ADVERTISEMENT

ರಸ್ತೆಯಲ್ಲೇ ನಿಂತ ಹನುಮ ಮೂರ್ತಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 19:52 IST
Last Updated 7 ಏಪ್ರಿಲ್ 2018, 19:52 IST
ರಸ್ತೆಯಲ್ಲೇ ನಿಂತ ಹನುಮ ಮೂರ್ತಿ
ರಸ್ತೆಯಲ್ಲೇ ನಿಂತ ಹನುಮ ಮೂರ್ತಿ   

ಬೆಂಗಳೂರು: ಕಾಚರಕನಹಳ್ಳಿಯಲ್ಲಿ ಪ್ರತಿಷ್ಠಾಪಿಸುವ ಸಲುವಾಗಿ 62 ಅಡಿ ಏಕಶಿಲಾ ಹನುಮ ಮೂರ್ತಿ ಸಾಗಿಸುತ್ತಿದ್ದ ವಾಹನ, ಹೆಣ್ಣೂರು– ಬಾಗಲೂರು ರಸ್ತೆಯಲ್ಲೇ ಶನಿವಾರ ಮಧ್ಯಾಹ್ನ ನಿಂತುಕೊಂಡಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು.

ಹೊಸಕೋಟೆ ಕಡೆಯಿಂದ ನಗರಕ್ಕೆ ತರುತ್ತಿದ್ದ ಮೂರ್ತಿಯು ಹೆಣ್ಣೂರು ಸಮೀಪದ ರೈಲ್ವೆ ಕೆಳ ಸೇತುವೆ ಮೂಲಕ ಹಾದು ಹೋಗಬೇಕಿತ್ತು. ಆದರೆ, ಮೂರ್ತಿ ಹೊತ್ತ ವಾಹನವು ಹಾದು ಹೋಗುವಷ್ಟು ಸ್ಥಳಾವಕಾಶ ಈ ಕೆಳ ಸೇತುವೆಯಲ್ಲಿ ಇಲ್ಲ.  ಹಾಗಾಗಿ, ಸೇತುವೆ ಎದುರೇ ವಾಹನವನ್ನು ನಿಲ್ಲಿಸಲಾಯಿತು.

ವಾಹನವು ರಸ್ತೆ ಮಧ್ಯೆಯೇ ಇದ್ದಿದ್ದರಿಂದ ಇತರೆ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ಸೇತುವೆಯಿಂದ 3 ಕಿ.ಮೀವರೆಗೂ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು. ಬಾಣಸವಾಡಿ ಸಂಚಾರ ಪೊಲೀಸರು, ಮೂರ್ತಿ ಇದ್ದ ವಾಹನವನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸುವಂತೆ ಅದರ ಚಾಲಕನಿಗೆ ಸೂಚಿಸಿದರು. ಬಳಿಕವೇ ದಟ್ಟಣೆಯು ನಿಯಂತ್ರಣಕ್ಕೆ ಬಂತು.

ADVERTISEMENT

ರೈಲ್ವೆ ಇಲಾಖೆ ಅನುಮತಿ ಅಗತ್ಯ: ‘ಮೂರ್ತಿಯು ನಗರಕ್ಕೆ ಹೋಗಬೇಕಾದರೆ ಸೇತುವೆಯಲ್ಲಿ ರ‍್ಯಾಂಪ್‌ ನಿರ್ಮಿಸಬೇಕು. ಅದಕ್ಕೆ ರೈಲ್ವೆ ಇಲಾಖೆಯ ಅನುಮತಿ ಅಗತ್ಯ. ರೈಲ್ವೆ ಅಧಿಕಾರಿಗಳಿಗೆ ಈಗಾಗಲೇ ಮಾಹಿತಿ ನೀಡಿದ್ದು, ರಾತ್ರಿ ಸ್ಥಳಕ್ಕೆ ಬರುವುದಾಗಿ ಹೇಳಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

'ಮೂರ್ತಿ ಹೊತ್ತ ಲಾರಿಯು 26 ಅಡಿ ಅಗಲವಿದೆ. 750 ಟನ್‌ ಭಾರವಿದೆ. ಭಾನುವಾರ ಸಂಜೆ ನಂತರವೇ ಈ ವಾಹನವು ಸೇತುವೆ ಮೂಲಕ ಹಾದು ಹೋಗಬಹುದು. ಅಲ್ಲಿಯವರೆಗೂ ವಾಹನಗಳ ಸಂಚಾರ ಸುಗಮಗೊಳಿಸಲು ಹೆಚ್ಚಿನ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಿದ್ದೇವೆ’ ಎಂದರು.

‘ಬಸ್ಸಿನಲ್ಲಿ ಹೋಗುವ ಜನ, ಕೈ ಮುಗಿದು ಮುಂದೆ ಹೋಗುತ್ತಿದ್ದಾರೆ. ದ್ವಿಚಕ್ರ ವಾಹನ ಹಾಗೂ ಕಾರಿನಲ್ಲಿ ಪ್ರಯಾಣಿಸುವವರು, ವಾಹನವನ್ನು ರಸ್ತೆಯಲ್ಲಿ ನಿಲ್ಲಿಸಿ ಮೂರ್ತಿ ನೋಡುತ್ತಿದ್ದಾರೆ. ಇದು ಕೂಡ ದಟ್ಟಣೆಗೆ ಕಾರಣ’ ಎಂದರು.

ಕೋಲಾರ ಜಿಲ್ಲೆಯ ನರಸಾಪುರ ಹೋಬಳಿಯ ಭೈರಸಂದ್ರ ಗ್ರಾಮದಿಂದ ಈ ಮೂರ್ತಿಯನ್ನು ನಗರಕ್ಕೆ ತರಲಾಗುತ್ತಿದೆ. ಚುನಾವಣಾ ನೀತಿ ಸಂಹಿತೆಯಿಂದಾಗಿ  ಮೂರ್ತಿಯನ್ನು ಕೆಲ ದಿನಗಳ ಹಿಂದಷ್ಟೇ ಹೊಸಕೋಟೆಯ ದಂಡುಪಾಳ್ಯದ ಬಳಿ ಪೊಲೀಸರು ತಡೆದು ನಿಲ್ಲಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರಿಂದ ಮೂರ್ತಿಯನ್ನು ಮುಂದಕ್ಕೆ ಕೊಂಡೊಯ್ಯಲು ಅನುಮತಿ ನೀಡಿದ್ದರು.

ಎಚ್‌ಬಿಆರ್‌ ಬಡಾವಣೆಯ ಕಾಚರಕನಹಳ್ಳಿಯ ಕೋದಂಡರಾಮಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ‘ಶ್ರೀರಾಮ ಚೈತನ್ಯ ವರ್ಧಿನಿ ಟ್ರಸ್ಟ್‌’ ವತಿಯಿಂದ ಈ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.