ADVERTISEMENT

‘ರಜನಿಕಾಂತ್‌, ಕಮಲ್‌ ಹಾಸನ್‌ಗೆ ಬಹಿಷ್ಕಾರ’

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 19:33 IST
Last Updated 2 ಏಪ್ರಿಲ್ 2018, 19:33 IST

ಬೆಂಗಳೂರು: ‘ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರದಲ್ಲಿ ತಮಿಳುನಾಡಿನ ಪರ ವಹಿಸಿರುವ ಚಿತ್ರ ನಟರಾದ ರಜನಿಕಾಂತ್‌ ಮತ್ತು ಕಮಲ್‌ ಹಾಸನ್‌ಗೆ ರಾಜ್ಯದಲ್ಲಿ ಬಹಿಷ್ಕಾರ ಹಾಕುತ್ತೇವೆ’ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್‌ ಹೇಳಿದರು.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅವರಿಬ್ಬರು ಈಗ ಪೂರ್ಣಪ್ರಮಾಣದಲ್ಲಿ ತಮಿಳುನಾಡಿನವರಾಗಿದ್ದಾರೆ. ಅವರ ಚಿತ್ರಗಳು ಇಲ್ಲಿ ಬಿಡುಗಡೆಯಾಗಲು ನಾವು ಬಿಡುವುದಿಲ್ಲ. ಅವರೂ ಇಲ್ಲಿಗೆ ಬರಬಾರದು’ ಎಂದು ಎಚ್ಚರಿಕೆ ನೀಡಿದರು.

‘ಸುಪ್ರೀಂಕೋರ್ಟ್‌ ಆದೇಶದಂತೆ ನಾವು ತಮಿಳುನಾಡಿಗೆ ನೀರು ಬಿಡುತ್ತಿದ್ದೇವೆ. ಆದರೂ, ಅವರು ಕಾಲುಕೆರೆದುಕೊಂಡು ಜಗಳಕ್ಕೆ ಬರುತ್ತಿದ್ದಾರೆ. ಇದೇ 5ರಂದು ತಮಿಳುನಾಡು ಬಂದ್‌ಗೆ ಕರೆ ನೀಡಿದ್ದಾರೆ. ನಾವೂ ಗಡಿ ಬಂದ್ ಮಾಡಿ ತಕ್ಕ ಉತ್ತರ ನೀಡಲಿದ್ದೇವೆ’ ಎಂದರು.

ADVERTISEMENT

‘ಅತ್ತಿಬೆಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ  ವಾಹನ ಸಂಚಾರ ತಡೆಯಲಿದ್ದೇವೆ. ಕನ್ನಡ ಸಂಘಟನೆಗಳೊಂದಿಗೆ ಚರ್ಚಿಸಿ ಕರ್ನಾಟಕ ಬಂದ್‌ಗೆ ಶೀಘ್ರವೇ ಕರೆ ನೀಡುತ್ತೇವೆ’ ಎಂದು ತಿಳಿಸಿದರು.

‘ನಿರ್ವಹಣಾ ಮಂಡಳಿ ರಚನೆಗಾಗಿ ಎಐಡಿಎಂಕೆ ಸಂಸದರೊಬ್ಬರು ರಾಜೀನಾಮೆ ನೀಡಿದ್ದಾರೆ. ನೈತಿಕ ಹೊಣೆ ಹೊತ್ತು ನಮ್ಮ ರಾಜ್ಯದ ಸಂಸದರೂ ರಾಜೀನಾಮೆ ನೀಡಬೇಕು. ಮಹದಾಯಿ, ಕಳಸಬಂಡೂರಿ, ಕಾವೇರಿ, ಮೇಕೆದಾಟು.. ವಿಚಾರಗಳ ಬಗ್ಗೆ ರಾಷ್ಟ್ರೀಯ ಪಕ್ಷಗಳೂ ಮಾತನಾಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.