ADVERTISEMENT

ರಾಜ್ಯದ 1800 ಶಿವ ದೇಗುಲಗಳಿಗೆ ಗಂಗಾಜಲ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 19:55 IST
Last Updated 26 ಫೆಬ್ರುವರಿ 2011, 19:55 IST

ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆಗೆ ಸೇರಿದ ಮತ್ತು ಖಾಸಗಿ ಶಿವ ದೇವಸ್ಥಾನಗಳಲ್ಲಿ ಶಿವರಾತ್ರಿಯಂದು ಗಂಗಾಜಲ ಹಂಚುವ ಉದ್ದೇಶದಿಂದ ಮಂಗಳವಾರ ಬೆಳಿಗ್ಗೆ ಇಲ್ಲಿನ ಚಾಮರಾಜಪೇಟೆಯಲ್ಲಿರುವ ರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಗಂಗಾಜಲ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಜ್ಯ ಮುಜರಾಯಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಎನ್. ಕೃಷ್ಣಯ್ಯ ಶೆಟ್ಟಿ, ‘ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರು ಮಂಗಳವಾರ ಬೆಳಿಗ್ಗೆ ರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಗಂಗಾಜಲಕ್ಕೆ ಪೂಜೆ ಸಲ್ಲಿಸಲಿದ್ದಾರೆ. ನಂತರ ಅಲ್ಲಿಂದ 28 ವಾಹನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಗಂಗಾಜಲ ಕೊಂಡೊಯ್ಯಲಾಗುವುದು’ ಎಂದರು.

‘ಹರಿದ್ವಾರದ ಸಮೀಪ ಇರುವ ಬ್ರಹ್ಮಕುಂಡದಿಂದ 50 ಸಾವಿರ ಲೀಟರ್ ಗಂಗಾಜಲವನ್ನು ಎರಡು ಟ್ಯಾಂಕರ್‌ಗಳಲ್ಲಿ ತರಲಾಗುತ್ತಿದೆ. ಮಂಗಳವಾರ ಸಂಜೆಯ ವೇಳೆಗೆ ರಾಜ್ಯದ 1,800 ಶಿವ ದೇವಸ್ಥಾನಗಳಿಗೆ ಗಂಗಾಜಲ ವಿತರಿಸಲಾಗುವುದು. ಇದಕ್ಕೆ ವೆಚ್ಚವಾಗುವ 10 ಲಕ್ಷ ರೂಪಾಯಿಗಳನ್ನು ನಮ್ಮ ಕುಟುಂಬವೇ ಭರಿಸುತ್ತಿದೆ’ ಎಂದರು.

ವಾರ್ಷಿಕ 350ರಿಂದ 400 ಕೋಟಿ ರೂಪಾಯಿ ಆದಾಯ ತರುವಷ್ಟು ಆಸ್ತಿ ಮುಜರಾಯಿ ಇಲಾಖೆಗೆ ಬೆಂಗಳೂರಿನಲ್ಲಿದೆ, ಅವನ್ನೆಲ್ಲ ದುರಸ್ತಿ ಮಾಡಬೇಕು ಎಂದರು.

ಶಿಕ್ಷಣ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಆದ್ಯತೆ- ಎಬಿವಿಪಿ
ಬೆಂಗಳೂರು: ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ದೊರೆತಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರತಿಕ್ರಿಯೆ ನೀಡಿದೆ.

ಉನ್ನತ ಶಿಕ್ಷಣಕ್ಕೆ ರೂ 2002 ಕೋಟಿ ಸೇರಿದಂತೆ ಒಟ್ಟು ಶಿಕ್ಷಣ ರಂಗಕ್ಕೆ ರೂ 12,850 ಕೋಟಿ ಮೀಸಲಿಟ್ಟಿರುವುದು, ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಮೇಲ್ದರ್ಜೆಗೆ ಏರಿಸಲು ರೂ 5 ಕೋಟಿ, ಸರ್ಕಾರಿ ಆಯುರ್ವೇದ ಕಾಲೇಜು ಸ್ಥಾಪನೆಗೆ ಒಪ್ಪಿಗೆ ನೀಡಿರುವುದು, ಎಸ್.ಸಿ/ಎಸ್.ಟಿ ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಮಾಸಿಕ ವೇತನ ರೂ 850ಕ್ಕೆ ಹೆಚ್ಚಳ ಮಾಡಿರುವುದು ಹಾಗೂ ಇತರೆ ಕ್ರಮಗಳು ಸ್ವಾಗತಾರ್ಹ ಎಂದು ಎಬಿವಿಪಿ ರಾಜ್ಯ ಘಟಕದ ಅಧ್ಯಕ್ಷ ಡಾ.ಶ್ರೀನಿವಾಸ ಬಳ್ಳಿ, ಕಾರ್ಯದರ್ಶಿ ವಿನಯ್ ಬಿದರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.