ADVERTISEMENT

ರಾಜ್ಯದಲ್ಲಿ 30 ನಕ್ಸಲರು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2012, 19:30 IST
Last Updated 26 ಮಾರ್ಚ್ 2012, 19:30 IST

ಬೆಂಗಳೂರು: ರಾಜ್ಯದ ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ 30 ಮಂದಿ ನಕ್ಸಲರು    ಇದ್ದು, ಶ್ರೀಲಂಕಾ ಮತ್ತು ಆಂಧ್ರದ ವಲಸಿಗರೂ ಅವರಲ್ಲಿ ಸೇರಿಕೊಂಡಿದ್ದಾರೆ ಎಂದು ಗೃಹ ಸಚಿವ ಆರ್.ಅಶೋಕ ವಿಧಾನ ಪರಿಷತ್‌ಗೆ ತಿಳಿಸಿದರು.

ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಅಶ್ವತ್ಥನಾರಾಯಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, `ಇತ್ತೀಚೆಗೆ ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ನಕ್ಸಲರು ಪತ್ತೆಯಾಗಿದ್ದರು. 30 ಮಂದಿ ತಂಡದಲ್ಲಿರುವುದು ದೃಢಪಟ್ಟಿದೆ. ವಲಸಿಗರು ಇರುವುದು ಕೂಡ ಖಚಿತವಾಗಿದೆ~ ಎಂದರು.

ಬಹಳ ದಿನಗಳಿಂದ ನಕ್ಸಲರು- ಪೊಲೀಸ್ ಪಡೆಗಳಿಗೆ ಮುಖಾಮುಖಿ ಆಗಿರಲಿಲ್ಲ. ಆದರೆ, ಈ ಬಾರಿ ಖಚಿತ ಮಾಹಿತಿ ಆಧರಿಸಿ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆಗೆ ಇಳಿದಿದ್ದ ವೇಳೆ ಎರಡು ಬಾರಿ ಮುಖಾಮುಖಿ ಆಗಿದ್ದಾರೆ.

ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನಕ್ಸಲ್ ನಿಗ್ರಹ ಪಡೆಗೆ ಒದಗಿಸಲಾಗಿದೆ. ಐಜಿಪಿ ಅಲೋಕ್‌ಕುಮಾರ್ ಅವರೇ ಸ್ವತಃ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದ್ದಾರೆ. ನಕ್ಸಲರನ್ನು ಹತ್ತಿಕ್ಕಲು ಸರ್ಕಾರ ಸಂಪೂರ್ಣವಾಗಿ ಸಜ್ಜಾಗಿದೆ ಎಂದು ತಿಳಿಸಿದರು.

ಶರಣಾಗಿ ಮುಖ್ಯವಾಹಿನಿಗೆ ಬರುವವರಿಗೆ ಸರ್ಕಾರ ಅಗತ್ಯ ನೆರವು ನೀಡಲಿದೆ. ಆದರೆ, ಬಂದೂಕಿನ ಮೂಲಕ ಸರ್ಕಾರದ ವಿರುದ್ಧ ಸಮರ ಸಾರುವವರಿಗೆ ಬಂದೂಕಿನ ಮೂಲಕವೇ ಉತ್ತರ ನೀಡಲಾಗುವುದು ಎಂದರು.

ಸಚಿವರ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅಶ್ವತ್ಥನಾರಾಯಣ ಮತ್ತು ಗಣೇಶ್ ಕಾರ್ಣಿಕ್, `ಪೊಲೀಸರಿಗಿಂತ ನಕ್ಸಲರೇ ಹೆಚ್ಚು ಅತ್ಯಾಧುನಿಕ ಶಸ್ತ್ರಾಸ್ತ್ರ ಹೊಂದಿದ್ದಾರೆ. ನಕ್ಸಲ್‌ಪೀಡಿತ ಪ್ರದೇಶದ ಅಭಿವೃದ್ಧಿ ವಿಷಯದಲ್ಲೂ ಸರ್ಕಾರ ಸೂಕ್ರ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.