ADVERTISEMENT

ರೆಕ್ಟರ್ ಕೊಲೆ: ಆರೋಪಿಗಳ ಬಂಧನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 19:50 IST
Last Updated 21 ಏಪ್ರಿಲ್ 2013, 19:50 IST

ಬೆಂಗಳೂರು: ಯಶವಂತಪುರದಲ್ಲಿನ ಸೇಂಟ್ ಪೀಟರ್ಸ್‌ ಪೊಂಟಿಫಿಕಲ್ ಸೆಮಿನರಿಯ ರೆಕ್ಟರ್ (ಮುಖ್ಯಸ್ಥ) ಕೆ.ಜೆ. ಥಾಮಸ್ ಅವರ ಕೊಲೆ ಪ್ರಕರಣದ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು ಎಂದು ಆರ್ಚ್ ಬಿಷಪ್‌ನ ಡಾ.ಬರ್ನಾಡ್ ಮೋರಾಸ್ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಥಾಮಸ್ ಅವರ ಕೊಲೆ ನಡೆದು 19 ದಿನಗಳು ಕಳೆದರೂ, ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿಲ್ಲ. ಅವರ ತಲೆ, ಮುಖ ಮತ್ತು ಎದೆ ಭಾಗಕ್ಕೆ ಬಲವಾಗಿ ಹೊಡೆದು ಹತ್ಯೆ ಮಾಡಲಾಗಿದೆ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿದೆ. ಯಾರಿಗೂ ಕೇಡು ಬಯಸದ ಥಾಮಸ್ ಅವರನ್ನು ಯಾರು, ಯಾವ ಉದ್ದೇಶಕ್ಕಾಗಿ ಕೊಲೆ ಮಾಡಿದರು ಎಂಬುದು ಶೀಘ್ರವೇ ಗೊತ್ತಾಗಬೇಕು' ಎಂದು ಆಗ್ರಹಿಸಿದರು.

ಥಾಮಸ್ ಅವರು ಸೆಮಿನರಿಯಲ್ಲಾಗಲಿ, ವೈಯಕ್ತಿಕ ಬದುಕಿನಲ್ಲಾಗಲಿ ಯಾರೊಂದಿಗೂ ವೈರತ್ವ ಇಟ್ಟುಕೊಂಡಿರಲಿಲ್ಲ. ಅವರ ಕೊಲೆ ಕಳ್ಳತನದ ಹಿನ್ನೆಲೆಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ, ದುಷ್ಕರ್ಮಿಗಳು ಅವರ ಕೊಠಡಿಯಲ್ಲಿದ್ದ ಚಿನ್ನದ ನಾಣ್ಯಗಳು, ಕಂಪ್ಯೂಟರ್ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ದೋಚಿಲ್ಲ. ಬದಲಾಗಿ ಅಲ್ಮೆರಾದಲ್ಲಿದ್ದ ಕೆಲ ದಾಖಲೆ ಪತ್ರಗಳಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದರು.

2012ರ ಫೆ.1ರಂದು ಥಾಮಸ್ ಬರೆದಿಟ್ಟಿರುವ ವಿಲ್ ಇತ್ತೀಚೆಗೆ ಅವರ ಕೊಠಡಿಯಲ್ಲೇ ಸಿಕ್ಕಿದೆ. ವಿವಿಧ ಬ್ಯಾಂಕ್‌ಗಳಲ್ಲಿ ತಮ್ಮ ಖಾತೆಯಲ್ಲಿರುವ ಹಣ ಸೇರಿದಂತೆ ತಮಗೆ ಅನ್ವಯಿಸಿದ ಎಲ್ಲಾ ಸ್ಥಿರ ಮತ್ತು ಚರಾಸ್ತಿಗಳು ಸೆಮಿನರಿಗೆ ಸೇರಬೇಕು ಎಂದು ಥಾಮಸ್ ಆ ವಿಲ್‌ನಲ್ಲಿ ಬರೆದಿಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಸೆಮಿನರಿಯ ಹಿರಿಯ ಹಾಗೂ ಕಿರಿಯ ಫಾದರ್‌ಗಳು ತನಿಖೆಗೆ ಪೊಲೀಸರೊಂದಿಗೆ ಸಹಕರಿಸುತ್ತಿಲ್ಲ ಎಂಬ ಆರೋಪವನ್ನು ತಳ್ಳಿ ಹಾಕಿದ ಬರ್ನಾಡ್ ಮೋರಾಸ್, ಘಟನೆ ನಡೆದ ನಂತರ ಸೆಮಿನರಿಯ ಪ್ರತಿಯೊಬ್ಬರು ತಮಗೆ ಗೊತ್ತಿರುವ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ. ಅಲ್ಲದೇ, ಪ್ರಕರಣದ ತನಿಖೆಯನ್ನು ಚುರುಕುಗೊಳಿಸಬೇಕೆಂದು ರಾಜ್ಯಪಾಲರಿಗೆ ಎರಡು ಬಾರಿ ಮನವಿ ಸಲ್ಲಿಸಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.