ADVERTISEMENT

ರಾಜಭವನ ಮುತ್ತಿಗೆಗೆ ವಿಫಲ ಯತ್ನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 19:43 IST
Last Updated 3 ಅಕ್ಟೋಬರ್ 2017, 19:43 IST
ರಾಜಭವನ ಮುತ್ತಿಗೆಗೆ ವಿಫಲ ಯತ್ನ
ರಾಜಭವನ ಮುತ್ತಿಗೆಗೆ ವಿಫಲ ಯತ್ನ   

ಬೆಂಗಳೂರು: ಗೋವಾದ ಬೈನಾ ಕಡಲತೀರದಲ್ಲಿ ಕನ್ನಡಿಗರ ಮನೆಗಳನ್ನು ತೆರವುಗೊಳಿಸಿದ ಅಲ್ಲಿನ ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕನ್ನಡ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ರಾಜಭವನಕ್ಕೆ ಮಂಗಳವಾರ ಮುತ್ತಿಗೆ ಹಾಕಲು ವಿಫಲ ಯತ್ನ ನಡೆಸಿದರು.

ಮೆರವಣಿಗೆ ಮೂಲಕ ತೆರಳಿದ್ದ ನೂರಾರು ಸಂಖ್ಯೆಯ ಕಾರ್ಯಕರ್ತರನ್ನು ರಾಜಭವನದ ಹೊರಗೆ ಪೊಲೀಸರು ತಡೆದರು. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ತಳ್ಳಾಟ–ನೂಕಾಟ ಉಂಟಾಯಿತು. ಬಳಿಕ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು ಕೆಲಹೊತ್ತಿನ ಬಳಿಕ ಅವರನ್ನು ಬಿಡುಗಡೆಗೊಳಿಸಿದರು.

ದಬ್ಬಾಳಿಕೆಯ ಪರಮಾವಧಿ: ‘ಗೋವಾದ ಕನ್ನಡಿಗರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ನೋಟಿಸ್ ನೀಡದೆ ಇತ್ತೀಚೆಗೆ ಕನ್ನಡಿಗರ 55 ಮನೆ ಹಾಗೂ ಎರಡು ದೇವಸ್ಥಾನಗಳನ್ನು ಅಲ್ಲಿನ ಸರ್ಕಾರ ತೆರವುಗೊಳಿಸಿದೆ. ಇದು ದಬ್ಬಾಳಿಕೆಯ ಪರಮಾವಧಿ’ ಎಂದು ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಕಿಡಿಕಾರಿದರು.

ADVERTISEMENT

‘ಮನೆಗಳನ್ನು ತೆರವುಗೊಳಿಸಿದ ಬಳಿಕ ಸೌಜನ್ಯಕ್ಕಾದರೂ ಅಲ್ಲಿನ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಅವರು ಸಂತ್ರಸ್ತರನ್ನು ಭೇಟಿಯಾಗಿಲ್ಲ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದು ಸುಮ್ಮನಾಗಿದ್ದಾರೆ. ನಮ್ಮವರ ರಕ್ಷಣೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಹೀಗಾಗಿ, ಸಿದ್ದರಾಮಯ್ಯ ಮನೆ ಮುಂದೆ ಇದೇ 7ರಂದು ಧರಣಿ ನಡೆಸುತ್ತೇವೆ’ ಎಂದರು.

‘ಅಲ್ಲಿನ ಸರ್ಕಾರ ಕನ್ನಡಿಗರನ್ನು ಗುಲಾಮರಂತೆ ಕಾಣುತ್ತಿದೆ. ಇದು ಒಕ್ಕೂಟ ವ್ಯವಸ್ಥೆಗೆ ಅಪಚಾರ. ದೇಶದೊಳಗಿದ್ದರೂ ಅಲ್ಲಿನ ರಾಜಕಾರಣಿಗಳು ವಿದೇಶಿಗರಂತೆ ವರ್ತಿಸುತ್ತಿದ್ದಾರೆ. ಗೋವಾ ಸರ್ಕಾರಕ್ಕೆ ರಾಜ್ಯದ ಹಾಲು, ಮೊಸರು, ತರಕಾರಿ ಹಾಗೂ ಕೆಲಸಗಾರರು ಬೇಕು. ಆದರೆ, ಅಲ್ಲಿನ ಕನ್ನಡಿಗರ ಹಿತ ಮಾತ್ರ ಬೇಡವೇ’ ಎಂದು ಪ್ರಶ್ನಿಸಿದರು.

‘ಸಂತ್ರಸ್ತ ಕನ್ನಡಿಗರಿಗೆ ಗೋವಾ ಸರ್ಕಾರ ಬೇರೆಡೆ ಸೂರು ನಿರ್ಮಿಸಿಕೊಡಬೇಕು. ಇಲ್ಲವೇ ಅಗತ್ಯ ನೆರವು ನೀಡಬೇಕು. ರಾಜ್ಯ ಸರ್ಕಾರವು ಅವರಿಗೆ ಪರಿಹಾರವಾಗಿ ₹ 2 ಕೋಟಿ ನೀಡಬೇಕು. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಇಂಥ ಘಟನೆಗಳು ಮರುಕಳಿಸದಂತೆ ಗೋವಾಗೆ ಸೂಚನೆ ನೀಡಬೇಕು. ಮತ್ತೆ ಕನ್ನಡಿಗರ ಮೇಲೆ ದೌರ್ಜನ್ಯ ನಡೆದರೆ ಸರ್ಕಾರವನ್ನು ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು.

ಕನ್ನಡಿಗರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಇದೇ 14ರಂದು ಕಾರವಾರದ ಕಡೆಯಿಂದ ಗೋವಾಗೆ ಮುತ್ತಿಗೆ ಹಾಕುತ್ತೇವೆ. ಈ ಸಂಬಂಧ ರಾಜ್ಯದಾದ್ಯಂತ ಬೃಹತ್ ಪ್ರತಿಭಟನೆ ನಡೆಸುತ್ತೇವೆ.
– ವಾಟಾಳ್ ನಾಗರಾಜ್, ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.