ADVERTISEMENT

ರೆಕ್ಟರ್ ಕೊಲೆ ಪ್ರಕರಣ: ತೀವ್ರ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2013, 20:14 IST
Last Updated 12 ಜೂನ್ 2013, 20:14 IST

ಬೆಂಗಳೂರು: ಮಲ್ಲೇಶ್ವರದ ಸೇಂಟ್ ಪೀಟರ್ಸ್‌ ಪೊಂಟಿಫಿಕಲ್ ಸೆಮಿನರಿಯ ರೆಕ್ಟರ್ (ಮುಖ್ಯಸ್ಥ) ಕೆ.ಜೆ.ಥಾಮಸ್ ಕೊಲೆ ಪ್ರಕರಣ ಸಂಬಂಧ ಪೊಲೀಸರು ಸೆಮಿನರಿಯ ಸಹಾಯಕ ಪಾದ್ರಿ ಪ್ಯಾಟ್ರಿಕ್ ಕ್ಸೇವಿಯರ್, ಅಡುಗೆ ಕೆಲಸಗಾರರಾದ ರಾಜ ಮತ್ತು ರೆಡ್ಡಿ ಎಂಬುವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಥಾಮಸ್ ಅವರು ಕೊಲೆಯಾಗಿ ಬಿದ್ದಿರುವುದನ್ನು ಮೊದಲು ನೋಡಿದ್ದ ಪ್ಯಾಟ್ರಿಕ್ ಕ್ಸೇವಿಯರ್ ಮತ್ತು ಥಾಮಸ್‌ರ ಕೊಠಡಿ ಪಕ್ಕದ ಅಡುಗೆ ಕೋಣೆಯಲ್ಲಿ ಮಲಗಿದ್ದ ರಾಜ ಹಾಗೂ ರೆಡ್ಡಿ ಅವರ ಮೇಲೆ ಅನುಮಾನವಿದೆ. ಆದ್ದರಿಂದ ಆ ಮೂವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ' ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

`ಇತ್ತೀಚೆಗೆ ಆ ಮೂರು ಮಂದಿಯನ್ನು ಮಿದುಳು ವಿಶ್ಲೇಷಣೆ ಮತ್ತು ಸುಳ್ಳು ಪತ್ತೆ ಪರೀಕ್ಷೆಗೆ (ಪಾಲಿಗ್ರಫಿ) ಒಳಪಡಿಸಲಾಯಿತು. ಅವರು ಘಟನಾ ದಿನ ನೀಡಿದ್ದ ಹೇಳಿಕೆಗಳು ಮತ್ತು ಪರೀಕ್ಷೆಯ ಬಳಿಕ ನೀಡಿದ ಹೇಳಿಕೆಗಳು ತದ್ವಿರುದ್ಧವಾಗಿವೆ. ಇದರಿಂದಾಗಿ ಅವರಿಗೆ ಮಂಪರು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ' ಎಂದು  ಮಾಹಿತಿ ನೀಡಿದ್ದಾರೆ.

ಪ್ಯಾಟ್ರಿಕ್ ಅವರು ಬುಧವಾರ ನಗರದ ಒಂದನೇ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆಗೆ ಖುದ್ದು ಹಾಜರಾಗಿ ಘಟನೆ ಸಂಬಂಧ ಲಿಖಿತ ಹೇಳಿಕೆ ಕೊಟ್ಟಿದ್ದಾರೆ. ನ್ಯಾಯಾಲಯ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ. ಮಂಪರು ಪರೀಕ್ಷೆಯನ್ನು ನ್ಯಾಯಾಲಯ ಸಾಕ್ಷ್ಯವಾಗಿ ಪರಿಗಣಿಸುವುದಿಲ್ಲ. ಬದಲಿಗೆ ತನಿಖೆಗೆ ನೆರವು ಪಡೆಯುವ ನಿಟ್ಟಿನಲ್ಲಿ ಮಂಪರು ಪರೀಕ್ಷೆ ಬಳಸಿಕೊಳ್ಳಬಹುದು ಮತ್ತು ಸಾಂದರ್ಭಿಕ ಸಾಕ್ಷ್ಯಗಳು ಯಾವ ವ್ಯಕ್ತಿಯ ಮೇಲೆ ಅನುಮಾನಕ್ಕೆ ಎಡೆ ಮಾಡಿಕೊಡುತ್ತವೆಯೊ ಆ ವ್ಯಕ್ತಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎನ್ನಲಾಗಿದೆ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.