ADVERTISEMENT

ರಾಜ್ಯದಲ್ಲಿ ಗೀತಂ ಡೀಮ್ಡ ವಿವಿ ಶೈಕ್ಷಣಿಕ ಚಟುವಟಿಕೆ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 18:30 IST
Last Updated 4 ಅಕ್ಟೋಬರ್ 2012, 18:30 IST

ಬೆಂಗಳೂರು: ಆಂಧ್ರಪ್ರದೇಶದ ಪ್ರತಿಷ್ಠಿತ `ಗೀತಂ~ (ಗಾಂಧಿ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್) ಡೀಮ್ಡ ವಿಶ್ವವಿದ್ಯಾಲಯವು ಇದೀಗ ಕರ್ನಾಟಕದಲ್ಲಿಯೂ ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ನಾಗದೇನಹಳ್ಳಿಯಲ್ಲಿ ಹೊಸದಾಗಿ ಎಂಜಿನಿಯರಿಂಗ್ ಮತ್ತು ಆಡಳಿತ ನಿರ್ವಹಣೆ ಕಾಲೇಜು ಆರಂಭಿಸಿದೆ.

ಸುಮಾರು 50 ಎಕರೆ ಜಾಗದಲ್ಲಿ ತಲೆಯೆತ್ತಿರುವ ವಿವಿ ಕ್ಯಾಂಪಸ್‌ನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನಾಲ್ಕು ಬಿ.ಟೆಕ್ ಹಾಗೂ ಎಂಬಿಎ ಕೋರ್ಸ್ ಪ್ರಾರಂಭಿಸಲಾಗುತ್ತಿದೆ ಎಂದು `ಗೀತಂ~ ವಿವಿ ಕುಲಪತಿ ಪ್ರೊ.ಜಿ. ಸುಬ್ರಹ್ಮಣ್ಯಂ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಸಕ್ತ ವರ್ಷ ಎಂಜಿನಿಯರಿಂಗ್ ವಿಭಾಗದಲ್ಲಿ ಇಸಿಇ, ಸಿಎಸ್‌ಇ, ಐಟಿ, ಇಇಇ ಕೋರ್ಸ್‌ಗಳು ಹಾಗೂ ಎಂಬಿಎ ಕೋರ್ಸ್‌ಗೆ ಪ್ರವೇಶ ಕಲ್ಪಿಸಲಾಗುತ್ತಿದೆ. ಸಿಇಟಿ ಜತೆಗೆ, 2012ನೇ ಸಾಲಿನ `ಗೀತಂ~ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದ ವಿದ್ಯಾರ್ಥಿಗಳು ಇದೇ 6ರೊಳಗೆ ಅರ್ಜಿ ಸಲ್ಲಿಸಬಹುದು. ಅ. 10ರಂದು ಕೌನ್ಸೆಲಿಂಗ್ ನಡೆಯಲಿದೆ. ಅ. 11ರ ನಂತರ ತರಗತಿಗಳು ಪ್ರಾರಂಭವಾಗಲಿವೆ ಎಂದು ಅವರು ವಿವರಿಸಿದರು.

ಎಂಜಿನಿಯರಿಂಗ್ ವಿಭಾಗದಲ್ಲಿ ನಾಲ್ಕು ಕೋರ್ಸ್‌ಗಳಿಗೆ ತಲಾ 120ರಂತೆ ಒಟ್ಟು 480 ಅಭ್ಯರ್ಥಿಗಳಿಗೆ ಪ್ರವೇಶಾವಕಾಶ ನೀಡಲಾಗುವುದು. ಎಂಬಿಎಗೆ 60 ಸೀಟುಗಳಿಗೆ ಪ್ರವೇಶ ಒದಗಿಸಲಾಗುವುದು. ಕರ್ನಾಟಕದ ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ ಎಲ್ಲ ಕೋರ್ಸ್‌ಗಳಲ್ಲಿ ಶೇ 25ರಷ್ಟು ಸೀಟುಮೀಸಲಿಡಲಾಗುವುದು ಎಂದು ತಿಳಿಸಿದರು.

ಮೂಲಭೂತ ಸಂಶೋಧನಾ ಕೇಂದ್ರ: ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡ ಒಪ್ಪಂದದಂತೆ ವಿವಿ ಕ್ಯಾಂಪಸ್ ಸನಿಹದಲ್ಲಿಯೇ `ಗೀತಂ~ ಮೂಲಭೂತ ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಜೈವಿಕ ತಂತ್ರಜ್ಞಾನ, ಫಾರ್ಮಸಿ, ನ್ಯಾನೊ ಟೆಕ್ನಾಲಜಿ, ಫುಡ್ ಟೆಕ್ನಾಲಜಿ ಕೇಂದ್ರಗಳ ಸ್ಥಾಪನೆಗೆ ಹಂತ-ಹಂತವಾಗಿ 1000 ಕೋಟಿ ಬಂಡವಾಳ ಹೂಡಲಾಗುತ್ತದೆ ಎಂದು ಕುಲಪತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.