ADVERTISEMENT

ರಾಜಕಾರಣ ಒಂದು ವ್ಯಸನವಿದ್ದಂತೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2012, 19:30 IST
Last Updated 25 ಜುಲೈ 2012, 19:30 IST
ರಾಜಕಾರಣ ಒಂದು ವ್ಯಸನವಿದ್ದಂತೆ
ರಾಜಕಾರಣ ಒಂದು ವ್ಯಸನವಿದ್ದಂತೆ   

ಬೆಂಗಳೂರು: `ರಾಜಕೀಯದ ಕಾರಣದಿಂದ ವೈಯಕ್ತಿಕ ಜೀವನವನ್ನು ಕಳೆದುಕೊಳ್ಳುವುದು ರಾಜಕಾರಣಿಗಳಿಗೆ ಅನಿವಾರ್ಯ~ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

ಬಸವರಾಜ ಹೊರಟ್ಟಿ ಅಭಿಮಾನಿಗಳ ಬಳಗ ನಗರದ ಭಾರತೀಯ ವಿದ್ಯಾಭವನದಲ್ಲಿ ಬುಧವಾರ ಆಯೋಜಿಸಿದ್ದ `ಸದನದಲ್ಲಿ ಹೋರಾಟದ ಹೊರಟ್ಟಿ~ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

`ರಾಜಕಾರಣ ಒಂದು ವ್ಯಸನವಿದ್ದಂತೆ. ಒಮ್ಮೆ ಇದರೊಳಗೆ ಸೇರಿದರೆ ಮತ್ತೆ ಇಲ್ಲಿಂದ ಬಿಡಿಸಿಕೊಳ್ಳುವುದು ಬಹಳ ಕಷ್ಟ. ರಾಜಕಾರಣಿಯಾದ ಕಾರಣಕ್ಕೆ ನನ್ನ ವೈಯಕ್ತಿಕ ಜೀವನದ ಬಹುಪಾಲು ಸಮಯವನ್ನು ನಾನು ಮನೆಯ ಹೊರಗೆ ಕಳೆಯಬೇಕಾಯಿತು. ಜೀವನದ ಬಹು ಸಮಯವನ್ನು ರೈಲಿನಲ್ಲಿ ಕಳೆದ ಅನುಭವ ನನ್ನದು. ಇದೆಲ್ಲ ರಾಜಕೀಯ ಜೀವನದಲ್ಲಿ ಅನಿವಾರ್ಯ~ ಎಂದು ಅವರು ಹೇಳಿದರು.

ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು ಮಾತನಾಡಿ, `ವಿಧಾನ ಪರಿಷತ್ತಿಗೆ ತನ್ನದೇ ಆದ ಘನತೆ ಇದೆ. ಈ ಘನತೆಯನ್ನು ಕಾಪಾಡಬೇಕಾದ್ದು ಪರಿಷತ್ತಿಗೆ ಸದಸ್ಯರಾಗಿ ಆಯ್ಕೆಯಾದ ಎಲ್ಲರ ಜವಾಬ್ದಾರಿ. ದೇಶದ ಸಾಕಷ್ಟು ಜನ ಮುಖ್ಯಮಂತ್ರಿಗಳು ವಿಧಾನ ಪರಿಷತ್ತುಗಳಿಂದ ಹಾಗೂ ಈಗಿನ ಪ್ರಧಾನ ಮಂತ್ರಿಯವರು ರಾಜ್ಯಸಭೆಯಿಂದಲೇ ಆ ಹುದ್ದೆಗೆ ಆಯ್ಕೆಯಾದವರು ಎಂಬುದು ಮೇಲ್ಮನೆಗಳ ಮಹತ್ವವನ್ನು ತಿಳಿಸುತ್ತದೆ~ ಎಂದರು.

ಹಿರಿಯ ಸಾಹಿತಿ ಪ್ರೊ.ಜಿ.ಎಸ್. ಸಿದ್ಧಲಿಂಗಯ್ಯ ಮಾತನಾಡಿ, `ದೇಶ ಕಟ್ಟಲು ಪಕ್ಷ ಮುಖ್ಯವಲ್ಲ, ಧ್ಯೇಯ ಮುಖ್ಯ. ರಾಜಕಾರಣದಲ್ಲಿ ಮೊದಲಿನಿಂದಲೂ ಬದ್ಧತೆಯನ್ನು ಕಾಯ್ದುಕೊಂಡು ಬಂದ ರಾಜಕಾರಣಿ ಬಸವರಾಜ ಹೊರಟ್ಟಿ. ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾತೃಭಾಷೆ ಕಡ್ಡಾಯ ಎಂಬ ವಿಚಾರದಲ್ಲಿ ಅವರು ತೋರಿದ ನಿಲುವು ಕಠಿಣವಾದುದು~ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಸಿ. ನಾಣಯ್ಯ ಮಾತನಾಡಿ, `ಇತ್ತೀಚೆಗೆ ರಾಜಕೀಯ ಕ್ಷೇತ್ರ ಕಲುಷಿತಗೊಂಡಿದೆ. ರಾಜಕಾರಣಿ ಎಂದು ಹೇಳಿಕೊಳ್ಳಲೇ ಮುಜುಗರ ಪಡಬೇಕಾದ ಸ್ಥಿತಿ ಇಂದು ನಿರ್ಮಾಣವಾಗಿದೆ. ಆದರೆ, ಇಲ್ಲಿಯವರೆಗೂ ಕಳಂಕ ರಹಿತ ರಾಜಕಾರಣ ಮಾಡಿಕೊಂಡು ಬಂದ ಶುದ್ಧ ರಾಜಕಾರಣಿ ಹೊರಟ್ಟಿ~ ಎಂದರು.

ಸಮಾರಂಭದಲ್ಲಿ ಬಸವರಾಜ ಹೊರಟ್ಟಿ ಮತ್ತು ಅವರ ಪತ್ನಿ ಹೇಮಲತಾ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಪುಸ್ತಕ ಬಿಡುಗಡೆಗೊಳಿಸಿದರು.

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಎಲ್. ಶಂಕರ್, ಪುಸ್ತಕದ ಸಂಪಾದಕ ಕೆ.ಎಸ್. ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
ಭಾಗ್ಯಲಕ್ಷ್ಮೀ ಪ್ರಕಾಶನ ಹೊರತಂದಿರುವ ಪುಸ್ತಕದ ಬೆಲೆ 400 ರೂಪಾಯಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT