ಬೆಂಗಳೂರು: `ವರನಟ ಡಾ.ರಾಜ್ ಕುಮಾರ್ ಅವರ ನೆನಪುಗಳೊಂದಿಗೆ ಭವಿಷ್ಯದ ಸಿನಿಮಾವನ್ನು ರೂಪಿಸುವ ಬಗ್ಗೆ ಕನಸು ಕಾಣಬೇಕಿದೆ~ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ.ಎಸ್.ನಾಗಾಭರಣ ತಿಳಿಸಿದರು.
ಅಕಾಡೆಮಿ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ್ ಅವರು ಸೆರೆ ಹಿಡಿದ ಡಾ.ರಾಜ್ ಅವರ ಛಾಯಾಚಿತ್ರ ಪ್ರದರ್ಶನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
`ಡಾ.ರಾಜ್ ಅವರ ಚಿತ್ರರಂಗಕ್ಕೂ ಈಗಿನ ಚಿತ್ರರಂಗಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಛಾಯಾಗ್ರಹಣ ಎಂಬುದು ಹಳೆಯ ನೆನಪುಗಳ ಪ್ರತಿಬಿಂಬವಾಗಿದೆ. ಹಾಗೆಯೇ ಭವಿಷ್ಯದ ಬಗ್ಗೆ ಕನಸು ಕಾಣಲು ಕೂಡ ಇದು ಸಹಕಾರಿಯಾಗಿದೆ~ ಎಂದು ಹೇಳಿದರು.
`ಲಕ್ಷ್ಮೀನಾರಾಯಣ ಅವರ ಚಿತ್ರಗಳು ವೈವಿಧ್ಯಮಯವಾಗಿವೆ. ರಾಜ್ ಅವರ ಜೀವನದ ವಿವಿಧ ಮುಖಗಳನ್ನು ಅವು ಪ್ರಸ್ತುತ ಪಡಿಸಿವೆ. ಭಾನುವಾರದವರೆಗೆ ಪ್ರದರ್ಶನ ನಡೆಯಲಿದ್ದು ಹೆಚ್ಚು ಜನರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಿದೆ~ ಎಂದರು.
ಚಿತ್ರನಟ ಪುನೀತ್ ರಾಜ್‌ಕುಮಾರ್ ಮಾತನಾಡಿ, `ನನ್ನ ತಂದೆ ರಾಜ್ ಅವರ ಜೀವನದ ಅನೇಕ ಸಂಗತಿಗಳನ್ನು ಪ್ರದರ್ಶನ ಬಿಂಬಿಸಿದೆ. ಸ್ವತಃ ನನಗೇ ಗೊತ್ತಿರದ ಅನೇಕ ಛಾಯಾಚಿತ್ರಗಳು ಪ್ರದರ್ಶನದಲ್ಲಿವೆ. ಹಳೆಯ ನೆನಪುಗಳನ್ನು ಮೆಲುಕು ಹಾಕಲು ಅಕಾಡೆಮಿ ಸಹಾಯ ಮಾಡಿದೆ~ ಎಂದು ಅವರು ತಿಳಿಸಿದರು.
`ರಾಜ್ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳಿನಾದ್ಯಂತ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ರಾಜ್ ಬಗ್ಗೆ ಜನರಿಗೆ ಇರುವ ಅಭಿಮಾನಕ್ಕೆ ನಾನು ಚಿರಋಣಿಯಾಗಿದ್ದೇನೆ~ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ರಮೇಶ್ ಬಿ ಝಳಕಿ ಮಾತನಾಡಿ `ಪ್ರದರ್ಶನದಲ್ಲಿ ಕಪ್ಪು ಬಿಳುಪು ಚಿತ್ರಗಳ ಮೂಲಕ ರಾಜ್ ಅವರ ವೈವಿಧ್ಯಮಯ ಚಿತ್ರಗಳನ್ನು ಬಿಂಬಿಸಿರುವುದು ಸಂತಸದ ಸಂಗತಿಯಾಗಿದೆ. ಇದೊಂದು ಅಪರೂಪದ ಚಿತ್ರಗಳ ಅದ್ಭುತ ಸಂಗ್ರಹವಾಗಿದೆ~ ಎಂದು ಹೇಳಿದರು.ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ್, ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಜಗನ್ನಾಥ್ ಪ್ರಕಾಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.