ADVERTISEMENT

ರಸ್ತೆ ಗುಂಡಿ ಮುಚ್ಚಲು ಹೊಸ ತಂತ್ರಜ್ಞಾನ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2017, 19:30 IST
Last Updated 29 ಅಕ್ಟೋಬರ್ 2017, 19:30 IST
ರೆಸಿಡೆನ್ಸಿ ರಸ್ತೆಯಲ್ಲಿ ಹೊಸ ತಂತ್ರಜ್ಞಾನ ಬಳಸಿ ಗುಂಡಿ ಮುಚ್ಚಲಾಯಿತು.
ರೆಸಿಡೆನ್ಸಿ ರಸ್ತೆಯಲ್ಲಿ ಹೊಸ ತಂತ್ರಜ್ಞಾನ ಬಳಸಿ ಗುಂಡಿ ಮುಚ್ಚಲಾಯಿತು.   

ಬೆಂಗಳೂರು: ಹೊಸ ತಂತ್ರಜ್ಞಾನದ ಮೂಲಕ ‘ಪಾಟ್‌ಹೋಲ್ ಬಸ್ಟರ್’(ನ್ಯೂ ಪಾಲ್ಟ್) ಕಂಪೆನಿಯ ರಸ್ತೆ ಗುಂಡಿ ಮುಚ್ಚುವ ಪ್ರಾಯೋಗಿಕ ಕಾರ್ಯವನ್ನು ರೆಸಿಡೆನ್ಸಿ ಸರ್ವಿಸ್‌ ರಸ್ತೆಯಲ್ಲಿ ಮೇಯರ್‌ ಆರ್‌.ಸಂಪತ್‌ ರಾಜ್‌ ಭಾನುವಾರ ಪರಿಶೀಲಿಸಿದರು.

‘ಸಾಮಾನ್ಯ ವಿಧಾನದಲ್ಲಿ ಮರಳು, ಜಲ್ಲಿಕಲ್ಲು ಹಾಗೂ ಬಿಟಮಿನ್‌ ಸೇರಿಸಿ 140 ಡಿಗ್ರಿ ಸೆಂಟಿಗ್ರೇಡ್‌ನಲ್ಲಿ ಮಿಶ್ರಣ ಮಾಡಲಾಗುತ್ತದೆ. ಅದನ್ನು ತಂದು ರಸ್ತೆ ಗುಂಡಿ ಮುಚ್ಚಲಾಗುತ್ತದೆ. ಗುಂಡಿ ಮುಚ್ಚುವಾಗ ಡಾಂಬರಿನ ಮಿಶ್ರಣವು 120 ಡಿಗ್ರಿ ಸೆಂಟಿಗ್ರೇಡ್‌ ಶಾಖ ಹೊಂದಿರಬೇಕಾಗುತ್ತದೆ. ಆದರೆ, ಡಾಂಬರು ಮಿಶ್ರಣ ಘಟಕದಿಂದ ತರುವ ಹೊತ್ತಿಗೆ ಕನಿಷ್ಠ 2 ಗಂಟೆ ಹಿಡಿದಿರುತ್ತದೆ. ಈ ವೇಳೆಗೆ ಡಾಂಬರು ಮಿಶ್ರಣದ ಶಾಖ ಕಡಿಮೆ ಆಗಿರುತ್ತದೆ. ಗುಂಡಿ ಮುಚ್ಚಿದರೂ ಅದು ರಸ್ತೆಗೆ ಕಚ್ಚಿಕೊಳ್ಳುವುದಿಲ್ಲ. ಇದರಿಂದ ಮತ್ತೆ ಗುಂಡಿ ಬೀಳುತ್ತದೆ’ ಎಂದು ಬಿಬಿಎಂಪಿ ಅಧಿಕಾರಿ ತಿಳಿಸಿದರು.

‘ಪಾಟ್‌ಹೋಲ್ ಬಸ್ಟರ್ ಕಂಪೆನಿಯವರು ಹೊಸ ತಂತ್ರಜ್ಞಾನ ಬಳಸಿ ಸ್ಥಳದಲ್ಲೇ ಡಾಂಬರು ಮಿಶ್ರಣವನ್ನು ತಯಾರಿಸುತ್ತಾರೆ. ಅದನ್ನು ಗುಂಡಿಗೆ ಹಾಕಿ, ಸುಮಾರು 110 ಡಿಗ್ರಿ ಸೆಂಟಿಗೇಡ್‌ನಷ್ಟು ಶಾಖ ನೀಡುತ್ತಾರೆ. ಬಳಿಕ ರೋಲರ್‌ ಮೂಲಕ ಸಮತಟ್ಟು ಮಾಡುತ್ತಾರೆ. ಇದರಿಂದ ಎರಡು ವರ್ಷಗಳವರೆಗೆ ರಸ್ತೆ ಹಾಳಾಗುವುದಿಲ್ಲ. ಈ ಕಂಪೆನಿಯು ದೆಹಲಿ ಸೇರಿ ಕೆಲ ನಗರಗಳಲ್ಲಿ ರಸ್ತೆ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಿದೆ’ ಎಂದು ಹೇಳಿದರು.

ADVERTISEMENT

‘ಈ ತಂತ್ರಜ್ಞಾನದ ಸಾಧಕ–ಬಾಧಕಗಳನ್ನು ಪರಿಶೀಲಿಸಿದ ಬಳಿಕ, ಇದರ ಅಳವಡಿಕೆಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಸಂಪತ್‌ ರಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.