ADVERTISEMENT

ರಸ್ತೆ ದುರಸ್ತಿಗೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 19:59 IST
Last Updated 3 ಆಗಸ್ಟ್ 2013, 19:59 IST
ತೂಬರಹಳ್ಳಿ ಹಾಗೂ ಮುನೆಕೊಳಲು ಮಾರ್ಗದ ರಸ್ತೆಯನ್ನು ದುರಸ್ತಿಪಡಿಸುವಂತೆ ಒತ್ತಾಯಿಸಿ ಸ್ಥಳೀಯರು ಶನಿವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು
ತೂಬರಹಳ್ಳಿ ಹಾಗೂ ಮುನೆಕೊಳಲು ಮಾರ್ಗದ ರಸ್ತೆಯನ್ನು ದುರಸ್ತಿಪಡಿಸುವಂತೆ ಒತ್ತಾಯಿಸಿ ಸ್ಥಳೀಯರು ಶನಿವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು   

ಬೆಂಗಳೂರು: ದೊಡ್ಡನೆಕ್ಕುಂದಿ ವಾರ್ಡ್‌ನ ತೂಬರಹಳ್ಳಿ- ಮುನೆಕೊಳಲು ಮಾರ್ಗದ ರಸ್ತೆ ದುರಸ್ತಿ ಮಾಡುವಂತೆ ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಶನಿವಾರ ಪ್ರತಿಭಟನೆ ನಡೆಸಿದರು.

ತೂಬರಹಳ್ಳಿಯ ವೆಂಕಟೇಶ್ವರ ದೇವಸ್ಥಾನದಿಂದ ಮುನೆಕೊಳಲುವರೆಗಿನ ಒಳ ವತೃಲು ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ನಿತ್ಯ ನರಕ ಅನುಭವಿಸುತ್ತಿದ್ದಾರೆ. ಈ ಮಾರ್ಗವನ್ನು ಅಭಿವೃದ್ಧಿಪಡಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ. ಮಳೆಗಾಲದಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿದು ಅವಾಂತರ ಸೃಷ್ಟಿಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

`ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ಆಟೊ, ಆಂಬುಲೆನ್ಸ್ ಹಾಗೂ ಟ್ಯಾಕ್ಸಿಗಳ ಚಾಲಕರು ಇಲ್ಲಿಗೆ ಸೇವೆ ಒದಗಿಸಲು ನಿರಾಕರಿಸುತ್ತಾರೆ. ರಸ್ತೆ ಅಭಿವೃದ್ಧಿಪಡಿಸುವ ನೆಪದಲ್ಲಿ ಬಿಬಿಎಂಪಿ ಇದ್ದ ಮಣ್ಣಿನ ರಸ್ತೆಯನ್ನು ಅಗೆದು ಹಾಳು ಮಾಡಿದೆ. ಆದರೆ, ನಿಗದಿತ ಸಮಯದಲ್ಲಿ ದುರಸ್ತಿ ಕಾರ್ಯವನ್ನೂ ಮಾಡದೇ, ಅಗೆದಿರುವ ಗುಂಡಿಯನ್ನು ಮುಚ್ಚದ ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ಸ್ಥಳೀಯರು ಯಾತನೆ ಅನುಭವಿಸುತ್ತಿದ್ದಾರೆ' ಎಂದು ಅಲ್ಲಿನ ನಿವಾಸಿ ಅಮಿತ್ ಅಗರ್ವಾಲ್ ಬೇಸರ ವ್ಯಕ್ತಪಡಿಸಿದರು.

`ತೂಬರಹಳ್ಳಿ- ಮುನೆಕೊಳಲು ಮಾರ್ಗದ 4.25 ಕಿ.ಮೀ ಉದ್ದದ ಒಳ ವರ್ತುಲ ರಸ್ತೆಯನ್ನು ದುರಸ್ತಿ ಮಾಡಲು 2010ರಲ್ಲಿ ಟೆಂಡರ್ ಕರೆಯಲಾಗಿತ್ತು. ಆದರೆ, ಆ ಕಾಮಗಾರಿ ಅರ್ಧಕ್ಕೆ ನಿಂತು ಹೋಗಿದ್ದರಿಂದ ಇದ್ದ ರಸ್ತೆಯೂ ಹಾಳಾಯಿತು. ಈ ಬಗ್ಗೆ ಸ್ಥಳೀಯ ಶಾಸಕರು, ಪಾಲಿಕೆ ಸದಸ್ಯರು, ಬಿಬಿಎಂಪಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪರಿಹಾರ ಸಿಗಲಿಲ್ಲ' ಎಂದು ಅಂಜಲಿ ಆರೋಪಿಸಿದರು.

ಈ ಮಾರ್ಗದಲ್ಲಿ ಸುಮಾರು 1500ಕ್ಕೂ ಹೆಚ್ಚು ಮನೆಗಳು, ಐದಾರು ವಸತಿ ಸಮುಚ್ಚಯಗಳು, ಶಾಲೆಗಳು, ಧಾರ್ಮಿಕ ಕೇಂದ್ರಗಳಿವೆ. ಆದರೆ, ಇಲ್ಲಿಗೆ ಬಂದು ಹೋಗುವವರಿಗೆ ಮಾತ್ರ ಸೂಕ್ತ ಸಂಪರ್ಕ ವ್ಯವಸ್ಥೆ ಇಲ್ಲ. ಅಲ್ಲದೇ, ರಸ್ತೆ ಮೇಲೆ ನಿಂತಿರುವ ಕೊಳಚೆ ನೀರಿನಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಜನರನ್ನು ಆವರಿಸಿದೆ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳು ತ್ವರಿತಗತಿಯಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.