ADVERTISEMENT

ರಾಜ್ಯಕ್ಕೆ ಬೃಹತ್‌ ಚರ್ಮೋದ್ಯಮ ಘಟಕ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 19:38 IST
Last Updated 23 ಡಿಸೆಂಬರ್ 2013, 19:38 IST

ಬೆಂಗಳೂರು: ರಾಜ್ಯಕ್ಕೆ ಬೃಹತ್‌ ಚರ್ಮೋದ್ಯಮ ಘಟಕ ಮಂಜೂರು ಮಾಡಲಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಆನಂದ ಶರ್ಮಾ ತಿಳಿಸಿದರು.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಧಿಕಾರಿಗಳು, ಉದ್ಯಮಿಗಳೊಂದಿಗೆ ಚರ್ಚೆ ನಡೆಸಿದ ನಂತರ ಸೋಮವಾರ ಇಲ್ಲಿ ಸುದ್ದಿಗಾರರಿಗೆ ಅವರು ಈ ವಿಷಯ ತಿಳಿಸಿದರು.ದೇಶದಲ್ಲಿ ಒಟ್ಟು ಏಳು ಚರ್ಮೋದ್ಯಮ ಘಟಕಗಳನ್ನು ಸ್ಥಾಪಿಸಲಾಗುತ್ತಿದ್ದು, ಒಂದನ್ನು ರಾಜ್ಯದಲ್ಲಿ ಸ್ಥಾಪಿಸಲಾಗುವುದು. ಸ್ಥಳವನ್ನು ರಾಜ್ಯ ಸರ್ಕಾರವೇ ಗುರುತಿಸಬೇಕು ಎಂದರು.

ಬೆಂಗಳೂರು – ಚೆನ್ನೈ ನಡುವಿನ ಕಾರಿಡಾರನ್ನು ಚಿತ್ರದುರ್ಗವರೆಗೂ ವಿಸ್ತರಿಸುವಂತೆ ಕೋರಿ ಪ್ರಸ್ತಾವನೆ ಬಂದಿದೆ. ಇದನ್ನು ಗಂಭೀರವಾಗಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಣ್ಣು ಮತ್ತು ತರಕಾರಿಗಳನ್ನು ರಫ್ತು ಮಾಡಲು ಅವಕಾಶ ನೀಡಲಾಗಿದೆ. ಗುಲ್ಬರ್ಗ – ಬೀದರ್‌ನಲ್ಲಿ ಹೂಡಿಕೆದಾರರ ವಲಯ ಸ್ಥಾಪನೆಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ಪ್ರಕಟಿಸಿದರು.

ವೈಟ್‌ಫೀಲ್ಡ್‌ನಲ್ಲಿರುವ ಕರ್ನಾಟಕ ವ್ಯಾಪಾರ ಉತ್ತೇಜನ ಸಂಸ್ಥೆಗೆ 12ನೇ ಪಂಚವಾರ್ಷಿಕ ಯೋಜನೆಯಲ್ಲಿ ₨ 20 ಕೋಟಿ ನೀಡಲಾಗುವುದು. ಸಂಶೋಧನೆ ಮತ್ತು ತರಬೇತಿ ಕಾರ್ಯಗಳಿಗೆ ಇದನ್ನು ಬಳಸಿಕೊಳ್ಳಬಹುದಾಗಿದೆ ಎಂದರು. ಜನವರಿ 27ರಿಂದ 29ರವರೆಗೆ ಬೆಂಗಳೂರಿನಲ್ಲಿ ಪಾಲುದಾರಿಕೆ ಸಮ್ಮೇಳನ ನಡೆಯಲಿದ್ದು, ಪ್ರಧಾನಿ ಡಾ.ಮನಮೋಹನ್‌ಸಿಂಗ್‌, ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಕರೆತರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶರ್ಮಾ ಅವರಿಗೆ ಮನವಿ ಮಾಡಿದರು.
ಮೂಲಸೌಕರ್ಯ ಸಚಿವ ಎಸ್‌.ಆರ್‌.ಪಾಟೀಲ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎನ್‌.ವಿದ್ಯಾಶಂಕರ್‌ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.