ADVERTISEMENT

ರಾಜಕಾಲುವೆ ಅಕ್ರಮ: ತನಿಖೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 19:30 IST
Last Updated 8 ಜನವರಿ 2014, 19:30 IST

ಬೆಂಗಳೂರು: ರಾಜಕಾಲುವೆಗಳ ಹೂಳೆತ್ತುವ ಕಾಮಗಾರಿ­ಗಳಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ಒಂದು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಾಮ­ಲಿಂಗಾರೆಡ್ಡಿ ಅವರು ನಗರಾಭಿವೃದ್ಧಿ ಇಲಾಖೆಗೆ ಸೂಚಿಸಿದರು.

ವಿಧಾನಸೌಧದಲ್ಲಿ ಬುಧವಾರ ಜೆ–ನರ್ಮ್‌ ಯೋಜನೆ ಅಡಿ ಕೈಗೊಳ್ಳಲಾದ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮತ್ತು ಉಸ್ತುವಾರಿ ಸಮಿತಿಯ ಪ್ರಥಮ ಸಭೆಯಲ್ಲಿ ಮಾತನಾಡಿದ ಅವರು,  ಕೋರಮಂಗಲ, ಚಲ್ಲಘಟ್ಟ, ಹೆಬ್ಬಾಳ, ವೃಷಭಾವತಿ ರಾಜಕಾಲುವೆಗಳ ಹೂಳೆತ್ತುವ ಕಾಮಗಾರಿಯನ್ನು 2007–08ನೇ ಸಾಲಿನಲ್ಲಿ ಆರಂಭಿಸಿದ್ದರೂ ಇದುವರೆಗೆ ಮುಗಿದಿಲ್ಲ. ಸುಮಾರು ₨400 ಕೋಟಿ ಖರ್ಚು ಮಾಡಿದ್ದರೂ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ. ಈ ಬಗ್ಗೆ ಇಲಾಖೆ ವತಿಯಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಸೂಚಿಸಿದರು.

ಬಿಬಿಎಂಪಿ ಆಯುಕ್ತ ಎಂ. ಲಕ್ಷ್ಮೀನಾರಾಯಣ್‌ ಮಾತ­ನಾಡಿ, ರಾಜಕಾಲುವೆ ಹೂಳೆತ್ತುವ ಕಾಮಗಾರಿ ಸಮರ್ಪಕ­ವಾಗಿ ನಡೆಯದ ಕಾರಣ ಕೇಂದ್ರ ಸರ್ಕಾರ ಅನುದಾನ ನೀಡುವುದಿಲ್ಲ ಎಂದು ತಿಳಿಸಿದೆ. ಬಿಬಿಎಂಪಿ ವತಿಯಿಂದಲೇ ಈ ಕಾಮಗಾರಿಯನ್ನು ಮುಂದುವರಿಸಬೇಕಾಗಿದೆ. ಈಗಾಗಲೇ ಹೂಳೆತ್ತಲು ₨400 ಕೋಟಿ ಖರ್ಚು ಮಾಡಲಾಗಿದೆ. ಮಾರ್ಚ್‌ 14ರ ಒಳಗೆ ಆ ಕಾಮಗಾರಿ ಪೂರ್ಣಗೊಳಿಸಲು ಗಡುವು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ವಾರ್ತಾ ಸಚಿವ ಆರ್‌. ರೋಷನ್‌ಬೇಗ್‌ ಮಾತನಾಡಿ, ನಾಲ್ಕು ವರ್ಷಗಳಲ್ಲಿ ₨400 ಕೋಟಿ ನುಂಗಿದ ಈ ಕಾಮ­ಗಾರಿಗೆ ಪ್ರಶಸ್ತಿ ನೀಡಬೇಕು ಎಂದು ಲೇವಡಿ ಮಾಡಿದರು.

ಶಾಸಕರಾದ ಮುನಿರತ್ನ, ಎಸ್‌.ಆರ್‌. ವಿಶ್ವನಾಥ್‌, ಬೈರತಿ ಬಸವರಾಜ್‌ ಅವರು,  ಈ ಕಾಮಗಾರಿಗಳ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಿದ್ದರೂ ನನೆಗುದಿಗೆ ಬಿದ್ದಿದೆ. ಈ ಕಾಮಗಾರಿಯಲ್ಲಿ ವ್ಯಾಪಕ ಅಕ್ರಮಗಳು ನಡೆದಿರುವುದರಿಂದ ಇಲಾಖೆ ವತಿಯಿಂದಲೂ ಸಮಗ್ರ ತನಿಖೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಸತ್‌ ಸದಸ್ಯ ಅನಂತಕುಮಾರ್‌,  ಬೆಂಗಳೂರು ಜಲಮಂಡಳಿ ಅಧ್ಯಕ್ಷ ಎಂ.ಎಸ್‌. ರವಿಶಂಕರ್‌, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಎಂ.ಶ್ರೀನಿವಾಸಾಚಾರಿ, ಶಾಸಕರಾದ ಎಸ್‌.ಟಿ. ಸೋಮಶೇಖರ್‌, ಬಿ.ಎನ್‌.­ವಿಜಯಕುಮಾರ್‌, ಗೋಪಾಲಯ್ಯ, ಬಿಬಿಎಂಪಿ ಮೇಯರ್‌ ಕಟ್ಟೆ ಸತ್ಯನಾರಾಯಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.