ADVERTISEMENT

ರಾಜಧಾನಿಯಲ್ಲಿ ಕಾಂಗ್ರೆಸ್‌ ಮುಂದೆ

ಬಲ ಹೆಚ್ಚಿಸಿಕೊಳ್ಳದ ಬಿಜೆಪಿ: ಅಸ್ತಿತ್ವ ಉಳಿಸಿಕೊಂಡ ಜೆಡಿಎಸ್‌

​ಪ್ರಜಾವಾಣಿ ವಾರ್ತೆ
Published 15 ಮೇ 2018, 19:18 IST
Last Updated 15 ಮೇ 2018, 19:18 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್‌ ಪಕ್ಷವು ರಾಜ್ಯದಾದ್ಯಂತ ಹಿನ್ನೆಡೆ ಅನುಭವಿಸಿದ್ದರೂ, ರಾಜಧಾನಿಯಲ್ಲಿ ತನ್ನ ಪಾರಮ್ಯ ಬಿಟ್ಟುಕೊಟ್ಟಿಲ್ಲ. ಇಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ಗಿಂತ ಹೆಚ್ಚಿನ ಸ್ಥಾನ ಗೆಲ್ಲುವಲ್ಲಿ ಕಾಂಗ್ರೆಸ್‌ ಸಫಲವಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಚುನಾವಣೆ ನಡೆದ 26 ಕ್ಷೇತ್ರಗಳಲ್ಲಿ 13ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಆರಿಸಿ ಬಂದಿದ್ದಾರೆ. 11 ಕಡೆ ಬಿಜೆಪಿ ಅಭ್ಯರ್ಥಿಗಳು ಹಾಗೂ 2 ಕಡೆ ಜೆಡಿಎಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

2013ರ ಚುನಾವಣೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ 28 ಕ್ಷೇತ್ರಗಳಲ್ಲಿ 13ರಲ್ಲಿ ಕಾಂಗ್ರೆಸ್‌, 12ರಲ್ಲಿ ಬಿಜೆಪಿ ಹಾಗೂ 3 ಕಡೆ ಜೆಡಿಎಸ್‌ ಅಭ್ಯರ್ಥಿಗಳು ಗೆದ್ದಿದ್ದರು. ಈ ಬಾರಿ ಮಹಾನಗರದ 22 ಮಂದಿ ಶಾಸಕರು ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಹೆಬ್ಬಾಳದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎಸ್‌.ಸುರೇಶ್‌, ಚಿಕ್ಕಪೇಟೆಯ ಬಿಜೆಪಿ ಅಭ್ಯರ್ಥಿ ಉದಯ್‌ ಗರುಡಾಚಾರ್‌, ಟಿ.ದಾಸರಹಳ್ಳಿಯ ಜೆಡಿಎಸ್‌ ಅಭ್ಯರ್ಥಿ ಆರ್‌.ಮಂಜುನಾಥ್‌ ಈ ಬಾರಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ.

ADVERTISEMENT

ಗೋವಿಂದರಾಜನಗರದಲ್ಲಿ ಪ್ರಿಯಕೃಷ್ಣ ಹ್ಯಾಟ್ರಿಕ್‌ ಗೆಲುವಿನ ಕನಸಿಗೆ ತಣ್ಣೀರೆರಚುವ ಮೂಲಕ ಬಿಜೆಪಿಯ ವಿ.ಸೋಮಣ್ಣ 2009ರ ಉಪಚುನಾವಣೆಯ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ.

ನಾಲ್ಕನೇ ಬಾರಿ ಗೆಲ್ಲುವ ತವಕದಲ್ಲಿದ್ದ ಚಿಕ್ಕಪೇಟೆಯ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ವಿ.ದೇವರಾಜ್‌ ಅವರಿಗೆ ಉದಯ್‌ ಗರುಡಾಚಾರ್‌ ಅಡ್ಡಗಾಲು ಹಾಕಿದ್ದಾರೆ. ಎಸ್‌.ಮುನಿರಾಜು ಅವರ ಹ್ಯಾಟ್ರಿಕ್‌ ಜಯದ ಕನಸಿಗೆ ಆರ್‌.ಮಂಜುನಾಥ್‌ ತಣ್ಣೀರೆರಚಿದ್ದಾರೆ.

ಮೇಲ್ಮನೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕೆಳಮನೆ ಪ್ರವೇಶಿಸಿದ್ದ ವೈ.ಎ.ನಾರಾಯಣ ಸ್ವಾಮಿ ಎರಡನೇ ಬಾರಿ ಆಯ್ಕೆಯಾಗುವುದಕ್ಕೆ ಬಿ.ಎಸ್‌.ಸುರೇಶ್‌ ತಡೆಯೊಡ್ಡಿದ್ದಾರೆ.

ರಾಮಲಿಂಗಾರೆಡ್ಡಿ ಹಾಗೂ ಆರ್‌.ರೋಷನ್‌ ಬೇಗ್‌ ಅವರು ಏಳನೇ ಬಾರಿ ಜಯದ ನಗೆ ಬೀರಿದ್ದಾರೆ. ಬಿಜೆಪಿಯ ಆರ್‌.ಅಶೋಕ ನಿರಂತರ ಆರನೇ ಬಾರಿ ಜಯದ ಮಾಲೆಗೆ ಕೊರಳೊಡ್ಡಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್ ಅವರಿಗಿದು ಐದನೇ ಗೆಲುವು. ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ, ಜಮೀರ್‌ ಅಹಮದ್‌ ಖಾನ್‌ ಹಾಗೂ ಬಿಜೆಪಿಯ ಎಸ್‌.ರಘು ಅವರಿಗೆ ಈ ಬಾರಿಯದು ನಾಲ್ಕನೇ ಗೆಲುವು.

ಹ್ಯಾಟ್ರಿಕ್‌ ಸಾಧಕರು: ಬಿಜೆಪಿಯ ಎಸ್‌.ಸುರೇಶ್‌ ಕುಮಾರ್‌, ಅರವಿಂದ ಲಿಂಬಾವಳಿ, ಡಾ.ಸಿ.ಎನ್.ಅಶ್ವತ್ಥನಾರಾಯಣ, ಸತೀಶ್‌ ರೆಡ್ಡಿ, ರವಿ ಸುಬ್ರಹ್ಮಣ್ಯ, ಎಂ.ಕೃಷ್ಣಪ್ಪ, ಎಸ್‌.ಆರ್‌.ವಿಶ್ವನಾಥ್‌, ಕಾಂಗ್ರೆಸ್‌ನ ಎಂ.ಕೃಷ್ಣಪ್ಪ, ಎನ್‌.ಹ್ಯಾರಿಸ್‌ ಗೆಲುವಿನಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ. ಕಾಂಗ್ರೆಸ್‌ನ ಎಸ್‌.ಟಿ.ಸೋಮಶೇಖರ್‌, ಬಿ.ಎ.ಬಸವರಾಜು, ಅಖಂಡ ಶ್ರೀನಿವಾಸ ಮೂರ್ತಿ, ಜೆಡಿಎಸ್‌ನ ಕೆ.ಗೋಪಾಲಯ್ಯ, ಬಿ.ಶಿವಣ್ಣ ಅವರಿಗಿದು ಸತತ ಎರಡನೇ ಗೆಲುವು.

ಪ್ರಧಾನಿ ನರೇಂದ್ರ ಮೋದಿ ಅವರು ಕೆಂಗೇರಿ ಹಾಗೂ ಬಸವನಗುಡಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು. ಕೇಂಗೇರಿಯನ್ನು ಒಳಗೊಂಡ ಯಶವಂತಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಗ್ಗೇಶ್‌ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ. ಆದರೆ, ಬಸವನಗುಡಿ ಹಾಗೂ ಅದರ ಆಸುಪಾಸಿನ ಪದ್ಮನಾಭನಗರ, ಬೆಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿ ‘ಕಮಲ’ ಪಕ್ಷದ  ಅಭ್ಯರ್ಥಿಗಳು 30ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಕಾಂಗ್ರೆಸ್‌ ತೆಕ್ಕೆಯಲ್ಲಿದ್ದ ಚಿಕ್ಕಪೇಟೆ ಕ್ಷೇತ್ರವನ್ನು ಬಿಜೆಪಿ ಕಸಿದುಕೊಳ್ಳುವಲ್ಲಿಯೂ ಮೋದಿ ಪ್ರಭಾವ ಎದ್ದು ಕಾಣುತ್ತಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಹೊಸಕೋಟೆ, ಶಾಂತಿನಗರ, ಸರ್ವಜ್ಞನಗರ, ಶಿವಾಜಿನಗರಗಳಲ್ಲಿ ರೋಡ್‌ ಶೋ ನಡೆಸಿದ್ದರು. ಇಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲುವಿನ ದಡ ಸೇರಿಸುವಲ್ಲಿ ಅವರ ವರ್ಚಸ್ಸು ಕೆಲಸ ಮಾಡಿಲ್ಲ. ಇಲ್ಲೆಲ್ಲಾ ಕಾಂಗ್ರೆಸ್‌ ಅಭ್ಯರ್ಥಿಗಳು ಗೆದ್ದಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಬಳೆಪೇಟೆ, ಶಿವಾಜಿನಗರ, ಸರ್ವಜ್ಞನಗರ, ಬಿಟಿಎಂ ಲೇಔಟ್‌ ಹಾಗೂ ಹೆಬ್ಬಾಳದಲ್ಲಿ ರೋಡ್‌ ಷೋ ನಡೆಸಿದ್ದರು. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆದ್ದಿದ್ದಾರೆ. ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದಾರೆ.

