ADVERTISEMENT

ರಾಹುಲ್ ಪಟ್ಟಾಭಿಷೇಕ: ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2013, 19:39 IST
Last Updated 20 ಜನವರಿ 2013, 19:39 IST
ರಾಹುಲ್ ಗಾಂಧಿ ಅವರು ಎಐಸಿಸಿ ಉಪಾಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಕರ್ತರು ಭಾನುವಾರ ಪಕ್ಷದ ಕಚೇರಿ ಮುಂದೆ ಸಿಹಿ ಹಂಚಿ ಸಂಭ್ರಮಪಟ್ಟರು.
ರಾಹುಲ್ ಗಾಂಧಿ ಅವರು ಎಐಸಿಸಿ ಉಪಾಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಕರ್ತರು ಭಾನುವಾರ ಪಕ್ಷದ ಕಚೇರಿ ಮುಂದೆ ಸಿಹಿ ಹಂಚಿ ಸಂಭ್ರಮಪಟ್ಟರು.   

ಬೆಂಗಳೂರು: ರಾಹುಲ್ ಗಾಂಧಿ ಅವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಕರ್ತರು ಭಾನುವಾರ ಸಂಭ್ರಮ ಆಚರಿಸಿದರು.
ಪಕ್ಷದ ಇಲ್ಲಿನ ಕಚೇರಿ ಮುಂದೆ ಸೇರಿದ ಕಾರ್ಯಕರ್ತರು ಮತ್ತು ಮುಖಂಡರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂತೋಷ ವ್ಯಕ್ತಪಡಿಸಿದರು. ರಾಹುಲ್ ಪರ ಘೋಷಣೆ ಕೂಗಿದರು.

ಪಕ್ಷದ ಬೆಂಗಳೂರು ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್ ಗುಂಡೂರಾವ್, ನಗರ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಟಿ.ಸೋಮಶೇಖರ್, ಮುಖಂಡರಾದ ವೀರಣ್ಣ ಮತ್ತಿಕಟ್ಟಿ, ಕೆ.ಜೆ.ಜಾರ್ಜ್, ಡಾ.ಎ.ಬಿ.ಮಾಲಕರೆಡ್ಡಿ, ಸಿದ್ದು ನ್ಯಾಮಗೌಡ, ಎಚ್.ಎಂ.ರೇವಣ್ಣ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸದಸ್ಯರು ಮತ್ತು ವಿವಿಧ ಘಟಕಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.

`ನಿರ್ಣಾಯಕ ಪಾತ್ರ': `ದೇಶದಲ್ಲಿ ಯುವಶಕ್ತಿಯ ಪಾತ್ರ ನಿರ್ಣಾಯಕ. ರಾಹುಲ್ ಅವರನ್ನು ಎಐಸಿಸಿ ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವ ಮೂಲಕ ಯುವಶಕ್ತಿಗೆ ನಾಯಕತ್ವ ಕೊಟ್ಟಿರುವುದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇನೆ' ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

`ರಾಹುಲ್ ಅವರು ಭವಿಷ್ಯ ಭಾರತದ ಭರವಸೆಯ ನಾಯಕರು. ಅವರೇ ಪಕ್ಷದ ನಾಯಕತ್ವ ವಹಿಸಿಕೊಳ್ಳಬೇಕು ಎಂದು ಬಹಳ ದಿನದಿಂದ ಕಾಯುತ್ತಿದ್ದೆವು. ಈಗ ಆ ಕನಸು ಈಡೇರಿದೆ' ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.