀಗೆ ವಿವಿಧ ಛದ್ಮವೇಷಗಳನ್ನು ಧರಿಸಿ ಗಮನಸೆಳೆದರು.

ಮಹಿಳೆಯರಿಗೆ ರಿಲೇ, ಒಂಟಿಗಾಲ ಮೇಲೆ ಓಟ, ಮಕ್ಕಳಿಗೆ ಕ್ವಿಜ್, ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಆದರ್ಶ ದಂಪತಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.