ಪಕ್ಷಾಂತರಿಗಳಿಗೆ ಗೆಲುವು
ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಜಿಗಿದಿದ್ದ ಚಾಮರಾಜಪೇಟೆಯ ಜಮೀರ್‌ ಅಹಮದ್‌ ಖಾನ್‌ ಹಾಗೂ ಪುಲಕೇಶಿನಗರದ ಅಖಂಡ ಶ್ರೀನಿವಾಸ ಮೂರ್ತಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಪ್ರಾಬಲ್ಯ ಉಳಿಸಿಕೊಂಡ ಸಚಿವರು
ರಾಜ್ಯದಾದ್ಯಂತ ಅನೇಕ ಸಚಿವರು ಸೋಲಿನ ರುಚಿ ಕಂಡಿದ್ದರೆ, ರಾಜಧಾನಿಯಲ್ಲಿ ಕಣದಲ್ಲಿದ್ದ ಸಚಿವರು ಗೆದ್ದು ಬೀಗಿದ್ದಾರೆ. ಬೆಂಗಳೂರು ಅಭಿವೃದ್ಧಿ ಸಚಿವರ ಕೆ.ಜೆ.ಜಾರ್ಜ್‌, ಗೃಹಸಚಿವ ರಾಮಲಿಂಗಾ ರೆಡ್ಡಿ, ನಗರಾಭಿವೃದ್ಧಿ ಸಚಿವ ರೋಷನ್‌ ಬೇಗ್‌ ಅವರು ಭಾರಿ ಅಂತರದಿಂದ ಗೆದ್ದಿದ್ದಾರೆ. ವಸತಿ ಸಚಿವ ಎಂ.ಕೃಷ್ಣಪ್ಪ ಅಲ್ಪ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

ಬಿಬಿಎಂಪಿ ಮೈತ್ರಿಗೆ ಧಕ್ಕೆ ಇಲ್ಲ
2015ರ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ (101) ಗೆದ್ದರೂ ಅಧಿಕಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. 76 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್‌, 14 ಸ್ಥಾನ ಗೆದ್ದಿದ್ದ ಜೆಡಿಎಸ್‌ ಹಾಗೂ ಪಕ್ಷೇತರರನ್ನು ಒಳಗೊಂಡ ಮೈತ್ರಿಕೂಟ ಇಲ್ಲಿ ಆಡಳಿತ ನಡೆಸುತ್ತಿದೆ. ವಿಧಾನಸಭೆಯಲ್ಲೂ ಹೆಚ್ಚೂ ಕಡಿಮೆ ಇದೇ ರೀತಿಯ ಅತಂತ್ರ ಫಲಿತಾಂಶ ಬಂದಿದೆ. ಇಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿಕೂಟ ಸರ್ಕಾರ ರಚನೆಯಾದರೆ ಬಿಬಿಎಂಪಿಯಲ್ಲಿ ಈಗಿರುವ ಮೈತ್ರಿ ಮುಂದುವರಿಯುವ ಸಾಧ್ಯತೆ ಹೆಚ್ಚು.

ಪ್ರಾಬಲ್ಯ ಉಳಿಸಿಕೊಂಡ ಸಚಿವರು
ರಾಜ್ಯದಾದ್ಯಂತ ಅನೇಕ ಸಚಿವರು ಸೋಲಿನ ರುಚಿ ಕಂಡಿದ್ದರೆ, ರಾಜಧಾನಿಯಲ್ಲಿ ಕಣದಲ್ಲಿದ್ದ ಸಚಿವರು ಗೆದ್ದು ಬೀಗಿದ್ದಾರೆ. ಬೆಂಗಳೂರು ಅಭಿವೃದ್ಧಿ ಸಚಿವರ ಕೆ.ಜೆ.ಜಾರ್ಜ್‌, ಗೃಹಸಚಿವ ರಾಮಲಿಂಗಾ ರೆಡ್ಡಿ, ನಗರಾಭಿವೃದ್ಧಿ ಸಚಿವ ರೋಷನ್‌ ಬೇಗ್‌ ಅವರು ಭಾರಿ ಅಂತರದಿಂದ ಗೆದ್ದಿದ್ದಾರೆ. ವಸತಿ ಸಚಿವ ಎಂ.ಕೃಷ್ಣಪ್ಪ ಅಲ್ಪ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

ಬಿಬಿಎಂಪಿ ಮೈತ್ರಿ ಅಬಾಧಿತ?
2015ರ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ (101) ಗೆದ್ದರೂ ಅಧಿಕಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. 76 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್‌, 14 ಸ್ಥಾನ ಗೆದ್ದಿದ್ದ ಜೆಡಿಎಸ್‌ ಹಾಗೂ ಪಕ್ಷೇತರರನ್ನು ಒಳಗೊಂಡ ಮೈತ್ರಿಕೂಟ ಇಲ್ಲಿ ಆಡಳಿತ ನಡೆಸುತ್ತಿದೆ. ವಿಧಾನಸಭೆಯಲ್ಲೂ ಹೆಚ್ಚೂ ಕಡಿಮೆ ಇದೇ ರೀತಿಯ ಅತಂತ್ರ ಫಲಿತಾಂಶ ಬಂದಿದೆ. ಇಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿಕೂಟ ಸರ್ಕಾರ ರಚನೆಯಾದರೆ ಬಿಬಿಎಂಪಿಯಲ್ಲಿ ಈಗಿರುವ ಮೈತ್ರಿ ಮುಂದುವರಿಯುವ ಸಾಧ್ಯತೆ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.